ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಪ.ಜಾತಿ, ಪ.ಪಂಗಡಕ್ಕೆ ಮೀಸಲಾದ ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿಯ ಹಣವನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಪ.ಜಾತಿ, ಪ.ಪಂಗಡದವರ ಕುತ್ತಿಗೆ ಕುಯ್ಯುವ ಕೆಲಸ ಮಾಡಿದೆ ಎಂದು ಆರೋಪಿಸಿ ನರಸಿಂಹರಾಜ ಕ್ಷೇತ್ರ ಬಿಎಸ್ಪಿ ಕಾರ್ಯಕರ್ತರು ನಗರದ ಎಫ್.ಟಿ.ಎಸ್. ವೃತ್ತದ ಬಳಿ ಪ್ರತಿಭಟಿಸಿದರು.ಈ ಯೋಜನೆಯಿಂದ 2023-24 ಮತ್ತು 2024-25ನೇ ಸಾಲಿನ 2 ವರ್ಷಗಳಲ್ಲಿ 25,390 ಕೋಟಿಯನ್ನು ಗ್ಯಾರಂಟಿ ಯೋಜನೆಗೆ ಬಳಸಿಕೊಳ್ಳಲಾಗಿದೆ. ಈವರೆಗೆ ಈ ರೀತಿಯಾಗಿ 70 ಸಾವಿರ ಕೋಟಿ ರೂ. ದುರ್ಬಳಕೆಯಾಗಿದೆ. ಎಸ್.ಸಿಎಸ್.ಪಿ ಮತ್ತು ಟಿ.ಎಸ್.ಪಿ. ಯೋಜನೆಯಿಂದ ಈವರೆಗೆ 2.56 ಲಕ್ಷ ಕೋಟಿ ಪಡೆಯಲಾಗಿದೆ. ಇಷ್ಟು ಹಣದಿಂದ ಕರ್ನಾಟಕ ಎಸ್.ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಪ್ರಾಥಮಕ ಶಿಕ್ಷಣದಿಂದ ಬಿಇ, ಎಂಬಿಬಿಎಸ್, ಪಿಎಚ್.ಡಿ ವರೆಗೆ ಉಚಿತ ಶಿಕ್ಷಣ ನೀಡಬಹುದಿತ್ತು ಎಂದು ಪ್ರತಿಬಟನಾಕಾರರು ತಿಳಿಸಿದರು.ಲಕ್ಷಾಂತರ ಮಂದಿ ಪ.ಜಾತಿ, ಪ.ಪಂಗಡದ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಒದಗಿಸಬಹುದಿತ್ತು. ಮನೆ ಇಲ್ಲದ ಪ್ರತಿಯೊಂದು ಪ.ಜಾತಿ, ಪ.ಪಂಗಡ ಕುಟುಂಬಕ್ಕೆ ಸ್ವಂತ ಮನೆ ಕಟ್ಟಿಕೊಡಬಹುದಿತ್ತು. ಭೂ ರಹಿತ ಪರಿಶಿಷ್ಟ ಕೃಷಿ ಕಾರ್ಮಿಕರಿಗೆ ತಲಾ 5 ಎಕರೆ ಜಮೀನು ಖರೀದಿಸಿ ಕೊಡಬಹುದಿತ್ತು. ಪ್ರತಿಯೊಬ್ಬ ಎಸ್ಸಿ, ಎಸ್ಟಿ ರೋಗಿಗಳಿಗೂ ಉಚಿತ ಚಿಕಿತ್ಸೆ ಕೊಡಿಸಬಹುದಿತ್ತು. ಪ್ರತಿಯೊಬ್ಬ ಪರಿಶಿಷ್ಟ ರೋಗಿಗೂ ಉಚಿತ ಚಿಕಿತ್ಸೆ ಕೊಡಿಸಬಹುದಿತ್ತು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ಸಂವಿಧಾನ ಉಳಿಸುವುದಾಗಿ ಹೇಳುವ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪರಿಶಿಷ್ಟ ವಿದ್ಯಾರ್ಥಿಗಳ ಮೆರಿಟ್ ವಿದ್ಯಾರ್ಥಿವೇತನ ರದ್ದಾಗಿದೆ. ವಿದೇಶದಲ್ಲಿ ಓದಲು ರೂಪಿಸಿದ್ದ ಪ್ರಬುದ್ಧಯೋಜನೆ ನಿಲ್ಲಿಸಲಾಗಿದೆ, ಶಾಲಾ- ಕಾಲೇಜುಗಳಲ್ಲಿ ಪ್ರವೇಶ ಪಡೆಯುವಾಗ ಪೂರ್ಣ ಶುಲ್ಕ ಪಾವತಿಸುವಂತೆ ಮಾಡಲಾಗಿದೆ. ಎರಡು ವರ್ಷಗಳಿಂದ ಸರಿಯಾಗಿ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿಲ್ಲ, ಮ್ಯಾನೇಜ್ಮೆಂಟ್ ಕೋಟಾದಲ್ಲಿ ಓದುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಹಾಸ್ಟೇಲ್ಪ್ರವೇಶ ರದ್ದುಗೊಳಿಸಲಾಗಿದೆ, ಬ್ಯಾಕ್ಲಾಗ್ಹುದ್ದೆ ಭರ್ತಿ ಮಾಡಿಲ್ಲ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ನೀಡುತ್ತಿಲ್ಲ ಎಂದು ಅವರು ಆರೋಪಿಸಿದರು.ಪ್ರತಿಭಟನೆಯಲ್ಲಿ ಬಿಎಸ್ಪಿ ಮುಖಂಡರಾದ ಚಂದ್ರಶೇಖರ್, ಪುಷ್ಪಾ, ಬಸವಣ್ಣ, ನಂಜುಂಡ ಇದ್ದಾರೆ.