ಬಿಆರ್‌ಟಿಎಸ್‌: ಲೋಪದೋಷ ಸರಿಪಡಿಸಿ ಓಡಾಡಲಿ!

| Published : Sep 24 2024, 01:48 AM IST

ಸಾರಾಂಶ

ಒಂದು ವೇಳೆ ಬಿಆರ್‌ಟಿಎಸ್‌ ಬದಲು ಎಲ್‌ಆರ್‌ಟಿಗೆ ಒಪ್ಪಿಕೊಟ್ಟರೂ, ಅದಕ್ಕೆ ಅನುಮೋದನೆ ಸಿಕ್ಕು, ಅದಕ್ಕೆ ತಕ್ಕಂತೆ ಕಾರಿಡಾರ್‌ನ್ನು ನವೀಕರಿಸಿ ಅದನ್ನು ಓಡಿಸಬೇಕು ಎಂದರೆ ಮೂರ್ನಾಲ್ಕು ವರ್ಷವಾದರೂ ಬೇಕಾಗಬಹುದು.

ಹುಬ್ಬಳ್ಳಿ:

ಹುಬ್ಬಳ್ಳಿ-ಧಾರವಾಡ ಮಧ್ಯೆ ಓಡಾಡುತ್ತಿರುವ ಬಿಆರ್‌ಟಿಎಸ್‌ ಬಂದ್‌ ಮಾಡಿ ಪರ್ಯಾಯವಾಗಿ ಎಲ್‌ಆರ್‌ಟಿ ಓಡಿಸಲು ಚಿಂತನೆ ನಡೆದಿದೆ. ಆದರೆ ಇದರಲ್ಲಿ ಯಾವುದು ಉತ್ತಮ? ಎಲ್‌ಆರ್‌ಟಿ ಪ್ರಾರಂಭವಾಗಬೇಕೆಂದರೆ ಇನ್ನು ಎಷ್ಟು ದಿನ ಬೇಕಾಗಬಹುದು. ಅಂಥದ್ದರಲ್ಲಿ ಇದ್ದ ವ್ಯವಸ್ಥೆಯನ್ನೇ ಸರಿಪಡಿಸಲು ಸಾಧ್ಯವಿಲ್ಲವೇ? ಎಂಬೆಲ್ಲ ಪ್ರಶ್ನೆಗಳೀಗ ಸಾರ್ವಜನಿಕರನ್ನು ಕಾಡುತ್ತಿವೆ.

ಬಿಆರ್‌ಟಿಎಸ್‌ ಪ್ರಾರಂಭವಾಗಿ ಆರೇ ವರ್ಷಗಳಲ್ಲೇ ಬೇಡವಾಗಿದೆ. ಬೇಡವಾಗಲು ಪ್ರಮುಖ ಕಾರಣವೆಂದರೆ ಶೇ. 20ರಷ್ಟು ಓಡಾಡುವ ಜನರಿಗೆ ಪ್ರತ್ಯೇಕ ಕಾರಿಡಾರ್‌. ಶೇ. 80ರಷ್ಟು ಜನ ಓಡಾಡಲು ಮಿಶ್ರಪಥ. ಇದರಿಂದ ಟ್ರಾಫಿಕ್‌ ಜಾಮ್‌ ಕಿರಿಕಿರಿಯಾಗುತ್ತಿದೆ ಎಂಬ ಆಕ್ಷೇಪದಿಂದಾಗಿ ಇದಕ್ಕೆ ಪರ್ಯಾಯ ವ್ಯವಸ್ಥೆ ಜಾರಿಗೊಳಿಸಿ ಎಂಬ ಕೂಗು ಜೋರಾಯಿತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಈ ಸಂಬಂಧ ಸಮೀಕ್ಷೆಯನ್ನೂ ಮಾಡಿಸಿದರು. ಹೆಸ್‌ ಎಂಬ ಸಂಸ್ಥೆ ಸಮೀಕ್ಷೆಯನ್ನೂ ನಡೆಸಿತು. ಬಿಆರ್‌ಟಿಎಸ್‌ನಲ್ಲಿ ಲೋಪದೋಷಗಳ ಬಗ್ಗೆ ಪೂರ್ವಭಾವಿ ಸಭೆ ನಡೆಸಿದ್ದು ಆಗಿದೆ.

ಎಲ್‌ಆರ್‌ಟಿ ಒಪ್ಪಿಗೆ ಬೇಕಾ?:

ಒಂದು ವೇಳೆ ಬಿಆರ್‌ಟಿಎಸ್‌ ಬದಲು ಎಲ್‌ಆರ್‌ಟಿಗೆ ಒಪ್ಪಿಕೊಟ್ಟರೂ, ಅದಕ್ಕೆ ಅನುಮೋದನೆ ಸಿಕ್ಕು, ಅದಕ್ಕೆ ತಕ್ಕಂತೆ ಕಾರಿಡಾರ್‌ನ್ನು ನವೀಕರಿಸಿ ಅದನ್ನು ಓಡಿಸಬೇಕು ಎಂದರೆ ಮೂರ್ನಾಲ್ಕು ವರ್ಷವಾದರೂ ಬೇಕಾಗಬಹುದು. ಜತೆಗೆ ಕೋಟಿಗಟ್ಟಲೇ ದುಡ್ಡು ಕೂಡ ಸುರಿಯಬೇಕಾಗುತ್ತದೆ. ಇಷ್ಟೆಲ್ಲ ಮಾಡಿದರೂ ಅದು ಬಿಆರ್‌ಟಿಎಸ್‌ನಂತೆ ಆಗುವುದಿಲ್ಲ ಎಂಬುದು ಏನು ಗ್ಯಾರಂಟಿ ಎಂಬ ಪ್ರಶ್ನೆ ಪ್ರಯಾಣಿಕರದ್ದು. ಎಲ್ಆರ್‌ಟಿ 3 ಬೋಗಿ ಒಳಗೊಂಡಿದ್ದು ಸಂಪೂರ್ಣ ಎಲೆಕ್ಟ್ರಿಕ್ ಸಾಧನ ಹೊಂದಿದೆ. ಇದು ಏಕಕಾಲಕ್ಕೆ 250 ಪ್ರಯಾಣಿಕರನ್ನು ಹೊತ್ತೊಯ್ಯಲಿದೆ. ಈಗಿರುವ ಬಿಆರ್‌ಟಿಎಸ್ ಬಸ್‌ಗಳಂತೆ ಎಲ್ಆರ್‌ಟಿ ಕೂಡ ತಿರುವು ತೆಗೆದುಕೊಳ್ಳಲು ವ್ಯವಸ್ಥೆ ಹೊಂದಿವೆ.

ಸರಿಪಡಿಸಿ ಬಿಡಿ:

ಬಿಆರ್‌ಟಿಎಸ್‌ನ ಲೋಪದೋಷಗಳು ಎಲ್ಲಿ ಏನೇನಿವೆ ಎಂಬುದು ಈಗಾಗಲೇ ನಡೆಸಿರುವ ಸಮೀಕ್ಷೆಯಿಂದ ಗೊತ್ತಾಗಿದೆ. ಅದನ್ನೇ ಸರಿಪಡಿಸಲು ಕ್ರಮ ಕೈಗೊಳ್ಳಬೇಕು. ಏಳು ಕಡೆಗಳಲ್ಲಿ ಮಳೆ ನೀರು ಮೊಳಕಾಲಿನ ವರೆಗೆ ನಿಲ್ಲುತ್ತದೆ ಎಂದು ಗುರುತಿಸಲಾಗಿದೆ. ಅಲ್ಲಿ ನೀರು ನಿಲ್ಲದಂತೆ ಕ್ರಮಕೈಗೊಳ್ಳಬೇಕು. ಸದ್ಯ ಬಿಆರ್‌ಟಿಎಸ್‌ ಕಾರಿಡಾರ್‌ನಲ್ಲಿ 33 ಟ್ರಾಫಿಕ್‌ ಸಿಗ್ನಲ್‌ ಬರುತ್ತವೆ. ಬಿಆರ್‌ಟಿಎಸ್‌ಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇದನ್ನು ಕೊಂಚ ಬದಲಿಸಿ ಮಿಶ್ರಪಥದಲ್ಲಿನ ವಾಹನಗಳಿಗೆ ಆದ್ಯತೆ ನೀಡಿದರೆ ಟ್ರಾಫಿಕ್‌ ಕಿರಿಕಿರಿ ಅಷ್ಟೊಂದು ಆಗಲ್ಲ. ಬಸ್‌ಗಳ ದುರಸ್ತಿ ಕಾಲ ಕಾಲಕ್ಕೆ ಸರಿಯಾಗಿ ಮಾಡಬೇಕು, ಅಂದಾಗ ಬಿಆರ್‌ಟಿಎಸ್‌ ಸಮಸ್ಯೆ ಆಗದು ಎಂಬುದು ಸಾರ್ವಜನಿಕರ ಅಂಬೋಣ.

ದೇಶದಲ್ಲೇ ಸಾಮೂಹಿಕ ಸಾರಿಗೆ ವ್ಯವಸ್ಥೆಯಲ್ಲಿ ಬಿಆರ್‌ಟಿಎಸ್‌ ಉತ್ತಮ ಎಂದು ಕೇಂದ್ರ ಸರ್ಕಾರ ಕೂಡ ಒಪ್ಪಿಕೊಂಡಿದೆ. ಬಿಆರ್‌ಟಿಎಸ್‌ ಕಾರಿಡಾರ್‌ನಲ್ಲಿ ಬರೋಬ್ಬರಿ 130 ಬಸ್‌ಗಳನ್ನು ಓಡಿಸುವ ಸಾಮರ್ಥ್ಯ ಹೊಂದಿದೆ ಎಂದು ಹೇಳಲಾಗಿದೆ. ಇನ್ನಷ್ಟು ಬಸ್‌ ತರಿಸಬೇಕು. ಅವು ವಿದ್ಯುತ್‌ ಚಾಲಿತ ಬಸ್‌ಗಳಿದ್ದರೆ ಅನುಕೂಲವಾಗುತ್ತದೆ. ಅದು ಬಿಟ್ಟು ಯೋಜನೆಯನ್ನು ಸ್ಥಗಿತಗೊಳಿಸುವುದು ಎಷ್ಟರ ಮಟ್ಟಿಗೆ ಸೂಕ್ತ ಎಂಬ ಪ್ರಶ್ನೆ ಬಿಆರ್‌ಟಿಎಸ್‌ ಪ್ರಯಾಣಿಕರದ್ದು.