ಶ್ರೀಕ್ಷೇತ್ರದಿಂದ ಮಹಿಳೆಯರು ಮುಖ್ಯವಾಹಿನಿಗೆ ಕರೆತರುವ ಕೆಲಸ: ತಿಲಕ್ ರಾಜ್

| Published : Jul 20 2025, 01:15 AM IST

ಶ್ರೀಕ್ಷೇತ್ರದಿಂದ ಮಹಿಳೆಯರು ಮುಖ್ಯವಾಹಿನಿಗೆ ಕರೆತರುವ ಕೆಲಸ: ತಿಲಕ್ ರಾಜ್
Share this Article
  • FB
  • TW
  • Linkdin
  • Email

ಸಾರಾಂಶ

ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ಮಹಿಳೆಯರಿಗೆ ಸ್ವಚ್ಛತೆ, ಆರೋಗ್ಯ, ಕಾನೂನು, ಸರ್ಕಾರಿ ಸೌಲಭ್ಯ, ಸ್ವ-ಉದ್ಯೋಗ ಮುಂತಾದ ವಿಚಾರಗಳ ಬಗ್ಗೆ ಪ್ರತಿ ತಿಂಗಳು ಮಾಸಿಕ ಸಭೆಗಳಲ್ಲಿ ಮಾಹಿತಿಯನ್ನು ಸಂಪನ್ಮೂಲ ವ್ಯಕ್ತಗಳಿಂದ ಕೊಡಿಸಲಾಗುತ್ತಿದೆ. ಶ್ರೀಕ್ಷೇತ್ರ ಧರ್ಮಸ್ಥಳದ ಡಾ.ವೀರೇಂದ್ರ ಹೆಗ್ಗಡೆ ಮತ್ತು ಅವರ ಧರ್ಮಪತ್ನಿ ಡಾ.ಹೇಮಾವತಿ ಅಮ್ಮನವರ ಕನಸನ್ನು ಯೋಜನೆ ಮೂಲಕ ನನಸು ಮಾಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಕೆಲಸವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ ಎಂದು ತಾಲೂಕು ಯೋಜನಾಧಿಕಾರಿ ತಿಲಕ್ ರಾಜ್ ತಿಳಿಸಿದರು.

ತಾಲೂಕಿನ ಬೂಕನಕೆರೆ ವಲಯದ ಬೊಮ್ಮಲಾಪುರ ಕಾರ್ಯಕ್ಷೇತ್ರದಲ್ಲಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ನಡೆದ ಸಾಮಾಜಿಕ ಅರಿವಿನ ಬೀದಿ ನಾಟಕ ಪ್ರದರ್ಶನದಲ್ಲಿ ಮಾತನಾಡಿ, ಉತ್ತಮ ಜೀವನ ಕಟ್ಟಿಕೊಳ್ಳಲು ಧರ್ಮಸ್ಥಳ ಯೋಜನೆ ಸಹಕಾರಿಯಾಗಿದೆ. ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದರು.

ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ಮಹಿಳೆಯರಿಗೆ ಸ್ವಚ್ಛತೆ, ಆರೋಗ್ಯ, ಕಾನೂನು, ಸರ್ಕಾರಿ ಸೌಲಭ್ಯ, ಸ್ವ-ಉದ್ಯೋಗ ಮುಂತಾದ ವಿಚಾರಗಳ ಬಗ್ಗೆ ಪ್ರತಿ ತಿಂಗಳು ಮಾಸಿಕ ಸಭೆಗಳಲ್ಲಿ ಮಾಹಿತಿಯನ್ನು ಸಂಪನ್ಮೂಲ ವ್ಯಕ್ತಗಳಿಂದ ಕೊಡಿಸಲಾಗುತ್ತಿದೆ. ಶ್ರೀಕ್ಷೇತ್ರ ಧರ್ಮಸ್ಥಳದ ಡಾ.ವೀರೇಂದ್ರ ಹೆಗ್ಗಡೆ ಮತ್ತು ಅವರ ಧರ್ಮಪತ್ನಿ ಡಾ.ಹೇಮಾವತಿ ಅಮ್ಮನವರ ಕನಸನ್ನು ಯೋಜನೆ ಮೂಲಕ ನನಸು ಮಾಡಲಾಗುತ್ತಿದೆ ಎಂದರು.

ಸ್ವಚ್ಛ ಗ್ರಾಮಗಳ ನಿರ್ಮಾಣದಿಂದ ಆರೋಗ್ಯಕರ ಭಾರತ ನಿರ್ಮಾಣ ಸಾಧ್ಯ. ಮೌಢ್ಯ ಮುಕ್ತ ಸಮಾಜದಿಂದ ಭಾರತ ಆರ್ಥಿಕ ಮತ್ತು ಸಾಮಾಜಿಕವಾಗಿ ಬಲಿಷ್ಠವಾಗಿರಲು ಸಾಧ್ಯ. ಇದನ್ನು ಮನಗಂಡು ನಮ್ಮ ಯೋಜನೆ ಮೂಲಕ ಬೀದಿ ನಾಟಕಗಳನ್ನು ಆಯೋಜಿಸಿ ಸಾಮಾಜಿಕ ಅರಿವು ಮೂಡಿಸಲಾಗುತ್ತಿದೆ ಎಂದರು.

ನಮ್ಮ ಧರ್ಮ, ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ನಮಗೆ ನಂಬಿಕೆ ಇರಬೇಕು. ಮೂಢನಂಬಿಕೆಗಳು ಇರಬಾರದು. ಇದರಿಂದ ನಮಗೆ ನಾವೇ ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುತ್ತೇವೆ. ಪರಿಸರ ಸ್ವಚ್ಛತೆ ಬಗ್ಗೆ ಈಗಲೂ ನಮ್ಮ ಗ್ರಾಮೀಣರಿಗೆ ಅರಿವಿನ ಕೊರತೆಯಿದೆ. ಶೌಚಾಲಯ ಬಳಕೆಯ ಬಗ್ಗೆ ಉದಾಸೀನತೆಯಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಭಾಷಣಗಳಿಗಿಂತಲೂ ನಾಟಕಗಳು ಹೆಚ್ಚು ಪರಿಣಾಮಕಾರಿಯಾಗಿರುವುದರಿಂದ ಧರ್ಮಸ್ಥಳ ಸಂಸ್ಥೆ ಬೀದಿ ನಾಟಕಗಳ ಮೂಲಕ ಸಾಮಾಜಿಕ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು. ನಿವೃತ್ತ ಶಿಕ್ಷಕರಾದ ಈರಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸ್ನೇಹಜೀವಿ ಕಲಾತಂಡದವರು ಬೀದಿ ನಾಟಕ ಪ್ರದರ್ಶನದ ಮೂಲಕ ಗ್ರಾಮ ಸ್ವಚ್ಛತೆ, ನೀರು ಮತ್ತು ನೈರ್ಮಲ್ಯ, ನೀರಿನ ಮಿತ ಬಳಕೆ, ಬಾಲ್ಯ ವಿವಾಹ, ಮೊಬೈಲ್ ಬಳಕೆ, ಸಾಮಾಜಿಕ ಜಾಲತಾಣಗಳ ಬಗೆಗಿನ ಅರಿವು, ಧರ್ಮಸ್ಥಳ ಸಂಸ್ಥೆಯ ನಮ್ಮೂರು - ನಮ್ಮ ಕೆರೆ, ವಾತ್ಸಲ್ಯ ಕಾರ್ಯಕ್ರಮ, ಮದ್ಯವರ್ಜನ ಶಿಬಿರಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ಯೋಜನೆ ವಲಯದ ಮೇಲ್ವಿಚಾರಕರಾದ ಪ್ರಕಾಶ್, ಮಹಿಳಾ ಸ್ವ-ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ನಂದಿನಿ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಅನಿತಾ, ಸೇವಾಪ್ರತಿನಿಧಿ ಬಿಂದು ರಾಣಿ ಹಾಗೂ ಎಲ್ಲಾ ಸಂಘಗಳ ಸದಸ್ಯರು ಮತ್ತು ಗ್ರಾಮಸ್ಥರು ಹಾಜರಿದ್ದರು.