ಹೊಸಕೋಟೆ: ಬೆಂಗಳೂರು ನಗರ ನಿರ್ಮಿಸಿ ಅಭಿವೃದ್ಧಿಯ ಕನಸು ಕಂಡ ಕೆಂಪೇಗೌಡರು ದೂರದೃಷ್ಟಿ ನಾಯಕರು. ಅವರು ವಿಜಯನಗರ ಸಾಮ್ರಾಜ್ಯದ ಅಧೀನದಲ್ಲಿದ್ದ ಸಾಮಂತ ರಾಜರಾಗಿದ್ದರೂ ಯುದ್ಧ ಮತ್ತು ಸಂಘರ್ಷಗಳ ಬದಲು ಶಾಂತಿ, ಆಡಳಿತ ಹಾಗೂ ಅಭಿವೃದ್ಧಿಗೆ ಆದ್ಯತೆ ನೀಡಿದರು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ನಗರದಲ್ಲಿ ತಾಲೂಕು ಆಡಳಿತ ಹಾಗೂ ಹೊಸಕೋಟೆ ಟೌನ್ ಒಕ್ಕಲಿಗರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ 157ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ ಸಮಾಜದ ಎಲ್ಲಾ ವರ್ಗಗಳ ಜನರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಹಬ್ಬವಾಗಿದೆ. ತಾಲೂಕಿನಲ್ಲಿ ವಿವಿಧ ಮಹನೀಯರ ಜಯಂತಿಗಳನ್ನು ಎಲ್ಲ ಜಾತಿ, ಧರ್ಮ ಹಾಗೂ ಸಮುದಾಯಗಳ ಮುಖಂಡರು ಒಟ್ಟಾಗಿ ಆಚರಿಸುತ್ತಿರುವುದು ವಿಶೇಷ. ಇದು ಸಾಮಾಜಿಕ ಸಾಮರಸ್ಯದ ಸಂಕೇತ ಎಂದು ಹೇಳಿದರು. ಕೆಂಪೇಗೌಡರು ನಗರದ ಅಭಿವೃದ್ಧಿಗೆ ಮುಖ್ಯವಾಗಿ ವ್ಯಾಪಾರ, ನೀರಾವರಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆಗೆ ವಿಶೇಷ ಗಮನ ಹರಿಸಿದ್ದರು. ಬೆಂಗಳೂರು ಸುತ್ತಮುತ್ತ ಕೆರೆಗಳನ್ನು ನಿರ್ಮಿಸಿ, ಅವುಗಳಿಗೆ ನೀರು ಹರಿಯುವ ವ್ಯವಸ್ಥೆಯನ್ನು ಕಲ್ಪಿಸಿದ್ದರು. ಕೃಷಿ ಭೂಮಿಗೆ ನೀರಿನ ಸೌಲಭ್ಯ ಒದಗಿಸಿ ಜನಜೀವನ ಸುಧಾರಣೆ ಮಾಡಿದ್ದರು. ಇಂದು ಬೆಂಗಳೂರು ಬೃಹತ್ತಾಗಿ ಬೆಳೆಯಲು ಕೆಂಪೇಗೌಡರ ದೂರದೃಷ್ಟಿ ಮತ್ತು ಅಭಿವೃದ್ಧಿ ಪರ ಚಿಂತನೆಯೇ ಕಾರಣ ಎಂದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಶೀತಲ್ ಟಿಎಸ್, ತಾಪಂ ಇಒ ಮುನಿಯಪ್ಪ, ಬಿಇಒ ಪದ್ಮನಾಭ, ಡಿವೈಎಸ್ಪಿ ಮಲ್ಲೇಶ್, ಬಿಎಂಆರ್‌ಡಿಎ ಅಧ್ಯಕ್ಷ ಕೇಶವಮೂರ್ತಿ, ಬಿಎಂಆರ್‌ಡಿಎ ಸದಸ್ಯ ಸುಬ್ಬರಾಜು, ಮಾಜಿ ಅದ್ಯಕ್ಷ ಸಿ.ಜಯರಾಜ್, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕೃಷ್ಣಮೂರ್ತಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದರಾಜು, ಟೌನ್ ಕಾಂಗ್ರೆಸ್ ಅಧ್ಯಕ್ಷ ಬಿವಿ.ಭೈರೇಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಬಿ.ವಿ.ರಾಜಶೇಖರ್ ಗೌಡ, ತಾಪಂ ಮಾಜಿ ಅಧ್ಯಕ್ಷ ಕೆಂಚೇಗೌಡ, ಹಿರಿಯ ಮುಖಂಡ ಕೊರಳೂರು ಹನುಮಂತೇಗೌಡ ಹಾಜರಿದ್ದರು.

ಫೋಟೋ: 27 ಹೆಚ್‌ಎಸ್ ಕೆ 3

ಹೊಸಕೋಟೆ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ 157ನೇ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಶರತ್ ಬಚ್ಚೇಗೌಡ, ತಹಸೀಲ್ದಾರ್ ಶೀತಲ್ ಟಿಎಸ್ ಇತರರು ಪಾಲ್ಗೊಂಡಿದ್ದರು.