ಬಿಆರ್‌ಟಿಎಸ್‌ ಬಸ್‌ ಪಾದಚಾರಿ ಸಾವು: ಪ್ರತಿಭಟನೆ

| Published : Jul 04 2024, 01:01 AM IST

ಸಾರಾಂಶ

ಬಿಆರ್‌ಟಿಎಸ್ ಬಸ್ ಯೋಜನೆ ಜಾರಿಗೆ ತಂದಿರುವುದೇ ಸಾರ್ವಜನಿಕರ ಜೀವ ತೆಗೆಯಲು ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ಈ ರೀತಿ ಬಸ್ ಗುದ್ದಿ ಮೃತಪಟ್ಟ ಅಮಾಯಕರ ಜೀವಕ್ಕೆ ಯಾರು ಹೊಣೆಗಾರರು ಯಾರು.

ಹುಬ್ಬಳ್ಳಿ:

ಬಿಆರ್‌ಟಿಎಸ್‌ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಪಾದಚಾರಿ ಮೃತಪಟ್ಟ ಘಟನೆ ವಿದ್ಯಾನಗರದ ಗುರುದತ್ತ ಭವನದ ಬಳಿ ಬುಧವಾರ ನಡೆದಿದೆ.ಗುರುದತ್ತ ಬಳಿ ಬಿಆರ್‌ಟಿಎಸ್‌ ಕಾರಿಡಾರ್‌ ದಾಟುವಾಗ ಬಸ್‌ ಡಿಕ್ಕಿ ಹೊಡೆದು ಗೋಕುಲ ರಸ್ತೆಯ ಮಂಜುನಾಥ ನಗರದ ನಿವಾಸಿ ಗಂಗಾಧರ ಮಮ್ಮಿಗಟ್ಟಿ (84) ಮೃತಪಟ್ಟಿದ್ದಾರೆ. ಬಸ್‌ ಡಿಕ್ಕಿ ಹೊಡೆಯುತ್ತಿದ್ದಂತೆ ಕೆಳೆಗೆ ಬಿದ್ದ ಇವರನ್ನು ಸಾರ್ವಜನಿಕರು ಆ್ಯಂಬುಲೆನ್ಸ್‌ ಮೂಲಕ ಚಿಕಿತ್ಸೆಗಾಗಿ ಕಿಮ್ಸ್‌ಗೆ ಕಳಿಸಿದ್ದರು. ಆಸ್ಪತ್ರೆ ತಲುಪ ಮುನ್ನವೇ ಅವರು ಮೃತರಾಗಿದ್ದಾರೆ. ಈ ಕುರಿತು ಉತ್ತರ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಭಟನೆ:

ಪಾದಚಾರಿ ಮೃತಪಟ್ಟಿರುವುದನ್ನು ಖಂಡಿಸಿ ಕರ್ನಾಟಕ ದಲಿತ ವಿಮೋಚನಾ ಸಮಿತಿಯಿಂದ ವಿದ್ಯಾನಗರದ ಗುರುದತ್ತ ಭವನದ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಮಹಾನಗರದ ಮಧ್ಯೆ ಅವೈಜ್ಞಾನಿಕವಾಗಿ ಬಿಆರ್‌ಟಿಎಸ್ ಮಾರ್ಗ ನಿರ್ಮಿಸಿರುವುದರಿಂದಲೇ ನಿತ್ಯ ಅಪಘಾತಗಳು ನಡೆಯುತ್ತಿವೆ. ಬಿಆರ್‌ಟಿಎಸ್ ಮಾರ್ಗ ದಾಟುವ ಪಾದಚಾರಿಗಳಿಗೆ ಅಂಡರ್‌ಗ್ರೌಂಡ್ ಅಥವಾ ಓವರ್ ಬ್ರಿಡ್ಜ್‌ ನಿರ್ಮಿಸುವಂತೆ ಸಂಘಟನೆಯಿಂದ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಬಿಆರ್‌ಟಿಎಸ್ ಬಸ್ ಯೋಜನೆ ಜಾರಿಗೆ ತಂದಿರುವುದೇ ಸಾರ್ವಜನಿಕರ ಜೀವ ತೆಗೆಯಲು ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ಈ ರೀತಿ ಬಸ್ ಗುದ್ದಿ ಮೃತಪಟ್ಟ ಅಮಾಯಕರ ಜೀವಕ್ಕೆ ಯಾರು ಹೊಣೆಗಾರರು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಅಧಿಕಾರಿಗಳು ಹಾಗೂ ಜನಪ್ರತಿನಿಗಳು ಎಚ್ಚೆತ್ತುಕೊಂಡು ಬಿಆರ್‌ಟಿಎಸ್ ಬಸ್ ಮಾರ್ಗದಲ್ಲಿನ ಸಮಸ್ಯೆ ಬಗೆಹರಿಸಬೇಕು. ಜತೆಗೆ ಅಗತ್ಯವಿರುವ ಎಲ್ಲ ಸ್ಥಳಗಳಲ್ಲಿ ಪಾದಾಚಾರಿಗಳಿಗೆ ಓವರ್ ಬ್ರೀಡ್ಜ್‌ ನಿರ್ಮಿಸಿಕೊಡಬೇಕು. ಇಲ್ಲದೇ ಹೋದಲ್ಲಿ ಸಂಘಟನೆ ನೇತೃತ್ವದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ನಂತರ ಸಂಚಾರ ಠಾಣೆ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಪ್ರತಿಭಟನಾಕಾರರ ಮನವೊಲಿಸುವ ಮೂಲಕ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಸಂಘಟನೆ ಪ್ರಧಾನ ಕಾರ್ಯದರ್ಶಿ ಶ್ರೀಧರ ಕಂದಗಲ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.