ಗವಿಮಠದ ಡಾ. ಕುಮಾರ ಮಹಾರಾಜರು ಮಾತನಾಡಿ, ಕಳೆದ 13 ದಿನಗಳಿಂದ ರೈತರು ಖರೀದಿ ಕೇಂದ್ರ ಆರಂಭಿಸಬೇಕು ಎಂದು ಹೋರಾಟ ನಡೆಸುತ್ತಿದ್ದರೂ ಸರ್ಕಾರ ಲಘುವಾಗಿ ಪರಿಗಣಿಸಿದೆ ಎಂದರು.

ಲಕ್ಷ್ಮೇಶ್ವರ: ಪಟ್ಟಣದಲ್ಲಿ ಗೋವಿನಜೋಳ ಖರೀದಿಸುವಂತೆ ಆಗ್ರಹಿಸಿ ಕಳೆದ 13 ದಿನಗಳಿಂದ ಅಹೋರಾತ್ರಿ ಹೋರಾಟ ನಡೆಸುತ್ತಿರುವ ರೈತರು ಗುರುವಾರ ಪೊರಕೆ ಚಳವಳಿ ಮಾಡಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಪಟ್ಟಣದ ಶಿಗ್ಲಿ ಕ್ರಾಸ್ ಹತ್ತಿರ ಪಾಳಾ- ಬಾದಾಮಿ ರಾಜ್ಯ ಹೆದ್ದಾರಿ ತಡೆದು ಪೊರಕೆಯಿಂದ ರಸ್ತೆಯಲ್ಲಿನ ಕಸ ಗುಡಿಸಿ ಪ್ರತಿಭಟನಾ ಸ್ಥಳಕ್ಕೆ ಹೋರಾಟಗಾರರು ಆಗಮಿಸಿದರು.

ಈ ವೇಳೆ ಹೋರಾಟಗಾರರು ಮಾತನಾಡಿ, ಗೋವಿನಜೋಳ ಖರೀದಿ ಕೇಂದ್ರ ಆರಂಭಿಸುವಂತೆ ಆಗ್ರಹಿಸಿ ಕಳೆದ 13 ದಿನಗಳಿಂದ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಇತ್ತ ಗಮನ ಹರಿಸಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ ರೈತ ಮುಖಂಡರು, ಪೊರಕೆ ಚಳವಳಿಯ ಮೂಲಕ ಎಚ್ಚರಿಕೆ ನೀಡಲಾಗಿದೆ.

ರೈತರು ಬೀದಿಯಲ್ಲಿ ಕುಳಿತು ಹೋರಾಟ ನಡೆಸುತ್ತಿರುವುದನ್ನು ಸರ್ಕಾರ ಹಗುರವಾಗಿ ಕಾಣುತ್ತಿದೆ. ರೈತರ ಸಹನೆಯ ಕಟ್ಟೆಯೊಡೆದರೆ ನಿಮ್ಮನ್ನು ಕಸ ಗುಡಿಸುವ ಹಾಗೇ ಗುಡಿಸಿ ನಿಮ್ಮ ಅಧಿಕಾರ ಮಟ್ಟ ಹಾಕಲಾಗುವುದು. ಆದ್ದರಿಂದ ಶೀಘ್ರದಲ್ಲಿ ಗೋವಿನ ಜೋಳದ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಎಚ್ಚರಿಕೆ ನೀಡಿದರು.ಈ ವೇಳೆ ಆದರಳ್ಳಿಯ ಗವಿಮಠದ ಡಾ. ಕುಮಾರ ಮಹಾರಾಜರು ಮಾತನಾಡಿ, ಕಳೆದ 13 ದಿನಗಳಿಂದ ರೈತರು ಖರೀದಿ ಕೇಂದ್ರ ಆರಂಭಿಸಬೇಕು ಎಂದು ಹೋರಾಟ ನಡೆಸುತ್ತಿದ್ದರೂ ಸರ್ಕಾರ ಲಘುವಾಗಿ ಪರಿಗಣಿಸಿದೆ. ನಾನು ಆಮರಣ ಉಪವಾಸ ಕೈಗೊಂಡು ಅಸ್ವಸ್ಥವಾದ ವೇಳೆ ಜಿಲ್ಲಾಧಿಕಾರಿಗಳು ಹೋರಾಟದ ಸ್ಥಳಕ್ಕೆ ಬಂದು ಖರೀದಿ ಕೇಂದ್ರ ತೆರೆಯುವ ಭರವಸೆ ನೀಡಿದರು. ಆದರೆ ಇದುವರೆಗೂ ಸರ್ಕಾರ ಖರೀದಿ ಕೇಂದ್ರ ತೆರೆಯುವ ಕುರಿತು ಅಧಿಕೃತ ಘೋಷಣೆ ಹೊರಡಿಸಿಲ್ಲ.

ಶನಿವಾರ ಬೆಳಗ್ಗೆ 10 ಗಂಟೆಯ ಒಳಗಾಗಿ ಖರೀದಿ ಕೇಂದ್ರ ತೆರೆಯುವ ಆದೇಶ ನೀಡದಿದ್ದರೆ ಮತ್ತೆ ಆಮರಣ ಉಪವಾಸ ಕೈಗೊಳ್ಳುವುದಾಗಿ ತಿಳಿಸಿದ ಅವರು, ಈ ಬಾರಿ ಯಾರೇ ಬಂದರೂ ನಾನು ಆಮರಣ ಉಪವಾಸದಿಂದ ಹಿಂದೆ ಸರಿಯುವುದಿಲ್ಲ. ರೈತರಿಗಾಗಿ ನನ್ನ ಪ್ರಾಣ ಹೋದರೂ ಚಿಂತೆಯಿಲ್ಲ ಎಂದರು.

ಪುರಕೆ ಚಳವಳಿಯಲ್ಲಿ ಮಂಜುನಾಥ ಮಾಗಡಿ, ರವಿಕಾಂತ ಅಂಗಡಿ, ಶರಣು ಗೋಡಿ, ಮಹೇಶ ಹೊಗೆಸೊಪ್ಪಿನ, ಜೆಡಿಎಸ್ ವಕ್ತಾರ ನಂಜನಗೌಡ್ರು ಗೋವಿಂದಗೌಡ್ರು, ನಾಗರಾಜ ಚಿಂಚಲಿ, ತಿಪ್ಪಣ್ಣ ಸಂಶಿ, ಚಂಬಣ್ಣ ಬಾಳಿಕಾಯಿ, ಪ್ರಕಾಶ ಕೊಂಚಿಗೇರಿಮಠ, ನೀಲಪ್ಪ ಶೆರಸೂರಿ, ಟಾಕಪ್ಪ ಸಾತಪೂತೆ, ಚನ್ನಪ್ಪ ಷಣ್ಮುಖಿ, ಫಕ್ಕೀರೇಶ ಅಣ್ಣಿಗೇರಿ, ನಿಂಗಪ್ಪ ಗದ್ದಿ, ಮಲ್ಲೇಶ ವಡ್ಡರ, ಶಿವಾನಂದ ಲಿಂಗಶೆಟ್ಟಿ, ಸುರೇಶ ಹಟ್ಟಿ, ಶಿವನಗೌಡ್ರು ಪಾಟೀಲ, ದಾದಾಪೀರ ಮುಚ್ಚಾಲೆ, ರಾಜು ಗುಡಗೇರಿ, ರಾಜು ಬೆಲ್ಲದ, ಮುದಕಪ್ಪ ಗದ್ದಿ, ಎಂ.ಎಂ. ಗದಗ, ದೇವಪ್ಪ ಮಾಳಗಿಮನಿ ಸೇರಿದಂತೆ ಅನೇಕರು ಇದ್ದರು.

ಅಡವಿಸೋಮಾಪುರದ ಈರಣ್ಣ ಅಂಗಡಿ ಹಾಗೂ ಸಂಗಡಿಗರು ಗೀಗೀ ಪದದ ಹೇಳುವ ಮೂಲಕ‌ ರೈತರಲ್ಲಿ ಜಾಗೃತಿ ಹಾಡು ಹಾಡಿ ಗಮನ ಸೆಳೆದರು.