ದಯಾ ಮರಣಕ್ಕಾಗಿ ದಶಕಗಳಿಂದಲೂ ಹೋರಾಟ ನಡೆಸುತ್ತಿರುವ ನಿವೃತ್ತ ಶಿಕ್ಷಕಿ ಎಚ್.ಬಿ.ಕರಿಬಸಮ್ಮ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರಯೋಧರ ಕುಟುಂಬಗಳ ನಿಧಿ (ಭಾರತ್ ಕೆ ವೀರ್ ಟ್ರಸ್ಟ್)ಗೆ ₹10 ಲಕ್ಷ ದೇಣಿಗೆ ನೀಡಿ, ನಿಸ್ವಾರ್ಥ ದೇಶಪ್ರೇಮ ಮರೆದಿದ್ದರು. ಈ ಹಿನ್ನೆಲೆಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮುಕ್ತಕಂಠದಿಂದ ಶ್ಲಾಘಿಸಿ, ವಿಶೇಷ ಕೃತಜ್ಞತಾ ಪತ್ರ ಬರೆದಿದೆ.
- ಭಾರತ್ ಕೆ ವೀರ್ ಟ್ರಸ್ಟ್‌ಗೆ ₹10 ಲಕ್ಷ ದೇಣಿಗೆ ನೀಡಿದ್ದ ದಯಾ ಮರಣ ಹೋರಾಟಗಾರ್ತಿ - ದಶಕಗಳ ಹಿಂದೆ ರೇಡಿಯೋದಲ್ಲಿ ಯೋಧರ ಸ್ಥಿತಿಗತಿ ಕೇಳಿ ಮರುಗಿದ್ದ ಹಿರಿಯ ಜೀವವಿದು
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ದಯಾ ಮರಣಕ್ಕಾಗಿ ದಶಕಗಳಿಂದಲೂ ಹೋರಾಟ ನಡೆಸುತ್ತಿರುವ ನಿವೃತ್ತ ಶಿಕ್ಷಕಿ ಎಚ್.ಬಿ.ಕರಿಬಸಮ್ಮ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರಯೋಧರ ಕುಟುಂಬಗಳ ನಿಧಿ (ಭಾರತ್ ಕೆ ವೀರ್ ಟ್ರಸ್ಟ್)ಗೆ ₹10 ಲಕ್ಷ ದೇಣಿಗೆ ನೀಡಿ, ನಿಸ್ವಾರ್ಥ ದೇಶಪ್ರೇಮ ಮರೆದಿದ್ದರು. ಈ ಹಿನ್ನೆಲೆಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮುಕ್ತಕಂಠದಿಂದ ಶ್ಲಾಘಿಸಿ, ವಿಶೇಷ ಕೃತಜ್ಞತಾ ಪತ್ರ ಬರೆದಿದೆ.ನಗರದ ಎಂಸಿಸಿ ಎ ಬ್ಲಾಕ್‌ನ ಹಿರಿಯ ನಾಗರೀಕರ ಆರೈಕೆ ಕೇಂದ್ರದಲ್ಲಿ ಇಳಿ ಸಂಜೆ ಕಳೆಯುತ್ತಿರುವ ನಿವೃತ್ತ ಶಿಕ್ಷಕಿ, ದಯಾ ಮರಣ ಹೋರಾಟಗಾರರೂ ಆದ ಎಚ್.ಬಿ. ಕರಿಬಸಮ್ಮ ತಮ್ಮ ಜೀವನದುದ್ದಕ್ಕೂ ಶಿಕ್ಷಕಿಯಾಗಿ ಉಳಿಸಿದ, ಪಿಂಚಣಿ, ಇಡುಗಂಟು ಸೇರಿದಂತೆ ತಮ್ಮ ಜೀವಿತಾವಧಿಯ ಸಂಪಾದನೆಯ ಹಣದ ಪೈಕಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರಯೋಧರ ಕುಟುಂಬಗಳಿಗೆ ತಮ್ಮ ಕೈಲಾದ ಅಳಿಲು ಸೇವೆ ಸಲ್ಲಿಸಬೇಕೆಂಬುದಾಗಿ ದಶಕಗಳಿಂದಲೂ ನಿರ್ಧರಿಸಿದ್ದರು.
ಕಳೆದ ಜೂ.22ರಂದು ತಮ್ಮ ಹಳೆಯ ವಿದ್ಯಾರ್ಥಿ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿ ಸ್ವಾಮಿ, ತಮ್ಮ ಸಹಾಯಕರ ಜೊತೆಗೂಡಿ ಜಿಲ್ಲಾಡಳಿತ ಭವನಕ್ಕೆ ತೆರಳಿದ್ದ ಎಚ್.ಬಿ. ಕರಿಬಸಮ್ಮ ತಮ್ಮ ಜೀವನದುದ್ದಕ್ಕೂ ಶಿಕ್ಷಕ ವೃತ್ತಿ ನಿರ್ವಹಿಸಿ, ಉಳಿಸಿದ ಹಣದ ಪೈಕಿ ₹10 ಲಕ್ಷವನ್ನು ಭಾರತೀಯ ಸೇನೆಯ ಹುತಾತ್ಮ ಯೋಧಕ ಕುಟುಂಬಗಳ ನಿಧಿಗೆ ನೀಡಿದ್ದರು. ಅದನ್ನು ಜಿಲ್ಲಾಡಳಿತ ಬಿಎಸ್ಎಫ್‌ಗೆ ಕಳಿಸಿತ್ತು.ಕರಿಬಸಮ್ಮ ಕಳಿಸಿದ ₹10 ಲಕ್ಷಗಳ ದೇಣಿಗೆಯನ್ನು ಗೌರವಪೂರ್ವಕವಾಗಿ ಸ್ವೀಕರಿಸಿದ್ದಕ್ಕೆ ಪ್ರತಿಯಾಗಿ ಬಿಎಸ್ಎಫ್‌ನ ಮಹಾ ನಿರೀಕ್ಷಕ (ಆಡಳಿತ) ವಿಜಯಕುಮಾರ ಥಪ್ಲಿಯಾಲ್ ನಿವೃತ್ತ ಶಿಕ್ಷಕಿ ಕರಿಬಸಮ್ಮ ಅವರಿಗೆ ವಿಶೇಷ ಕೃತಜ್ಞತಾ ಪತ್ರ ಬರೆದಿದ್ದಾರೆ. ನಿಮ್ಮ ಈ ಉದಾತ್ತ ಕಾರ್ಯವು ಅಪಾರ ದೇಶಪ್ರೇಮ, ಕರುಣೆ ಹಾಗೂ ಅತ್ಯುನ್ನತ ತ್ಯಾಗ ಮಾಡಿದ ನಮ್ಮ ಅಮರ ಜವಾನರ ಕುಟುಂಬಗಳ ಬಗ್ಗೆ ನಿಮಗಿರುವ ಜವಾಬ್ದಾರಿಯನ್ನು ತೋರಿಸುತ್ತದೆ. ಶಿಕ್ಷಕಿಯಾಗಿ ನಿಮ್ಮ ಜೀವನ ಪೂರ್ತಿ ಯುವ ಮನಸುಗಳನ್ನು ರೂಪಿಸಿ, ಸಮಾಜದಲ್ಲಿ ಮೌಲ್ಯ ಬಿತ್ತಿದ್ದೀರಿ. ನಿವೃತ್ತಿ ನಂತರವೂ ನಿಮ್ಮ ಈ ನಿಸ್ವಾರ್ಥ ಸೇವೆ ಸಮಾಜಕ್ಕೆ ಪ್ರೇರಣೆಯಾಗಿದೆ ಎಂದು ಪತ್ರದಲ್ಲಿ ಶ್ಲಾಘಿಸಿದ್ದಾರೆ.
ಭಾರತ್ ಕೆ ವೀರ್ ಟ್ರಸ್ಟ್‌ಗೆ ಜೂ.22ರಂದು ದಾವಣಗೆರೆ ಜಿಲ್ಲಾಧಿಕಾರಿ ಕಚೇರಿ ಮುಖಾಂತರ ಕೇಂದ್ರ ಗೃಹ ಸಚಿವಾಲಯದ ಬಿಎಸ್ಎಫ್ ವಿಭಾಗಕ್ಕೆ ಈ ಬಗ್ಗೆ ಮಾಹಿತಿ ರವಾನೆಯಾಗಿತ್ತು. ಕರಿಬಸಮ್ಮನವರು ನೀಡಿದ್ದ ₹10 ಲಕ್ಷ ಮೊತ್ತದ ಚೆಕ್ ಜುಲೈ 13ರಂದು ಭಾರತ್ ಕೆ ವೀರ್ ಖಾತೆಗೆ ಸಂಪೂರ್ಣ ಹಣ ಯಶಸ್ವಿಯಾಗಿ ಜಮಾ ಆಗಿದೆ. ಬಿಎಸ್‌ಎಫ್ ಡೆಪ್ಯುಟಿ ಕಮಾಂಡೆಂಟ್ ಜಿತೇಂದ್ರಕುಮಾರ ಟ್ರಸ್ಟ್‌ಗೆ ಹಣವನ್ನು ಅಧಿಕೃತವಾಗಿ ಸ್ವೀಕರಿಸಿದ ಬಗ್ಗೆ ಸ್ವೀಕೃತಿಯನ್ನೂ ನೀಡಿದ್ದಾರೆ. ಅಲ್ಲದೇ, ಕರಿಬಸಮ್ಮನವರ ಇಂತಹ ನಿಸ್ವಾರ್ಥ ಸೇವೆಗೆ ಗಡಿ ಭದ್ರತಾ ಪಡೆಯಿಂದ ಹೆಮ್ಮೆಯಿಂದ ಪ್ರಣಾಮ ಸಲ್ಲಿಸುತ್ತದೆ ಎಂದು ಹೇಳಿದ್ದಾರೆ.- - -
(ಬಾಕ್ಸ್-1)* ಮನೆ ಮಾರಿದ್ದು, ಪಿಂಚಣಿ ಎಲ್ಲ ಹಣ ಕೊಟ್ಟ ಮಹಾತಾಯಿ!
ಬಿಎಸ್ಎಫ್‌ನಿಂದ ಕೃತಜ್ಞತಾ ಪತ್ರ ಬಂದ ಬಗ್ಗೆ ತಮ್ಮ ಶ್ರಮ, ಕಾಳಜಿ, ಪ್ರಯತ್ನ ಸಾರ್ಥಕವಾದ ಬಗ್ಗೆ ತಮ್ಮ ಆತ್ಮತೃಪ್ತಿಯನ್ನು ಹಂಚಿಕೊಂಡ ದಯಾ ಮರಣ ಹೋರಾಟಗಾರ್ತಿ, ನಿವೃತ್ತ ಶಿಕ್ಷಕಿ ಕರಿಬಸಮ್ಮ, 5 ದಶಕದ ಹಿಂದೆ ಕೇವಲ ರೇಡಿಯೋಗಳಿದ್ದ ಕಾಲದಲ್ಲಿ ಗಡಿಯಲ್ಲಿ ಕಠಿಣ, ಪ್ರತಿಕೂಲ ಪರಿಸ್ಥಿತಿಯಲ್ಲಿ ನಮ್ಮ ದೇಶದ ಗಡಿ ಕಾಯುವ ಯೋಧರ ಕಷ್ಟಗಳ ಬಗ್ಗೆ ಕೇಳಿದಾಗಲ್ಲೆಲ್ಲಾ ಮನಸ್ಸು ಸದಾ ನೋಯುತ್ತಿತ್ತು. ತಮ್ಮ ಹೆಂಡತಿ, ಮಕ್ಕಳು, ವಯಸ್ಸಾದ ಹೆತ್ತವರ ಯೋಗಕ್ಷೇಮ ವಿಚಾರಿಸಲು ಕಡಿದಾದ ಬೆಟ್ಟ- ಗುಡ್ಡಗಳಿಂದ ಮೈಲುಗಟ್ಟಲೇ ನಡೆದು ಬರುವ ಸೈನಿಕರ ಪರಿಸ್ಥಿತಿ ಮನಸ್ಸನ್ನು ಕಲುಕಿತ್ತು ಎಂದು ಮೆಲಕು ಹಾಕಿದ್ದಾರೆ.ತಾವು ಶಿಕ್ಷಕಿಯಾಗಿ ಗಡಿ ವಿಚಾರಗಳನ್ನು ರೇಡಿಯೋದಲ್ಲಿ ಕೇಳುತ್ತಿದ್ದಾಗ, ಆಗಿನಿಂದಲೇ ದೇಶಕ್ಕಾಗಿ ನಾನೇನಾದರೂ ಸೇವೆ ಮಾಡಬೇಕೆಂಬ ಸಂಕಲ್ಪ ಮಾಡಿದ್ದೆ. ನಂತರ ದಯಾಮರಣ ಹೋರಾಟಕ್ಕಿಳಿದಾಗ ತಮಗೆ ಹಣದ ಅವಶ್ಯಕತೆ ಎದುರಾಯಿತು. ದಾವಣಗೆರೆಯಲ್ಲಿ ಅನೇಕ ಗಣ್ಯರು ಹಣದ ಸಹಾಯ ಮಾಡಲು ಮುಂದೆ ಬಂದರು. ಆದರೆ, ಯಾರಿಂದಲೂ ನಯಾಪೈಸೆ ಸ್ವೀಕರಿಸದೇ, ನಮ್ಮ ಸ್ವಂತ ಮನೆ ಮಾರಾಟ ಮಾಡಿದೆ. ಮನೆ ಮಾರಿದಾಗ ಬಂದ ಹಣದಲ್ಲಿ ₹6 ಲಕ್ಷವನ್ನು ಬಿಎಸ್ಎಫ್ ನಿಧಿಗೆ, ವೀರಯೋಧರಿಗೆಂದೇ ಮೀಸಲಿಟ್ಟಿದ್ದೆ. ಆ ಹಣವನ್ನು ಹಾಗೆಯೇ ಉಳಿಸಿಕೊಂಡು, ನನ್ನ ಪಿಂಚಣಿ ಹಣ, ಬಡ್ಡಿ ಸೇರಿ ಒಟ್ಟು ₹10 ಲಕ್ಷಗಳಾಗಿದ್ದನ್ನು ವೀರ ಹುತಾತ್ಮ ಯೋಧರ ಕುಟುಂಬದ ನೆರವಿಗೆ ನೀಡಿದ್ದೆ ಎಂದು ತಿಳಿಸಿದರು.
ತಾವು ಉಳಿಸಿದ್ದ ₹10 ಲಕ್ಷ ಹಣವನ್ನು ದೇಶದ ಸೈನಿಕರ ನಿಧಿಗೆ ಜಿಲ್ಲಾಧಿಕಾರಿ ಮುಖಾಂತರ ಅರ್ಪಿಸಿದ್ದೆ. ಈಗ ಬಿಎಸ್ಎಫ್ ಅಧಿಕಾರಿಗಳಿಂದ ದೇಣಿಗೆ ಸಂದಾಯವಾದ ಬಗ್ಗೆ ಹಾಗೂ ತಮಗೆ ಕೃತಜ್ಞತೆ ಸಲ್ಲಿಸಿದ ಪತ್ರ ಬಂದಿದೆ. ಇದು ನನಗೆ ಆತ್ಮತೃಪ್ತಿ ತಂದಿದೆ. ದೇಶಕ್ಕಾಗಿ ನಾನು ಮಾಡಿದ ಒಂದು ಸಣ್ಣ ಅಳಿಲು ಸೇವೆ ಸಾರ್ಥಕವಾಯಿತೆಂಬ ತೃಪ್ತಭಾವವು ನನ್ನ ಕಣ್ಣಂಚಿನಲ್ಲಿ ನೀರು ತಂದಿದೆ. ಹುತಾತ್ಮ ಯೋಧರ ಕುಟುಂಬಕ್ಕೆ ದೇಶದ ಪ್ರತಿಯೊಬ್ಬರೂ ತಮ್ಮ ಕೈಲಾದ ಸಹಾಯವನ್ನು ಬಿಎಎಸ್‌ಎಫ್‌ನ ಭಾರತ್ ಕೆ ವೀರ್ ಟ್ರಸ್ಟ್ ಮೂಲಕ ಮಾಡಬೇಕು ಎಂದು ಎಚ್.ಬಿ. ಕರಿಬಸಮ್ಮ ಮನವಿ ಮಾಡಿದ್ದಾರೆ.- - -
(ಬಾಕ್ಸ್-2)* ನಮ್ಮ ಯೋಧರಿಗೆ ಸಲ್ಲಿಸಿದ ಸೇವೆ ಆತ್ಮತೃಪ್ತಿ
ದಯಾ ಮರಣಕ್ಕಾಗಿ ನಿರಂತರ ಹೋರಾಡಿದ ಪರಿಣಾಮ ಬಿಪಿ, ಶುಗರ್, ಪೆಪ್ಟಿಕ್ ಅಲ್ಸರ್, ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗೆ ತುತ್ತಾಗಿದ್ದೆ. ಅನಾರೋಗ್ಯದ ಏರುಪೇರಿನ ಮಧ್ಯೆ ನಮ್ಮ ಸೈನಿಕರಿಗೆ ಏನಾದರೂ ಸಹಾಯ ಮಾಡಲೇಬೇಕೆಂಬ ನನ್ನ ಸಂಕಲ್ಪ ಮಾತ್ರ ಈಗಲೂ ಕುಗ್ಗಿಲ್ಲ. ಆರೋಗ್ಯದಲ್ಲಿ ಏರುಪೇರು ಆಗುತ್ತಿರುವುದರಿಂದ, ಆದಷ್ಟು ಬೇಗ ಆ ಹಣವನ್ನು ದೇಶಕ್ಕೆ ಒಪ್ಪಿಸಿ ಋಣಮುಕ್ತಳಾಗಬೇಕು ಎಂಬ ಆಸೆ ಇತ್ತು. ಅದು ಈಗ ಈಡೇರಿದೆ. ಪ್ರಧಾನಿ ನರೇಂದ್ರ ಮೋದಿ ಮುಖಾಂತರ ₹10 ಲಕ್ಷ ನೀಡಲು ಉದ್ದೇಶಿಸಿದ್ದೆ. ಆದರೆ, ಅದು ಸಾಧ್ಯವಾಗಲಿಲ್ಲ. ವೀರಯೋಧರ ಹೆಸರಿಗೆ ಸಂಕಲ್ಪ ಮಾಡಿಟ್ಟಿದ್ದ ಈ ಹಣವನ್ನು ಬಿಎಸ್ಎಫ್ ನಿಧಿಗೆ ಹಸ್ತಾಂತರಿಸಿದ್ದೆ. ಈಗ ಬಿಎಸ್ಎಫ್‌ನಿಂದ ಪತ್ರ ಬಂದಿದ್ದು ನನಗೆ ಮತ್ತಷ್ಟು ಧನ್ಯತಾ ಭಾವ ತಂದಿದೆ ಎಂದರು.- - -
-19ಕೆಡಿವಿಜಿ1, 2: ಬಿಎಸ್‌ಎಫ್ ಯೋಧರ ಕಲ್ಯಾಣಕ್ಕೆ ನಿವೃತ್ತ ಶಿಕ್ಷಕಿ ಎಚ್.ಬಿ.ಕರಿಬಸಮ್ಮ ₹10 ಲಕ್ಷ ನೀಡಿದ್ದ ಹಿನ್ನೆಲೆಯಲ್ಲಿ ಗಡಿ ಭದ್ರತಾ ಪಡೆ ಅಧಿಕಾರಿಗಳಿಂದ ಬಂದ ಕೃತಜ್ಞತಾ ಮತ್ತು ಪ್ರಶಂಸಾ ಪತ್ರಗಳು. -19ಕೆಡಿವಿಜಿ3, 4: ಭಾರತೀಯ ಸೇನೆ ಯೋಧರ ಕಲ್ಯಾಣ ನಿಧಿಗೆ ಜು.22ರಂದು ದಾವಣಗೆರೆಯಲ್ಲಿ ದಯಾ ಮರಣ ಹೋರಾಟಗಾರ್ತಿ, ನಿವೃತ್ತ ಶಿಕ್ಷಕಿ ಕರಿಬಸಮ್ಮ ₹10 ಲಕ್ಷ ಮೊತ್ತದ ಚೆಕ್ ಅನ್ನು ವಿಪ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿ ಸ್ವಾಮಿ ಸಮ್ಮುಖ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮುಖಾಂತರ ಸೇನೆಗೆ ಸಮರ್ಪಿಸಿದ್ದ ಸಂಗ್ರಹ ಚಿತ್ರ.