ಹೊರ ರಾಜ್ಯದ ಯುವಕನಿಗೆ ಅಮಾನುಷ ಹಲ್ಲೆ

| Published : Mar 30 2024, 12:52 AM IST

ಸಾರಾಂಶ

ಗೆಸ್ಟ್‌ಹೌಸ್‌ನ ಸಿಸಿ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು ಇಬ್ಬರು ಸದಸ್ಯರು ಸೇರಿ ಹಲ್ಲೆ ನಡೆಸುತ್ತಿದ್ದಾರೆ. ಹಲ್ಲೆಗೊಳಗಾದ ಯುವಕನ ಜೊತೆಗಿರುವ ವ್ಯಕ್ತಿಗೂ ಹಲ್ಲೆ ನಡೆಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಹೊರ ರಾಜ್ಯದ ಯುವಕನೊಬ್ಬನ ಮೇಲೆ ಮನೆ ಮಂದಿ ಅಮಾನುಷವಾಗಿ ಹಲ್ಲೆ ನಡೆಸಿದ ಘಟನೆ ಮಂಗಳೂರು ಹೊರವಲಯದ ಅರ್ಕುಳ ಎಂಬಲ್ಲಿ ನಡೆದಿದೆ ಎನ್ನಲಾಗಿದೆ. ಈ ಕುರಿತ ಸಿಸಿ ಕ್ಯಾಮರಾ ದೃಶ್ಯದ ತುಣುಕು ಜಾಲತಾಣದಲ್ಲಿ ಹರಿದಾಡುತ್ತಿದೆ. ಹಲ್ಲೆಗೆ ಒಳಗಾದ ವ್ಯಕ್ತಿ ಬಿಹಾರ ಮೂಲದವ ಎಂದು ತಿಳಿಯಲಾಗಿದೆ.

ಗೆಸ್ಟ್‌ ಹೌಸ್‌ ಒಂದರ ನಿವಾಸಿಗಳು ಹೊರ ರಾಜ್ಯದ ಯುವಕನಿಗೆ ಬೆಲ್ಟ್ ಹಾಗೂ ಸ್ಟೂಲ್‌ನಲ್ಲಿ ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ದಾಖಲಾಗಿದೆ. ಯಾವುದೋ ಸೊತ್ತಿನ ಬಗ್ಗೆ ವಿಚಾರಣೆ ನಡೆಸಿ ಹಲ್ಲೆಗೊಳಗಾಗುತ್ತಿರುವ ಯುವಕನಲ್ಲಿ ಪ್ರಶ್ನಿಸುತ್ತಿರುವುದು ವಿಡಿಯೋ ತುಣುಕಿನಲ್ಲಿ ಕಂಡು ಬಂದಿದೆ.ತುಳು, ಹಿಂದಿಯಲ್ಲಿ ಮಾತನಾಡುತ್ತಿದ್ದು, ಏಟು ತಿನ್ನುತ್ತಾ ಯುವಕ ತನ್ನ ಮೇಲಿನ ಆರೋಪಕ್ಕೆ ಹಿಂದಿ ಭಾಷೆಯಲ್ಲಿ ಉತ್ತರಿಸುತ್ತಿರುವ ಮಾತು ಕೇಳುತ್ತಿದೆ.

ಗೆಸ್ಟ್‌ಹೌಸ್‌ನ ಸಿಸಿ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು ಇಬ್ಬರು ಸದಸ್ಯರು ಸೇರಿ ಹಲ್ಲೆ ನಡೆಸುತ್ತಿದ್ದಾರೆ. ಹಲ್ಲೆಗೊಳಗಾದ ಯುವಕನ ಜೊತೆಗಿರುವ ವ್ಯಕ್ತಿಗೂ ಹಲ್ಲೆ ನಡೆಸಲಾಗಿದೆ.

ಈ ಬಗ್ಗೆ ಗ್ರಾಮಾಂತರ ಪೊಲೀಸರನ್ನು ಕೇಳಿದಾಗ, ಈ ವಿಡಿಯೋ ತುಣುಕು ನಮಗೂ ಸಿಕ್ಕಿದೆ. ಆತ ಬಿಹಾರ ಮೂಲದವನಾಗಿದ್ದು, ಕದ್ದ ಬಳೆಯನ್ನು ವಾಪಸ್‌ ಕೊಟ್ಟಿದ್ದಾನೆ. ಹಾಗಾಗಿ ಮನೆಯವರು ಆತನನ್ನು ಕೆಲಸ ಬಿಡಿಸಿ ಕಳುಹಿಸಿಕೊಟ್ಟಿದ್ದಾರೆ. ಆತ ಬಿಹಾರಕ್ಕೆ ಮರಳಿ ಹೋಗಿದ್ದು, ಹಲ್ಲೆ ಘಟನೆ ನಡೆದ ಬಗ್ಗೆ ಮಾಹಿತಿ ಇಲ್ಲ ಎಂದಿದ್ದಾರೆ.