ಬಿಎಸ್ ಪಿಎಲ್ ಕಾರ್ಖಾನೆ ಸ್ಥಾಪಿಸಿ, ಇಲ್ಲ ಸರ್ಕಾರಿ ನೌಕರಿ ಕೊಡಿ

| Published : Nov 14 2025, 03:00 AM IST

ಸಾರಾಂಶ

ಇತ್ತ ಭೂಮಿಯೂ ಇಲ್ಲ, ಭೂಮಿ ಕಳೆದುಕೊಂಡಿರುವುದಕ್ಕೆ ಕಾರ್ಖಾನೆಯಲ್ಲಿ ಕೆಲಸವೂ ಇಲ್ಲದಂತೆ ರೈತರ ಮಕ್ಕಳು ನಿರುದ್ಯೋಗಿಗಳಾಗಿದ್ದಾರೆ.

ಕೊಪ್ಪಳ: ಬಿಎಸ್ ಪಿಎಲ್ ಕಾರ್ಖಾನೆ ಸ್ಥಾಪಿಸಬೇಕು ಇಲ್ಲವೇ ಅದಕ್ಕಾಗಿ ಭೂಮಿ ಕಳೆದುಕೊಂಡ ರೈತರಿಗೆ ಸರ್ಕಾರಿ ಕೆಲಸವನ್ನಾದರೂ ನೀಡಿ ಎಂದು ಬಿಎಸ್ ಪಿಎಲ್ ಕಾರ್ಖಾನೆಗೆ ಭೂಮಿ ಕಳೆದುಕೊಂಡಿರುವ ಹಾಲವರ್ತಿ, ಬಸಾಪುರ ಕಿಡದಾಳ, ಬೇಳವಿನಾಳ ಮತ್ತು ಕೊಪ್ಪಳ ರೈತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಬಿಎಸ್‌ಪಿಎಲ್‌ಗೆ ಭೂಮಿ ಕಳೆದುಕೊಂಡು ೧೮ ವರ್ಷಗಳ ಆಗಿದೆ. ಸರ್ಕಾರವೇ ಕೆಐಡಿಬಿ ಮೂಲಕ ನಮ್ಮ ಭೂಮಿ ಸ್ವಾಧೀನ ಮಾಡಿಕೊಂಡು ಬಿಎಸ್ ಪಿಎಲ್ ಕಂಪನಿಗೆ ನೀಡಿದೆ. ಆದರೆ, ಇಷ್ಟು ವರ್ಷಗಳಾದರೂ ಕಾರ್ಖಾನೆ ಸ್ಥಾಪಿಸಿಲ್ಲ ಮತ್ತು ನಮಗೆ ಕೆಲಸ ನೀಡಿಲ್ಲ. ನ್ಯಾಯಾಲಯದಲ್ಲಿ ಪ್ರಕರಣ ಇದ್ದಿದ್ದರಿಂದ 2023 ವರೆಗೂ ಆಗಿರಿಲ್ಲ. ಆಗ ವ್ಯಾಜ್ಯ ಇತ್ಯರ್ಥವಾಗಿದ್ದರೂ ಪ್ರಾರಂಭಿಸಿಲ್ಲ. ಈಗ ಸಿಎಂ ಮೌಖಿಕ ಆದೇಶ ಮಾಡಿ ಕಾರ್ಖಾನೆ ಸ್ಥಾಪನೆ ನಿಲ್ಲಿಸಿದ್ದಾರೆ.

ಇತ್ತ ಭೂಮಿಯೂ ಇಲ್ಲ, ಭೂಮಿ ಕಳೆದುಕೊಂಡಿರುವುದಕ್ಕೆ ಕಾರ್ಖಾನೆಯಲ್ಲಿ ಕೆಲಸವೂ ಇಲ್ಲದಂತೆ ರೈತರ ಮಕ್ಕಳು ನಿರುದ್ಯೋಗಿಗಳಾಗಿದ್ದಾರೆ. ಹೀಗಾಗಿ, ಸರ್ಕಾರ ಕೂಡಲೇ ಕಾರ್ಖಾನೆಯನ್ನಾದರೂ ಪ್ರಾರಂಭಿಸಲಿ ಅಥವಾ ಭೂಮಿ ಕಳೆದುಕೊಂಡ ರೈತರಿಗೆ ಸರ್ಕಾರಿ ನೌಕರಿಯನ್ನಾದರೂ ನೀಡಲಿ ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಕೊಪ್ಪಳ ನಗರದಲ್ಲಿ ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಹನುಮಂತಪ್ಪ ಕೌದಿ, ನಾಗರಾಜ ಗುರಿಕಾರ, ಕಾಮಣ್ಣ ಕಂಬಳಿ, ಹೇಮಪ್ಪ ಇಟಗಿ, ಹನುಮೇಶ ಹಾಲವರ್ತಿ, ಪ್ರಾಣೇಶ, ಗೋಣಿಬಸಪ್ಪ, ದೇವಮ್ಮ ಹರಿಜನ, ರೇವಪ್ಪ ಹರಿಜನ, ಗ್ಯಾನಪ್ಪ ತಳಕಲ್ ಮೊದಲಾದವರು ಇದ್ದರು.