ತುಮಕೂರು ಜಿಲ್ಲೆಯಿಂದ 50ಸಾವಿರ ಜನ ಭಾಗವಹಿಸಲು ಈಗಾಗಲೇ ಸಿದ್ಧತೆ ನಡೆಸಿರುವುದಾಗಿ ಜಿಲ್ಲಾ ಬಿಜೆಪಿ ಮುಖಂಡರು ತಿಳಿಸಿದರು.
ಕನ್ನಡಪ್ರಭ ವಾರ್ತೆ ತುಮಕೂರು
9 ರಂದು ಚಿತ್ರದುರ್ಗದಲ್ಲಿ ಹಮ್ಮಿಕೊಂಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಭಿಮಾನೋತ್ಸವ ಸಮಾರಂಭವನ್ನು ಅದ್ಧೂರಿಯಾಗಿ ಯಶಸ್ವಿಗೊಳಿಸಲು ನಿರ್ಧರಿಸಲಾಗಿದ್ದು, ಈ ಕಾರ್ಯಕ್ರಮಕ್ಕೆ ತುಮಕೂರು ಜಿಲ್ಲೆಯಿಂದ 50ಸಾವಿರ ಜನ ಭಾಗವಹಿಸಲು ಈಗಾಗಲೇ ಸಿದ್ಧತೆ ನಡೆಸಿರುವುದಾಗಿ ಜಿಲ್ಲಾ ಬಿಜೆಪಿ ಮುಖಂಡರು ತಿಳಿಸಿದರು.ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, 9 ರಂದು ಚಿತ್ರದುರ್ಗದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದ್ದು, ಮಧ್ಯಾಹ್ನ 1.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. 3 ಗಂಟೆಯ ವೇಳೆಗೆ ಅಮಿತ್ ಷಾ ಅವರು ಆಗಮಿಸಲಿದ್ದಾರೆ. ತುಮಕೂರಿನಿಂದ ಬೆಳಗ್ಗೆಯೇ ಹೊರಟು ಮಧ್ಯಾಹ್ನದ ವೇಳೆಗೆ ಸಮಾರಂಭದ ಬಳಿ ಸೇರುತ್ತೇವೆ. 7 ತಾಲೂಕುಗಳ 50 ಸಾವಿರ ಜನರಿಗಾಗಿ ಒಂದು ಸಾವಿರ ಬಸ್‌ಗಳನ್ನು ನಿಯೋಜಿಸಲಾಗಿದೆ. ಈಗಾಗಲೇ ನಿಗದಿಪಡಿಸಲಾಗಿರುವ ಬಸ್‌ಗಳಲ್ಲಿ ಜನ ಚಿತ್ರದುರ್ಗಕ್ಕೆ ತೆರಳಲಿದ್ದಾರೆ ಎಂದು ವಿವರಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿ ಶಂಕರ್ ಮಾತನಾಡಿ, ನಮ್ಮೆಲ್ಲರ ಹಿರಿಯರು, ಪಕ್ಷಕ್ಕಾಗಿ ದುಡಿದ ಬಿ.ಎಸ್.ಯಡಿಯೂರಪ್ಪ ಅವರ ಅಭಿಮಾನೋತ್ಸವ ಕಾರ್ಯಕ್ರಮ ಯಶಸ್ವಿಗೆ ನಾವೆಲ್ಲ ಒಟ್ಟಾಗಿ ಶ್ರಮಿಸುತ್ತಿದ್ದು, ಒಂದು ಸಾವಿರ ಬಸ್‌ಗಳಲ್ಲದೆ, ಪಕ್ಷದ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ವಾಹನಗಳೂ ಸೇರಿದಂತೆ ಇನ್ನೂ ಹೆಚ್ಚಿನ ವಾಹನ ಮತ್ತು ಜನ ಸೇರುವ ನಿರೀಕ್ಷೆ ಇದೆ ಎಂದರು.ಗ್ರಾಮಾಂತರ ಶಾಸಕ ಬಿ.ಸುರೇಶ್ ಗೌಡ ಮಾತನಾಡಿ ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಬಿ.ಎಸ್.ಯಡಿಯೂರಪ್ಪ ಅವರ ಪರಿಶ್ರಮ ಅಪಾರ. ಮುನಿಸಿಪಲ್ ಸದಸ್ಯನಿಂದ ಹಿಡಿದು ಮುಖ್ಯ ಮಂತ್ರಿಯತನಕ ಅವರ ಹೋರಾಟ ಅವಿಸ್ಮರಣೀಯ. ಅವರ ಕಾಲದಲ್ಲಿ ಜಾರಿಗೆ ತಂದ ಯೋಜನೆಗಳನ್ನು ಜನ ಈಗಲೂ ಸ್ಮರಿಸುತ್ತಾರೆ ಎಂದು ವಿವರಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಪಕ್ಷದ ಮುಖಂಡರುಗಳಾದ ವೈ.ಎಚ್.ಹುಚ್ಚಯ್ಯ, ಶಿವಕುಮಾರ ಸ್ವಾಮಿ, ವೇದಮೂರ್ತಿ, ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.