ಸಾರಾಂಶ
ನರಸಿಂಹರಾಜಪುರ, ತಾಲೂಕಿನ ಮುತ್ತಿನಕೊಪ್ಪ ಗ್ರಾಮದಲ್ಲಿ ಬರುವ ತಾವರಗಟ್ಟೆ ಎಂಬ ಪ್ರದೇಶದಲ್ಲಿ ಬರುವ ಬಿಎಸ್‌ಎನ್ ಎಲ್ ಟವರ್ ಇದ್ದು ಕಳೆದ 6 ವರ್ಷದಿಂದಲೂ ಸರಿಯಾಗಿ ಕಾರ್ಯ ನಿರ್ವಹಿಸದೆ ಸುತ್ತ ಮುತ್ತಲಿನ ಗ್ರಾಮಗಳ 2-3 ಸಾವಿರ ಗ್ರಾಹಕರು ಪರದಾಡುವಂತಾಗಿದೆ ಎಂದು ಆ ಭಾಗದ ಬಿಎಸ್ ಎನ್‌ಎಲ್ ಗ್ರಾಹಕರು ದೂರಿದ್ದಾರೆ.
ಮುತ್ತಿನಕೊಪ್ಪ ಗ್ರಾಮ ತಾವರೆಗಟ್ಟೆಯಲ್ಲಿ 6 ವರ್ಷದಿಂದ ಸಮಸ್ಯೆ। ಟವರ್ ನಂಬಿ 2 ಸಾವಿರ ಜನ ಸಿಮ್ ಬಳಕೆ । ಸರಿಮಾಡದಿದ್ದರೆ ಕಚೇರಿಗೆ ಮುತ್ತಿಗೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರತಾಲೂಕಿನ ಮುತ್ತಿನಕೊಪ್ಪ ಗ್ರಾಮದಲ್ಲಿ ಬರುವ ತಾವರಗಟ್ಟೆ ಎಂಬ ಪ್ರದೇಶದಲ್ಲಿ ಬರುವ ಬಿಎಸ್‌ಎನ್ ಎಲ್ ಟವರ್ ಇದ್ದು ಕಳೆದ 6 ವರ್ಷದಿಂದಲೂ ಸರಿಯಾಗಿ ಕಾರ್ಯ ನಿರ್ವಹಿಸದೆ ಸುತ್ತ ಮುತ್ತಲಿನ ಗ್ರಾಮಗಳ 2-3 ಸಾವಿರ ಗ್ರಾಹಕರು ಪರದಾಡುವಂತಾಗಿದೆ ಎಂದು ಆ ಭಾಗದ ಬಿಎಸ್ ಎನ್‌ಎಲ್ ಗ್ರಾಹಕರು ದೂರಿದ್ದಾರೆ.
ಕಳೆದ 8 ವರ್ಷಗಳ ಹಿಂದೆ ಬಿಎಸ್ ಎನ್‌ಎಲ್ ತಾವರಗಟ್ಟೆಯಲ್ಲಿ ಪ್ರಾರಂಭವಾದಾಗ ಸುತ್ತ ಮುತ್ತಲಿನ ಹಳ್ಳಿಗಳಾದ ದೊಡ್ಡಿನತಲೆ, ಮುತ್ತಿನಕೊಪ್ಪ, ಕೆ.ಕಣಬೂರು, ಕುಸುಬೂರು, ಕುಸುಬೂರು ಕಾಲೋನಿ, ಹೊಸಕೊಪ್ಪ, ಕುಶಾಲಪುರ, ಸಾತ್ಕೋಳಿ, ಹೊಸಕೊಪ್ಪ ಮುಂತಾದ ಗ್ರಾಮಸ್ಥರು ನಮ್ಮೂರಿಗೂ ಬಿಎಸ್ ಎನ್ ಎಲ್ ಸಿಗ್ನಲ್ ಸಿಕ್ಕುತ್ತದೆ ಎಂದು ಸಂಭ್ರಮ ಪಟ್ಟಿದ್ದರು. 1-2 ವರ್ಷ ಸಿಗ್ನಲ್ ಸಮರ್ಪಕವಾಗಿತ್ತು. ಆದರೆ, ಕಳೆದ 6 ವರ್ಷಗಳ ಹಿಂದೆ ಸಮಸ್ಯೆ ಪ್ರಾರಂಭವಾಯಿತು. ಇದ್ದಕ್ಕಿದ್ದಂತೆ ಸಿಗ್ನಲ್ ಹೋಗಲು ಪ್ರಾರಂಭವಾಯಿತು. ಕರೆಂಟು ಇದ್ದಾಗ ಸಿಗ್ನಲ್ ಬರುತ್ತದೆ. ಕರೆಂಟು ಹೋದಾಗ ಸಿಗ್ನಲ್ ಕೈಕೊಡುತ್ತದೆ. ಇದಕ್ಕೆ ಪರಿಹಾರ ಎಂಬಂತೆ ಕೆಲವು ತಿಂಗಳು ಜನರೇಟರ್ ತಂದು ಇಟ್ಟರು. ಆದರೆ, ಪೆಟ್ರೋಲ್ ಸರಿಯಾಗಿ ಹಾಕದೆ ಆ ಪ್ರಯೋಗವೂ ಯಶಸ್ಸು ಕಾಣಲಿಲ್ಲ. ಈಗ ಈ ಹಳ್ಳಿಗಳ 5-6 ಕಿ.ಮೀ. ವ್ಯಾಪ್ತಿಯಲ್ಲಿ ಸಿಗ್ನಲ್ ಇಲ್ಲ ಎನ್ನುತ್ತಾರೆ ಈ ಗ್ರಾಮಗಳ ಗ್ರಾಹಕರಾದ ಮನೋಜ್, ಪೂರ್ಣೇಶ್, ಆದರ್ಶ, ಪ್ರಸನ್ನ ಮುಂತಾದವರು.ಆನೆಗಳ ಕಾಟ:
ಈ ಭಾಗದಲ್ಲಿ ಸದಾ ಆನೆ, ಹುಲಿಗಳ ಕಾಟ ಇದೆ. ತುರ್ತು ಸಂದರ್ಭದಲ್ಲಿ ಆ್ಯಂಬುಲೆನ್ಸ್ ಅಥವಾ ಇತರ ವಾಹನಗಳಿಗೆ ದೂರವಾಣಿ ಕರೆ ಮಾಡಲು ಸಿಗ್ನಲ್ಲೇ ಇರಲ್ಲ. ಇಂದಿನ ದಿನಗಳಲ್ಲಿ ಶಾಲಾ ಮಕ್ಕಳಿಗೂ ಪ್ರಾಜೆಕ್ಟ್ ನೀಡುತ್ತಾರೆ. ಆದರೆ ಸಿಗ್ನಲ್ ಇಲ್ಲದೆ ಇಂಟರ್ ನೆಟ್ ಇಲ್ಲದೆ, ಇತ್ತ ಚಟುವಟಿಕೆಯೂ ಮಾಡಲಾಗದೆ ಹೊರ ಜಗತ್ತಿನ ಸಂಪರ್ಕ ಇಲ್ಲದೆ ಕತ್ತಲಲ್ಲಿ ಕಳೆಯು ವಂತಾಗಿದೆ. ಈಗ ಪ್ರತಿಯೊಂದಕ್ಕೂ ಮೊಬೈಲ್, ಇಂಟರ್ ನೆಟ್ ಅಗತ್ಯ.ಈ ಗ್ರಾಮೀಣ ಭಾಗದವರಿಗೆ ಈ ಸೌಲಭ್ಯ ಸಿಗದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರ ಈಗ ಪ್ರತಿಯೊಂದನ್ನು ಡಿಜಿಟಲೀಕರಣ ಮಾಡಿದ್ದು ಪ್ರತಿಯೊಬ್ಬರಿಗೂ ಮೊಬೈಲ್ ಅವಶ್ಯಕ. ಹಣ ವರ್ಗಾವಣೆಯನ್ನು ಮೊಬೈಲ್ ಮುಖಾಂತರ ಮಾಡಬೇಕು ಎನ್ನುವ ಸರ್ಕಾರಗಳು ಬಿಎಸ್ ಎನ್‌ಎಲ್ ಸೇವೆಯನ್ನು ಸಮರ್ಪಕವಾಗಿ ನೀಡಲು ಸಂಪೂರ್ಣ ಸೋತಿದೆ ಎಂಬುದು ಗ್ರಾಮಸ್ಥರ ಆರೋಪ.
--- ಬಾಕ್ಸ್---ಧರಣಿ ನಡೆಸುವ ಎಚ್ಚರಿಕೆ
ಗ್ರಾಹಕರಾದ ಮನೋಜ್, ಪೂರ್ಣೇಶ್ ಕನ್ನಡಪ್ರಭದೊಂದಿಗೆ ಮಾತನಾಡಿ, 21ನೇ ಶತಮಾನಕ್ಕೆ ಕಾಲಿಟ್ಟು ಚಂದ್ರಲೋಕಕ್ಕೆ ಹೋಗಿ ಬಂದಿದ್ದರೂ ಗ್ರಾಮೀಣ ಪ್ರದೇಶದ ಜನರಿಗೆ ಸಂಪರ್ಕ ಸಾಧನವಾದ ಬಿಎಸ್‌ಎನ್‌ಎಲ್ ಸೇವೆ ಮುಟ್ಟಿಸಲು ಸರ್ಕಾರ ಸಂಪೂರ್ಣ ವಿಫಲವಾಗಿದೆ. ತಾವರೆಗಟ್ಟೆಯಲ್ಲಿನ ಬಿಎಸ್‌ಎಲ್‌ಎಲ್ ಟವರ್‌ನ್ನು ಸಂಬಂಧಪಟ್ಟವರು ತಕ್ಷಣ ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಬಿಎಸ್‌ಎನ್‌ಎಲ್ ಹಾಗೂ ತಾಲೂಕು ಕಚೇರಿ ಎದುರು ಧರಣಿ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.