ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣವನ್ನು ಖಂಡಿಸಿ ಭಾನುವಾರ ನಗರದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಪ್ರಜ್ವಲ್ ಪ್ರತಿಕೃತಿಗೆ ಪೊರಕೆ ಸೇವೆ ಮಾಡಿ, ಪೆಟ್ರೋಲ್ ಹಾಕಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಸೇರಿದ ಮಹಿಳಾ ಕಾರ್ಯಕರ್ತೆಯರು ಶಾಸಕ ಎಚ್.ಡಿ.ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಘೋಷಣೆಗಳನ್ನು ಕೂಗಿದರು. ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್‌ನನ್ನು ಶೀಘ್ರವೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಒತ್ತಾಯಿಸಿದರು.
ಮಹಿಳೆಯರನ್ನು ಭೋಗದ ವಸ್ತುವೆಂದು ಭಾವಿಸಿರುವ ಪ್ರಜ್ವಲ್ ಜನಪ್ರತಿನಿಧಿಯಾಗುವುದಕ್ಕೆ ಯೋಗ್ಯ ವ್ಯಕ್ತಿಯಲ್ಲ. ತಮ್ಮ ಕಾಮದಾಹಕ್ಕಾಗಿ ಸಾವಿರಾರು ಮಹಿಳೆಯರ ಬದುಕಿನ ಜೊತೆ ಚೆಲ್ಲಾಟವಾಡಿದ್ದಾರೆ. ಹೆಣ್ಣು ಮಕ್ಕಳ ಮರ್ಯಾದೆ ಬೀದಿಪಾಲಾಗುವಂತೆ ಮಾಡಿರುವ ಅವರಿಗೆ ಬಿಗಿಯಾದ ಕಾನೂನು ಸಂಕೋಲೆಗಳಿಂದ ಕಟ್ಟಿಹಾಕಿ ಶಿಕ್ಷಿಸುವಂತೆ ಆಗ್ರಹಿಸಿದರು.ಸಾವಿರಾರು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ವಿದೇಶಕ್ಕೆ ಓಡಿಹೋಗಿದ್ದಾನೆ. ಆತ ಎಲ್ಲೇ ಇದ್ದರೂ ಎಸ್‌ಐಟಿ ಅಧಿಕಾರಿಗಳು ಕೂಡಲೇ ಬಂಧಿಸಿ ಕರೆತರಬೇಕು. ಒಬ್ಬ ಸಂಸದನಿಂದ ಈ ರೀತಿಯ ಕೃತ್ಯ ನಡೆದಿರುವುದು ರಾಷ್ಟ್ರಮಟ್ಟದಲ್ಲಿ ಕರ್ನಾಟಕಕ್ಕೆ ದೊಡ್ಡ ಕಪ್ಪುಚುಕ್ಕೆಯಾಗಿದೆ. ಸಂಸ್ಕೃತಿ-ಸಂಸ್ಕಾರವಿಲ್ಲದೆ ಬೆಳೆದಿರುವ ಪ್ರಜ್ವಲ್ ಕಾಮಪಿಶಾಚಿಯಾಗಿದ್ದಾನೆ. ಆತನಿಗೆ ಯಾವುದೇ ಕಾರಣಕ್ಕೂ ಕ್ಲೀನ್‌ಚಿಟ್ ನೀಡದೆ ಸಂತ್ರಸ್ತೆಯರು ನೀಡಿರುವ ದೂರಿನಲ್ಲಿರುವ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ ಅವರಿಗೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿದರು.
ಪ್ರಜ್ವಲ್ ಬಂಧನವಾಗದಿರುವುದರಿಂದ ಸಾಕ್ಷ್ಯನಾಶವಾಗುವ, ಈತನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗದ ಇನ್ನಷ್ಟು ಸಂತ್ರಸ್ತೆಯರಿಗೆ ಬೆದರಿಕೆಯೊಡ್ಡುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಕೂಡಲೇ ಅವನನ್ನು ಬಂಧಿಸುವುದಕ್ಕೆ ಎಸ್‌ಐಟಿ ಅಧಿಕಾರಿಗಳು ಕ್ರಮ ವಹಿಸಬೇಕು. ಆತನ ಕಾಮದಾಹಕ್ಕೆ ಇನ್ನಷ್ಟು ಮಹಿಳೆಯರು ಬಲಿಯಾಗದಂತೆ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಅಂಜನಾ ಶ್ರೀಕಾಂತ್, ಮಹಿಳಾ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳಾದ ಇಂದಿರಾ, ವೀಣಾ, ಶಕುಂತಲಾ, ಶಾಂಭವಿ, ನಗರಸಭಾ ಸದಸ್ಯರಾದ ಗೀತಾ ಕಲ್ಲಹಳ್ಳಿ, ಶ್ರೀಧರ್, ಮುಖಂಡರಾದ ಸಿ.ಎಂ.ದ್ಯಾವಪ್ಪ, ಪ್ರಶಾಂತ್‌ಬಾಬು, ವಿಜಯಕುಮಾರ್, ಕನ್ನಲಿ ಚೆನ್ನಪ್ಪ ಮತ್ತಿತರರಿದ್ದರು.