ಸಾರಾಂಶ
ಹುಬ್ಬಳ್ಳಿ: ಬಿಆರ್‌ಟಿಎಸ್ ಕಾರಿಡಾರ್‌ನಲ್ಲಿ ಮಿಕ್ಸ್ ಟ್ರಾಫಿಕ್ (ಮಿಶ್ರಪಥ) ಮಾಡುವ ಬಗ್ಗೆ ಜನರ ಆಗ್ರಹವಿದೆ. ಈ ನಿಟ್ಟಿನಲ್ಲಿ ಸರ್ವೇ ವರದಿ, ಜನರು, ಸ್ಥಳೀಯ ಶಾಸಕರ ಮತ್ತು ಅಧಿಕಾರಿಗಳ ಅಭಿಪ್ರಾಯ ಸಂಗ್ರಹಿಸಿ ಸರ್ಕಾರಕ್ಕೆ ಬರೆದು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಆರ್‌ಟಿಎಸ್ ಮಾರ್ಗವನ್ನು ಮಿಕ್ಸ್ ಟ್ರಾಫಿಕ್ ಮಾಡಲು ಬರಲ್ಲ. ಹೀಗಾಗಿ ಮಿಕ್ಸ್ ಟ್ರಾಫಿಕ್‌ಗೆ ಅವಕಾಶ ಕೊಡದೇ, ಪ್ರಯಾಣಿಕರಿಗೆ ಯಾವ ರೀತಿಯ ಅನುಕೂಲ ಮಾಡಬಹುದು ಎಂಬ ಸರ್ವೇ ಮಾಡಲಾಗುತ್ತಿದೆ ಎಂದರು.ಈಗಾಗಲೇ ಬಸ್‌ಗಳು ಹಳೆಯವಾಗಿದ್ದು, ಹೊಸ ಬಸ್ ತರಲು ಪ್ರಯತ್ನಿಸಲಾಗುತ್ತಿದೆ. ಬಸ್‌ಗಳು ಕೆಟ್ಟು ನಿಲ್ಲುತ್ತಿರುವುದರಿಂದ ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ. ಇತ್ತೀಚಿಗೆ ತಾಂತ್ರಿಕ ದೋಷದಿಂದ ಅಪಘಾತವು ಸಂಭವಿಸಿದೆ. ಇನ್ನು ಬಿಡಿಭಾಗ ಪೂರೈಕೆ ಮತ್ತು ನಿರ್ವಹಣೆ ಸಂಬಂಧ ಅಧಿಕಾರಿಗಳು ಕಂಪನಿ ಜತೆ ಪತ್ರ ಬರೆದು ಕಂಡುಕೊಳ್ಳುವ ಕಾರ್ಯ ಮಾಡುತ್ತಿದ್ದಾರೆ. ಈ ಮಧ್ಯೆಯೂ ಬಸ್‌ಗಳನ್ನು ಸರಿಯಾಗಿ ನಿರ್ವಹಣೆ ಮಾಡಿಯೇ ಸಂಚಾರಕ್ಕೆ ಬಿಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಹೀಗಾಗಿ ತೊಂದರೆ ಆಗಲ್ಲ ಮತ್ತು ನಿರ್ವಹಣೆ ಚೆನ್ನಾಗಿ ಮಾಡಿಯೇ ರಸ್ತೆಗೆ ಬಿಡುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ಇದಕ್ಕೂ ಮುನ್ನ ಸಾರ್ವಜನಿಕರು, ಹೊಸೂರು ಕ್ರಾಸ್‌ನಲ್ಲಿ ಯೂಟರ್ನ್ ಪಡೆಯಲು ಮೊದಲಿನಂತೆ ಅವಕಾಶ ಕಲ್ಪಿಸಬೇಕು ಎಂದು ಸಚಿವ ಸಂತೋಷ ಲಾಡ್ ಅವರನ್ನು ಆಗ್ರಹಿಸಿದರು.ಹೊಸೂರ ಸರ್ಕಲ್‌ನಿಂದ ಧಾರವಾಡದ ವರೆಗೆ ಬಿಆರ್‌ಟಿಎಸ್ ಬಸ್‌ನಲ್ಲಿ ಪ್ರಯಾಣಿಸಿದ ವೇಳೆ ಸಾರ್ವಜನಿಕರು ಈ ರೀತಿ ಆಗ್ರಹಿಸಿದರು. ಅದಕ್ಕೆ ಸಚಿವರು, ಗಾಳಿದುರ್ಗಮ್ಮ ದೇವಸ್ಥಾನ ಬಳಿ ಈಗಿರುವ ಯೂಟರ್ನ್‌ನ್ನು ಮತ್ತಷ್ಟು ಸುಧಾರಿಸಿ ವಾಹನಗಳ ಓಡಾಟಕ್ಕೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಹೊಸೂರ ಬಸ್ ನಿಲ್ದಾಣದ ಬಳಿ ಬಿಆರ್‌ಟಿಎಸ್ ಬ್ಯಾರಿಕೇಡ್ ತೆಗೆದು ವಾಹನಗಳ ಓಡಾಟ ಮತ್ತು ಜನರ ಓಡಾಟಕ್ಕೆ ಮುಕ್ತಗೊಳಿಸಬೇಕು. ವಿದ್ಯಾನಗರ ಬಳಿ ಉಣಕಲ್ ಕ್ರಾಸ್ ನಿಲ್ದಾಣದಿಂದ ಶ್ರೀನಗರ ಕ್ರಾಸ್‌ವರೆಗೆ ಇರುವ ಎರಡು ಫ್ಲೈಓವರ್‌ನಲ್ಲಿ ಮಿಕ್ಸ್ ಟ್ರಾಫಿಕ್‌ಗೆ ಅವಕಾಶ ಕಲ್ಪಿಸಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತು. ಆಗ ಇದನ್ನು ಪರಿಶೀಲಿಸಲು ಅಧಿಕಾರಿಗಳಿಗೆ ಸಚಿವ ಲಾಡ್ ಸೂಚಿಸಿದರು.ಇದಕ್ಕೂ ಪೂರ್ವದಲ್ಲಿ ಎಬಿವಿಪಿ ಕಾರ್ಯಕರ್ತರು ಸಚಿವ ಲಾಡ್ ಅವರನ್ನು ಭೇಟಿ ಮಾಡಿ, ಬಿವಿಬಿ ಕಾಲೇಜಿನ ಎದುರು 100 ನಂಬರ್‌ನ ಬಿಆರ್‌ಟಿಬಸ್ ನಿಲುಗಡೆಗೆ ಅವಕಾಶ ಕಲ್ಪಿಸುವುದು ಸೇರಿದಂತೆ ಹತ್ತಾರು ಬೇಡಿಕೆಯ ಮನವಿ ಸಲ್ಲಿಸಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ಲಾಡ್, ಶೀಘ್ರವೇ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಎನ್‌ಡಬ್ಲೂಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕಿ ಎಂ. ಪ್ರಿಯಾಂಗ, ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಡಿಸಿಪಿ ರವೀಶ ಸಿ.ಆರ್, ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರೇಮನಾಥ ಚಿಕ್ಕತುಂಬಳ, ಕೃಷಿಕ ಸಮಾಜ ಅಧ್ಯಕ್ಷ ಮಲ್ಲನಗೌಡರ ಸೇರಿದಂತೆ ಇತರರು ಇದ್ದರು.137 ಕೆರೆ ತುಂಬಿಸಲು ಅವಕಾಶ: ಕೆರೆ ತುಂಬಿಸುವ ಯೋಜನೆಗೆ ಕ್ಯಾಬಿನೆಟ್‌ನಲ್ಲಿ ಅನುಮೋದನೆ ದೊರೆತಿದ್ದು, ₹180 ಕೋಟಿ ವೆಚ್ಚದಲ್ಲಿ ಇನ್ನೂ 137 ಕೆರೆ ತುಂಬಿಸಲು ಅವಕಾಶ ದೊರೆತಿದೆ ಎಂದು ಸಚಿವ ಸಂತೋಷ ಲಾಡ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಥಮ ಹಂತದಲ್ಲಿ 45 ಕೆರೆ ತುಂಬಿಸಿದ್ದು, ಕಲಘಟಗಿಯ ಎಲ್ಲ ಕೆರೆ ಸೇರಿದಂತೆ ಒಟ್ಟು 180 ಕೆರೆಗಳನ್ನು ಎರಡು ವರ್ಷದ ಅವಧಿಯಲ್ಲಿ ಹಂತ ಹಂತವಾಗಿ ತುಂಬಿಸುವ ಗುರಿ ಹೊಂದಲಾಗಿದೆ ಎಂದರು.ಅತಿವೃಷ್ಟಿಯಿಂದ ಹಾನಿಗೊಳಗಾದ ಬೆಳೆಗೆ ಸರ್ಕಾರದಿಂದ ಪರಿಹಾರಕ್ಕೆ ಕಳುಹಿಸಲಾಗಿದೆ. ಬೆಳೆವಿಮೆ ಜತೆಗೆ ಸರ್ಕಾರದಿಂದ ಪರಿಹಾರವು ದೊರೆಯಲಿದೆ. ಇನ್ಸುರೆನ್ಸ್ ತುಂಬಿದವರಿಗೂ ಬೆಳೆವಿಮೆ ಜತೆಗೆ ಪರಿಹಾರ ಸಿಗಲಿದೆ. ಇದರಲ್ಲಿ ಯಾವುದೇ ಗೊಂದಲ ಬೇಡ ಎಂದರು.