ಕೃತಕ ಆನೆ ಮೇಲೆ ಬಂದು ಬಿಎಸ್ಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ

| Published : Mar 31 2024, 02:05 AM IST

ಸಾರಾಂಶ

ಚುನಾವಣೆಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಾಗ ಜನರೊಂದಿಗೆ ಹೆಜ್ಜೆ ಹಾಕುತ್ತಾ ಅಥವಾ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿ ಶಕ್ತಿ ಪ್ರದರ್ಶನ ಮಾಡುವುದು ಸಾಮಾನ್ಯ. ಆದರೆ, ಇಲ್ಲೊಬ್ಬ ಅಭ್ಯರ್ಥಿ ಕೃತಕ ಆನೆ ಮೇಲೆ ಮೆರವಣಿಗೆಯಲ್ಲಿ ಬಂದು ನಾಮಪತ್ರ ಸಲ್ಲಿಸಿ ಗಮನ ಸೆಳೆದಿದ್ದಾರೆ.

ಕನ್ನಡಪ್ರಭ ವಾರ್ತೆ ರಾಮನಗರ

ಚುನಾವಣೆಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಾಗ ಜನರೊಂದಿಗೆ ಹೆಜ್ಜೆ ಹಾಕುತ್ತಾ ಅಥವಾ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿ ಶಕ್ತಿ ಪ್ರದರ್ಶನ ಮಾಡುವುದು ಸಾಮಾನ್ಯ. ಆದರೆ, ಇಲ್ಲೊಬ್ಬ ಅಭ್ಯರ್ಥಿ ಕೃತಕ ಆನೆ ಮೇಲೆ ಮೆರವಣಿಗೆಯಲ್ಲಿ ಬಂದು ನಾಮಪತ್ರ ಸಲ್ಲಿಸಿ ಗಮನ ಸೆಳೆದಿದ್ದಾರೆ.

ಆ ಅಭ್ಯರ್ಥಿ ಮತ್ಯಾರು ಅಲ್ಲ ಚಿನ್ನಪ್ಪ ವೈ.ಚಿಕ್ಕಹಾಗಡೆ. ಆನೆ ಗುರುತುಳ್ಳ ಬಹುಜನ ಸಮಾಜ ಪಾರ್ಟಿಯಿಂದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ. ಮೆರವಣಿಗೆಗೆ ಜೀವಂತ ಆನೆಯನ್ನು ಬಳಸಿಕೊಳ್ಳಲು ಅರಣ್ಯ ಇಲಾಖೆ ಅನುಮತಿ ನೀಡುವುದಿಲ್ಲ ಎಂಬ ಕಾರಣಕ್ಕೆ ಕೃತಕ ಆನೆ ಮೇಲೇರಿ ಬಂದು ನಾಮಪತ್ರ ಸಲ್ಲಿಸಿ ತಮ್ಮ ಆಸೆ ಈಡೇರಿಸಿಕೊಂಡರು.

ಆನೆ ಬಹುಜನ ಸಮಾಜವಾದಿ ಪಕ್ಷ(ಬಿಎಸ್ಪಿ) ಚಿಹ್ನೆ. ನಗರದ ಪಿಡಬ್ಲ್ಯೂಡಿ ವೃತ್ತದಲ್ಲಿ ಕೃತಕ ಆನೆಯ ಮೇಲೇರಿದ ಚಿನ್ನಪ್ಪರವರು ಬೆಂಗಳೂರು - ಮೈಸೂರು ಹೆದ್ದಾರಿ ಮಾರ್ಗವಾಗಿ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣಕ್ಕೆ ಆಗಮಿಸಿದರು.

ಇವರಿಗೆ ಪಕ್ಷದ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ, ರಾಜ್ಯ ಕಾರ್ಯದರ್ಶಿ ಎಂ.ನಾಗೇಶ್ ಸೇರಿದಂತೆ ಹಲವರು ಸಾಥ್ ನೀಡಿದರು. ನೂರಾರು ಕಾರ್ಯಕರ್ತರು ಪಕ್ಷದ ಬಾವುಟ ಹಿಡಿದು ಕೃತಕ ಆನೆಯೊಂದಿಗೆ ಹೆಜ್ಜೆ ಹಾಕಿದರು. ಚಿನ್ನಪ್ಪರವರ ವಿಭಿನ್ನತೆ ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಗಿತ್ತು.

ಅಭ್ಯರ್ಥಿ ಚಿನ್ನಪ್ಪರವರು ಮಾರಸಂದ್ರ ಮುನಿಯಪ್ಪ, ಎಂ.ನಾಗೇಶ್, ಗೌರಿಶಂಕರ್ , ಹಾ.ರಾ.ಮಹೇಶ್ ಅವರೊಂದಿಗೆ ಸೇರಿ ಚುನಾವಣಾಧಿಕಾರಿ ಡಾ.ಅವಿನಾಶ್ ರಾಜೇಂದ್ರನ್ ಮೆನನ್ ಅವರಿಗೆ ಉಮೇದುವಾರಿಕೆ ಸಲ್ಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಚಿನ್ನಪ್ಪ ವೈ.ಚಿಕ್ಕಹಾಗಡೆ, ಈ ಭಾಗದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಅಧಿಕಾರ ನಡೆಸಿವೆ. ಆದರೆ, ಈ ಭಾಗದ ಜನತೆಗೆ ಕನಿಷ್ಠ ಮೂಲ ಸೌಕರ್ಯವನ್ನು ಒದಗಿಸುವಲ್ಲಿ ಮೂರು ಪಕ್ಷಗಳು ವಿಫಲವಾಗಿವೆ. ಕಳೆದ 10 ವರ್ಷದಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಂಸದ ಡಿ.ಕೆ.ಸುರೇಶ್ ಯಾವುದೇ ಕೆಲಸ ಮಾಡಿಲ್ಲ ಎಂದು ಟೀಕಿಸಿದರು.

ಈ ಕ್ಷೇತ್ರದಿಂದ ಸಂಸದರಾಗಿದ್ದ ಕುಮಾರಸ್ವಾಮಿ, ಡಿ.ಕೆ.ಸುರೇಶ್ ಸೇರಿದಂತೆ ಯಾರುಶಾಶ್ವತ ಯೋಜನೆಗಳನ್ನು ಜಾರಿಗೆ ತರುವಲ್ಲಿ ವಿಫಲರಾಗಿದ್ದಾರೆ. ಕೇವಲ ಸಣ್ಣಪುಟ್ಟ ಕೆಲಸಗಳನ್ನೇ ನಡೆಸಿಕೊಂಡು ಬಂದಿದ್ದಾರೆ. ಜನತೆಗೆ ಆಮಿಷ ಒಡ್ಡಿಕೊಂಡು ಚುನಾವಣೆಯಲ್ಲಿ ಗೆಲವು ಸಾಧಿಸುತ್ತಿದ್ದಾರೆ ಎಂದು ಆರೋಪಿಸಿದರು.

ಎಲ್ಲೆಡೆ ಇರುವಂತೆ ಕುಟುಂಬ ರಾಜಕಾರಣ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿಯೂ ಇದೆ. ಕಾಂಗ್ರೆಸ್ ನಿಂದ ಉಪಮುಖ್ಯಮಂತ್ರಿ ಸಹೋದರ, ಜೆಡಿಎಸ್ - ಬಿಜೆಪಿ ಮೈತ್ರಿಕೂಟದಿಂದ ಮಾಜಿ ಪ್ರಧಾನಿಗಳ ಅಳಿಯ ಕಣದಲ್ಲಿದ್ದಾರೆ. ಈ ಕುಟುಂಬ ರಾಜಕಾರಣ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಕುಟುಂಬ ರಾಜಕಾರಣಗಳನ್ನು ಕೊನೆಗಾಣಿಸಲು ಐದು ವರ್ಷಕ್ಕೊಮ್ಮೆ ಬರುವ ಚುನಾವಣೆಯಲ್ಲಿ ಸೇವೆ ಮಾಡುವವರಿಗೆ ಅವಕಾಶ ಮಾಡಿಕೊಡಬೇಕು ಎಂದು ಚಿನ್ನಪ್ಪ ಮನವಿ ಮಾಡಿದರು.

ಬಿಎಸ್ಪಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಪಕ್ಷ ಸ್ವತಂತ್ರ್ಯವಾಗಿ ಸ್ಪರ್ಧಿಸುತ್ತಿದೆ. ನಮ್ಮ ಪಕ್ಷವೂ ಎನ್‌ಡಿಎ ಹಾಗೂ ಇಂಡಿಯಾ ಮೈತ್ರಿಕೂಟದಲ್ಲಿ ಇಲ್ಲ. ಜತೆಗೆ, ರಾಜ್ಯದ ಎಲ್ಲಾ 28 ಕ್ಷೇತ್ರದಲ್ಲಿಯು ಬಿಎಸ್ಪಿ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ. ಸಂವಿಧಾನವನ್ನು ಯಥಾವತ್ತಾಗಿ ಜಾರಿ ಮಾಡಬೇಕು. ಪ್ರತಿಯೊಬ್ಬರಿಗೂ ಶಿಕ್ಷಣ, ಉದ್ಯೋಗ ನೀಡಬೇಕು. ರೈತರಿಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಧರ್ಮದ ಗಲಾಟೆ ಇರಬಾರದು. ಕ್ಷೇತ್ರದ ಅಭಿವೃದ್ಧಿಗೆ ಶಾಸಕ ಹಾಗು ಸಂಸತ್ ಸದಸ್ಯ ದುಡಿಯಬೇಕು. ಆದರೆ, ದುರಾದೃಷ್ಟವಶಾತ್ ಜನಪ್ರತಿನಿಧಿಗಳ ಕರ್ತವ್ಯ ತಿಳಿಯದೆ, ಚುನಾವಣೆಯಲ್ಲಿ ಮತದಾನ ಮಾಡದೆ, ಪಾರ್ಲಿಮೆಂಟ್ ನಲ್ಲಿ ಮಾತನಾಡದ ಪ್ರತಿನಿಧಿಗಳಿಗೆ ಮತದಾನ ಮಾಡುತ್ತಾರೆ. ಕ್ರಿಮಿನಲ್ ಹಿನ್ನಲೆ, ಮೈನಿಂಗ್ ಮಾಡುವುದು ಸೇರಿದಂತೆ ಅಪರಾಧಿ ಚುಟುವಟಿಕೆಗಳಲ್ಲಿ ಭಾಗಿಯಾಗಿರುವವರೆ ಆಯ್ಕೆಯಾಗುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ರಾಜ್ಯದಲ್ಲಿ 28 ಸಂಸದರಿದ್ದಾರೆ. ಆದರೆ, ರಾಜ್ಯದ ಜಲ್ವಂತ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಯಾರೊಬ್ಬರು ಧ್ವನಿ ಎತ್ತಲೇ ಇಲ್ಲ. ಅದರಲ್ಲೂ ಕಾವೇರಿ ಸಮಸ್ಯೆ, ಕೈಗಾರಿಕೆ, ಶಿಕ್ಷಣ ಸೇರಿದಂತೆ ಯಾವುದಕ್ಕೂ ಚಕಾರ ಎತ್ತುತ್ತಿಲ್ಲ. ಕಾಂಗ್ರೆಸ್ 55 ವರ್ಷ ಆಳ್ವಿಕೆ ಮಾಡಿದೆ. ಬಿಜೆಪಿ 10 ವರ್ಷಕ್ಕೂ ಹೆಚ್ಚು ಕಾಲ ಆಡಳಿತ ನಡೆಸಿದೆ. ಆದರೂ, ದೇಶದ ಅಭಿವೃದ್ಧಿಗೆ ಯಾವುದೇ ಕೊಡುಗೆ ನೀಡಿಲ್ಲ. ಕಾಂಗ್ರೆಸ್, ಬಿಜೆಪಿ ಹಾಗೂ ಇತರೆ ಪಕ್ಷದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಆಯಾಯ ಪಕ್ಷದಿಂದ ಬಿ ಫಾರಂ ಪಡೆಯಲು ಕೋಟ್ಯಂತರ ರುಪಾಯಿ ಲಂಚ ಕೊಡಬೇಕು ಎಂದು ಆರೋಪಿಸಿದರು. ಈ ವೇಳೆ ಪಕ್ಷದ ಮುಖಂಡರಾದ ಅನ್ನದಾನಪ್ಪ, ಮುರುಗೇಶ್ ಇತರರಿದ್ದರು.ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಎರಡು ಬಲಾಢ್ಯ ಕುಟುಂಬಗಳ ನಡುವೆ ಸಾಮಾನ್ಯ ಕಾರ್ಯಕರ್ತರೊಬ್ಬರು ಸ್ಪರ್ಧೆ ಮಾಡಿದ್ದಾರೆ. ಕ್ಷೇತ್ರದಲ್ಲಿ ಹಣ ಬಲ ಮತ್ತು ಜಾತಿ ಬಲದ ಮೇಲೆ ಚುನಾವಣಾ ಆಯೋಗದ ಕಾನೂನು ಉಲ್ಲಂಘಿಸಿ ಮತದಾರರಿಗೆ ಆಮಿಷವೊಡ್ಡಿ ಎರಡು ಪಕ್ಷಗಳು ಚುನಾವಣೆ ನಡೆಸುತ್ತಿದ್ದಾರೆ.

-ಎಂ.ನಾಗೇಶ್, ರಾಜ್ಯ ಕಾರ್ಯದರ್ಶಿ, ಬಿಎಸ್ಪಿ