ಸಾರಾಂಶ
ಕನ್ನಡಪ್ರಭವಾರ್ತೆ ಚಿಕ್ಕಮಗಳೂರು/ ಶೃಂಗೇರಿ
ದೇಶದ ಭವಿಷ್ಯವನ್ನು ಸದೃಢಗೊಳಿಸುವ ಹಾಗೂ ಯುವ ಪೀಳಿಗೆಯನ್ನು ಜಾತ್ಯತೀತವಾಗಿ ಸಮಾಜದಲ್ಲಿ ಮುಂಚೂಣಿಗೆ ತರುವುದು ಕಾಂಗ್ರೆಸ್ ಪಕ್ಷದ ಮೂಲಧ್ಯೇಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.ನಗರದ ನಿರಂತರ ಸಮುದಾಯ ಭವನದಲ್ಲಿ ಚುನಾವಣಾ ವಾರ್ ರೂಂ.ಗೆ ಮಂಗಳವಾರ ಭೇಟಿ ನೀಡಿ ಮಾತನಾಡಿದ ಅವರು, ಯುವಕರಿಗೆ ಉದ್ಯೋಗ ನೀಡುವುದಾಗಿ ಕೇಂದ್ರ ಸರ್ಕಾರ ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುತ್ತಿದೆ ಎಂದು ದೂರಿದರು.
ಕಳೆದ ಹತ್ತು ವರ್ಷಗಳಿಂದ ಕೇಂದ್ರದಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಸಂಕಷ್ಟಗಳೇ ಎದುರಾಗುತ್ತಿವೆ. ಪೆಟ್ರೋಲ್, ಅಡುಗೆ ಅನಿಲ, ದಿನುಪಯೋಗಿ ವಸ್ತುಗಳ ಬೆಲೆ ಗಗನಕ್ಕೇರಿರುವುದನ್ನು ಮನಗಂಡು ರಾಜ್ಯ ಸರ್ಕಾರ ಜನತೆಗೆ ಗ್ಯಾರಂಟಿ ಯೋಜನೆಗಳ ಮೂಲಕ ಸಹಾಯಹಸ್ತ ನೀಡಿದೆ ಎಂದು ಹೇಳಿದರು.ಪ್ರಸ್ತುತ ಐದು ಶಾಸಕರನ್ನು ಒಳಗೊಂಡಿರುವ ಜಿಲ್ಲೆ ಚಿಕ್ಕಮಗಳೂರು. ಮುಖ್ಯವಾಗಿ ಸಿ.ಟಿ.ರವಿ ಮಣಿಸಿದ ತಮ್ಮಯ್ಯ ಅವರನ್ನು ಮರೆಯಲಾಗದು. ಅಲ್ಲದೇ ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರದ ಸುಳಿವೇ ಇರಲಿಲ್ಲ. ಆದರೆ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ್ ಖರ್ಗೆ ನಾಯಕತ್ವದಲ್ಲಿ ಅಧಿಕಾರ ಪಡೆದಿರುವುದು ಸಾಮಾನ್ಯ ವಿಚಾರವಲ್ಲ ಎಂದರು.
ರಾಜ್ಯದಲ್ಲಿ ಸುಮಾರು 1.65 ಕೋಟಿ ಮನೆಗಳಿಗೆ ಉಚಿತ ವಿದ್ಯುತ್, ಮಹಿಳೆಯರಿಗೆ ಗೃಹ ಲಕ್ಷ್ಮೀ ಯೋಜನೆ ನೀಡಿದೆ. ಉಚಿತ ಅಕ್ಕಿ ವಿತರಣೆಯಲ್ಲೂ ಮಾತನ್ನು ತಪ್ಪದೇ ಪ್ರಾಮಾಣಿಕವಾಗಿ ನಡೆದುಕೊಂಡಿರುವುದು ರಾಜ್ಯ ಕಾಂಗ್ರೆಸ್ ಸರ್ಕಾರದ ಹೆಮ್ಮೆ. ಬಡವರಿಗೆ ಅಕ್ಕಿಯನ್ನು ನೀಡದೇ ಕೇಂದ್ರ ಸರ್ಕಾರ ನಾಟಕವಾಡುತ್ತಿದೆ ಎಂದು ಅವರು ಟೀಕಿಸಿದರು.ಪ್ರಪಂಚದಲ್ಲಿ ಪ್ರತಿಯೊಬ್ಬ ಮನುಷ್ಯ ಕಾಲಕ್ರಮೇಣ ಮುಂದಿನ ಪೀಳಿಗೆಗೆ ಅವಕಾಶ ಕಲ್ಪಿಸಿ ಒಂದಲ್ಲೊಂದು ದಿನ ಬದುಕನ್ನು ತೊರೆಯಬೇಕು. ಈ ಮಧ್ಯದಲ್ಲಿ ಸಲ್ಲಿಸಿದ ಸೇವೆ ಜನಮಾನಸದಲ್ಲಿ ಉಳಿಯಲು ಸಾಧ್ಯ. ಆ ಪ್ರಾಮಾಣಿಕ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಹೀಗಾಗಿ ರಾಜಕೀಯದಲ್ಲಿ ಸೇವಾಗುಣ ಮುಖ್ಯವಾಗಿ ಅಳವಡಿಸಿಕೊಳ್ಳಬೇಕು ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಡಿ.ಎಲ್.ವಿಜಯ್‌ಕುಮಾರ್ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಕರಾವಳಿ ಪ್ರದೇಶದವರಾದ ಕಾರಣ ಎರಡು ಜಿಲ್ಲೆಗಳಿಗೂ ಸೇರಿ ಚಿಕ್ಕಮಗಳೂರಿನಲ್ಲಿ ಚುನಾವಣಾ ವಾರ್ ರೂಂ. ನಿರ್ಮಾಣ ಮಾಡಲಾಗಿದೆ. ಒಟ್ಟಾರೆ ಜಿಲ್ಲೆಗಳಿಂದ 18 ಬ್ಲಾಕ್‌ಗಳಿಗೆ ಸಂಪರ್ಕವನ್ನು ಹೊಂದಲಿದೆ ಎಂದು ತಿಳಿಸಿದರು.ವಾರ್ ರೂಂ.ನಲ್ಲಿ ಕಾರ್ಯನಿರ್ವಹಿಸುವ ಯುವಕರು ಪ್ರತಿ ಬೂತ್ ಅಧ್ಯಕ್ಷರಿಗೆ ಕರೆಮಾಡಿ ಗ್ಯಾರಂಟಿ ಕಾರ್ಡ್ ತಲುಪಿದ ಬಗ್ಗೆ, ವಾಟ್ಸಪ್ ಗ್ರೂಪ್ ರಚನೆಗೊಂಡಿರುವ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕುವರು. ಯುವತಿಯರು ಗೃಹಲಕ್ಷ್ಮೀ ಯೋಜನೆಯ ಮಹಿಳೆಯರಿಗೆ ಕರೆಮಾಡಿ ಸೌಲಭ್ಯ ಸದ್ಬಳಕೆಯಾಗಿದೆಯೇ ಎಂಬುದನ್ನು ಪರಿಶೀಲಿಸುರು. ಹಾಗೂ ಅಭ್ಯರ್ಥಿ ಪರ ಪ್ರಚಾರ ಕೈಗೊಳ್ಳುವರು ಎಂದರು.
ಎರಡು ಕ್ಷೇತ್ರಗಳಲ್ಲೂ ಗ್ಯಾರಂಟಿ ಕಾರ್ಡ್‌ಗಳನ್ನು ತಲುಪಿಸಿದ ಬಳಿಕ ಸ್ವವಿವರದ ಮಾಹಿತಿಯನ್ನು ಸಂಗ್ರಹಿಸಿ ಕೆಪಿಸಿಸಿ ಕಚೇರಿಗೆ ಕಳಿಸಿಕೊಡಲಾಗುವುದು. ಆ ನಿಟ್ಟಿನಲ್ಲಿ ವಾರ್ ರೂಂ. ಕಂಪ್ಯೂಟರೀಕರಣಗೊಳಿಸಿ ಮಾಹಿತಿಯ ನ್ನು ಸಂಗ್ರಹಿಸುವ ಕಾರ್ಯಕ್ಕೆ ಕೈಹಾಕಲಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಡಾ. ಅಂಶುಮಂತ್, ಶಾಸಕ ಎಚ್.ಡಿ.ತಮ್ಮಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ಪ್ರಚಾರ ಸಮಿತಿ ಅಧ್ಯಕ್ಷ ಹನೀಫ್, ಮುಖಂಡರಾದ ಬಿ.ಎಚ್. ಹರೀಶ್, ನಯಾಜ್, ಶ್ರೀಕಾಂತ್, ಪ್ರದೀಪ್, ಅನ್ಸರ್ ಆಲಿ, ಕೆ.ಭರತ್ ಹಾಜರಿದ್ದರು.ಮಲೆನಾಡಿನ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ: ಜಯಪ್ರಕಾಶ್ ಹೆಗ್ಡೆ
ಶೃಂಗೇರಿ: ಮಲೆನಾಡು ಭಾಗದಲ್ಲಿ ಅಡಕೆ ಹಳದಿ ಎಲೆ ರೋಗ, ಎಲೆ ಚುಕ್ಕಿ ರೋಗ, ಒತ್ತುವರಿ ಸಮಸ್ಯೆ ಸೇರಿ ಅನೇಕ ಸಮಸ್ಯೆಗಳಿದ್ದು, ಇವುಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.ತಾಲೂಕಿನ ಮೆಣಸೆಯಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಭಾಷಣ ಮಾಡಿದ ಅವರು, ನಾನು ಈ ಹಿಂದೆ ಸಂಸದನಾಗಿದ್ದಾಗ ಅಡಕೆ ಹಳದಿ ಎಲೆ ರೋಗ ಸೇರಿ ಈ ಭಾಗದ ಸಮಸ್ಯೆಗಳ ಪರಿಹಾರಕ್ಕೆ ಸಾಕಷ್ಟು ಹೋರಾಟ ಮಾಡಿದ್ದೇನೆ. ಗೋರಕ್ ಸಿಂಗ್ ವರದಿ ಜಾರಿಗಾಗಿ ಸಾಕಷ್ಟು ಪ್ರಯತ್ನ ಮಾಡಿದ್ದೇನೆ ಎಂದು ತಿಳಿಸಿದರು.ಈ ಬಾರಿ ಜನರು ನನ್ನನ್ನು ಬೆಂಬಲಿಸಿ ಸಂಸತ್ತಿಗೆ ಕಳುಹಿಸಿದರೆ ಈ ಭಾಗದ ಸಮಸ್ಯೆಗಳ ಪರಿಹಾರಕ್ಕೆ ಕೆಲಸ ಮಾಡುತ್ತೇನೆ. ರಾಜ್ಯ ಸರ್ಕಾರ ಉತ್ತಮ ಜನಪರ ಕೆಲಸ ಮಾಡುತ್ತಿದೆ. ಉತ್ತಮ ಆಡಳಿತ ನಡೆಯುತ್ತಿದೆ. ಕೇಂದ್ರದಲ್ಲಿ ಇಂಡಿಯಾ ಒಕ್ಕೂಟ ಸರ್ಕಾರ ಅಧಿಕಾರಕ್ಕೆ ಬಂದರೆ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಶಾಸಕ ಟಿ.ಡಿ.ರಾಜೇಗೌಡ, ಸ್ಥಳೀಯ ಮುಖಂಡರಾದ ನಟರಾಜ್, ವೆಂಕಟೇಶ್, ಪುಟ್ಟಪ್ಪ ಹೆಗ್ಡೆ, ಮಹಿಳಾ ಘಟಕದ ಶಕಿಲಾ, ಪೂರ್ಣಿಮಾ ಮತ್ತಿತರರು ಇದ್ದರು.