ಆಸ್ತಿಗಾಗಿ ಸಹೋದರನ್ನೇ ಕೊಂದ ಕಿರಾತಕರು?

| Published : Oct 15 2023, 12:45 AM IST

ಸಾರಾಂಶ

ಧಾರವಾಡ ತಾಲೂಕಿನ ಬಾಡ ಗ್ರಾಮದ ರಜಾಕ್‌ ಕವಲಗೇರಿ ಕೊಲೆಯಾದ ವ್ಯಕ್ತಿ. ಆಸ್ತಿಗಾಗಿ ಸೋದರ ಸಂಬಂಧಿಯೇ ಈ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಕನ್ನಡಪ್ರಭ ವಾರ್ತೆ ಧಾರವಾಡ

ಶುಕ್ರವಾರ ತಡರಾತ್ರಿ ಹಳಿಯಾಳ ರಸ್ತೆಯ ಉನ್ನತ ಶಿಕ್ಷಣ ಅಕಾಡೆಮಿ ಬಳಿ ಓರ್ವನ ಕೊಲೆ ನಡೆದಿದೆ.

ತಾಲೂಕಿನ ಬಾಡ ಗ್ರಾಮದ ರಜಾಕ್‌ ಕವಲಗೇರಿ ಕೊಲೆಯಾದ ವ್ಯಕ್ತಿ. ಆಸ್ತಿಗಾಗಿ ಸೋದರ ಸಂಬಂಧಿಯೇ ಈ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಹೆಸ್ಕಾಂ ಬಿಲ್‌ ಕಲೆಕ್ಟರ್ ಆಗಿದ್ದ ರಜಾಕ್ ಶುಕ್ರವಾರ ಸಂಜೆ ತನ್ನ ಗೆಳೆಯ ಮಲ್ಲಿಕಾರ್ಜುನನ ಜೊತೆಗೆ ಧಾರವಾಡಕ್ಕೆ ಬಂದಿದ್ದರು. ಹೆಸ್ಕಾಂ ಕಚೇರಿಯಲ್ಲಿ ವಿದ್ಯುತ್ ಬಿಲ್‌ ತುಂಬಿ ಸಂಜೆ ಹೊತ್ತಿಗೆ ಊರಿನ ಕಡೆಗೆ ಹೊರಟರು. ದಾಂಡೇಲಿ ರಸ್ತೆಯ ಹಳಿಯಾಳ ಬೈಪಾಸ್ ಬಳಿ ಬೈಕ್ ಮೇಲೆ ಬರುತ್ತಿದ್ದಾಗ ಹಿಂದಿನಿಂದ ಬಂದ ನಾಲ್ಕಾರು ಯುವಕರು ಮಚ್ಚಿನಿಂದ ದಾಳಿ ಮಾಡಿದ್ದಾರೆ. ರಜಾಕ್ ತಪ್ಪಿಸಿಕೊಳ್ಳಲು ಯತ್ನಿಸಿದರೂ ಸಾಧ್ಯವಾಗಿಲ್ಲ.

ರಜಾಕ್ ಕುಟುಂಬದ 23 ಎಕರೆ ಜಮೀನಿಗೆ ಸಂಬಂಧಿಸಿದಂತೆ ಸೋದರ ಸಂಬಂಧಿಗಳ ಜೊತೆಗೆ ವ್ಯಾಜ್ಯವಿತ್ತು, ಈಗಾಗಲೇ ಹಲವಾರು ಬಾರಿ ಗ್ರಾಮದ ಮುಖಂಡರೆಲ್ಲ ಸೇರಿ ಈ ವ್ಯಾಜ್ಯವನ್ನು ಬಗೆಹರಿಸಲು ಯತ್ನಿಸಿದ್ದರು. ಈ ವೇಳೆ ಗ್ರಾಮದ ಹಿರಿಯರ ನಿರ್ಧಾರವೇ ಅಂತಿಮ ಎಂದು ರಜಾಕ್‌ ಸಹ ಹೇಳಿದ್ದನು. ಅಲ್ಲದೇ ರಜಾಕ್‌ ಮೂವರು ಜನ ತಮ್ಮಂದಿರು ಕೂಡ ಇದರ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿದ್ದನು. ಆಸ್ತಿ ವಿಚಾರವಾಗಿ ಕ್ಯಾತೆ ತೆಗೆದಿದ್ದ ಸಂಬಂಧಿಗಳು ನ್ಯಾಯಾಲಯದ ಮೊರೆ ಸಹ ಹೋಗಿದ್ದರು. ರಜಾಕ್‌ ಕೂಡ ಕೋರ್ಟ್ ವ್ಯವಹಾರಗಳನ್ನು ಒಬ್ಬನೇ ನಿರ್ವಹಿಸುತ್ತಿದ್ದನು. ಈತ ಎಲ್ಲವನ್ನು ಚೆನ್ನಾಗಿ ನಿರ್ವಹಿಸುತ್ತಿದ್ದಾನೆ ಎಂದರಿತ ಸಂಬಂಧಿಕರು ಈತನ ಮೇಲೆ ಆಗಾಗ ಜಗಳ ತೆಗೆದಿದ್ದು ಉಂಟು. ಹೀಗಾಗಿ ಈತನನ್ನೇ ಮುಗಿಸಿಬಿಟ್ಟರೆ ತಮ್ಮ ಕೆಲಸ ಸರಳವಾಗುತ್ತದೆ ಎಂದು ಸಂಬಂಧಿಗಳೇ ಆತನನ್ನು ಬೆನ್ನು ಹತ್ತಿ ಕೊಚ್ಚಿ ಕೊಂದಿದ್ದಾರೆ ಎಂದು ಮೃತನ ಸಹೋದರ ನಾಸೀರ ಅಹಮ್ಮದ ಆರೋಪ ಮಾಡುತ್ತಾರೆ.

ಸಹೋದರ ಸಂಬಂಧಿಗಳಾದ ಫಕ್ರುಸಾಬ್, ಮಲಿಕ್, ದಾದಾ ಖಲಂದರ್, ಬುಡ್ಡೇಸಾಬ್ ತನ್ನ ಸಹೋದರನನ್ನು ಕೊಂದಿದ್ದು ಎಂದು ನಾಸೀರ ಆರೋಪಿಸುತ್ತಾರೆ. ಇವರ ಮನೆಯ ಪಕ್ಕದಲ್ಲಿಯೇ ಇದ್ದ ಅವರ ಮನೆಗೆ ಇದೀಗ ಬೀಗ ಜಡಿಯಲಾಗಿದ್ದು, ಎಲ್ಲರೂ ಪರಾರಿಯಾಗಿದ್ದಾರೆ.

ಧಾರವಾಡ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಂತಕರಿಗೆ ಪೊಲೀಸರು ಬಲೆ ಬೀಸಿದ್ದಾರೆ. ಆಸ್ತಿಗಾಗಿ ರಕ್ತ ಸಂಬಂಧಿಯನ್ನೇ ಭೀಕರವಾಗಿ ಕೊಚ್ಚಿ ಕೊಂದಿದ್ದು ಮಾತ್ರ ಇಡೀ ಕುಟುಂಬವನ್ನೇ ಕಣ್ಣೀರಿನಲ್ಲಿ ಮುಳುಗುವಂತೆ ಮಾಡಿದ್ದು ವಿಪರ್ಯಾಸವೇ ಸರಿ.