ಶಿಕಾರಿಪುರ ತಾಲೂಕಿನ ಅಭಿವೃದ್ಧೀಲಿ ಬಿಎಸ್‌ವೈ ಕೊಡುಗೆ ಅಪಾರ

| Published : Oct 04 2025, 01:00 AM IST

ಶಿಕಾರಿಪುರ ತಾಲೂಕಿನ ಅಭಿವೃದ್ಧೀಲಿ ಬಿಎಸ್‌ವೈ ಕೊಡುಗೆ ಅಪಾರ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಂಸದ ರಾಘವೇಂದ್ರರ ಕೊಡುಗೆ ಅಪಾರವಾಗಿದ್ದು, ರಾಜ್ಯದಲ್ಲಿಯೇ ಮಾದರಿ ತಾಲೂಕು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ತಾಲೂಕಿನ ಅಭಿವೃದ್ಧಿಯಲ್ಲಿ ಯಡಿಯೂರಪ್ಪನವರ ಕೊಡುಗೆಯನ್ನು ಜನತೆ ಮರೆಯಲು ಸಾಧ್ಯವಿಲ್ಲ ಎಂದು ಶಾಸಕ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.

ಶಿಕಾರಿಪುರ: ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಂಸದ ರಾಘವೇಂದ್ರರ ಕೊಡುಗೆ ಅಪಾರವಾಗಿದ್ದು, ರಾಜ್ಯದಲ್ಲಿಯೇ ಮಾದರಿ ತಾಲೂಕು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ತಾಲೂಕಿನ ಅಭಿವೃದ್ಧಿಯಲ್ಲಿ ಯಡಿಯೂರಪ್ಪನವರ ಕೊಡುಗೆಯನ್ನು ಜನತೆ ಮರೆಯಲು ಸಾಧ್ಯವಿಲ್ಲ ಎಂದು ಶಾಸಕ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.ಗುರುವಾರ ತಾಲೂಕಿನ ಐತಿಹಾಸಿಕ ಬೇಗೂರು ಮರಡಿ ತಾಂಡಾದ ಶ್ರೀ ಗಾಳಿ ಅಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿನ ಬನ್ನಿ ಮಂಟಪದಲ್ಲಿ ತಾಲೂಕು ಆಡಳಿತ ಮತ್ತು ಬೇಗೂರು ಗ್ರಾ.ಪಂ ಹಾಗೂ ವಿವಿಧ ದೇವಸ್ಥಾನಗಳ ಉಸ್ತುವಾರಿ ಸಮಿತಿಯಿಂದ ನಡೆದ ವಿಜೃಂಭಣೆಯ ದಸರಾ ಉತ್ಸವ 2025 ರ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ದೇಶಾದ್ಯಂತ ಅತ್ಯಂತ ವಿಜೃಂಭಣೆ ಹಾಗೂ ಅರ್ಥಪೂರ್ಣವಾಗಿ ನಡೆಯುವ ದಸರಾ ಮಹೋತ್ಸವದ ಮಾದರಿಯಲ್ಲಿಯೇ ತಾಲೂಕಿನ ಬೇಗೂರು ಗ್ರಾಮದ ಬನ್ನಿಮಂಟಪದಲ್ಲಿ ಪ್ರತಿ ವರ್ಷದ ರೀತಿಯಲ್ಲಿ ಈ ಬಾರಿ ಸಹಸ್ರಾರು ಜನತೆ ಸಮ್ಮುಖದಲ್ಲಿ ಆಯೋಜಿಸಲಾಗಿರುವುದು ಸಂತಸದ ಸಂಗತಿ ಎಂದರು.

ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ಕೋಟ್ಯಾಂತರ ವೆಚ್ಚದಲ್ಲಿ ಸಂಸದ ರಾಘವೇಂದ್ರರ ಅಪೇಕ್ಷೆ ಮೇರೆಗೆ ದೇವಸ್ಥಾನದ ಜೀರ್ಣೋದ್ಧಾರ ಸಹಿತ ಸಹಸ್ರಾರು ಜನತೆ ವೀಕ್ಷಣೆಗೆ ಬನ್ನಿ ಮಂಟಪ ಸುಂದರ ಹಾಗೂ ಸುಸಜ್ಜಿತವಾಗಿ ನಿರ್ಮಾಣವಾಗಿದೆ ಎಂದು ಸ್ಮರಿಸಿದರು.

ದುಷ್ಟರ ಸಂಹಾರ ಶಿಷ್ಟರ ರಕ್ಷಣೆಗಾಗಿ ಚಾಮುಂಡೇಶ್ವರಿ ದೇವಿ ಸತತ 9 ದಿನಗಳ ಕಾಲ ಮಹಿಷಾಸುರನ ಜತೆ ಸೆಣಸಾಡಿ 10ನೇ ದಿನದಂದು ವಧಿಸಿದ್ದು, ಶ್ರೀ ರಾಮಚಂದ್ರ ರಾವಣನ ವಧಿಸಿ ಸೀತಾಮಾತೆಯನ್ನು ಬಂಧನ ಮುಕ್ತಗೊಳಿಸಿದ ನವರಾತ್ರಿ ದೇಶಾದ್ಯಂತ ಸಂಸ್ಕೃತಿ ಪರಂಪರೆಯ ಆಚರಣೆ ನಡೆಯುತ್ತಿದೆ. ಇದೇ ಮಾದರಿಯಲ್ಲಿ ತಾಲೂಕಿನ ಬಹುತೇಕ ದೇವತೆಗಳು ಬನ್ನಿಮಂಟಪದಲ್ಲಿ ಸಮಾಗಮಗೊಂಡು ನಡೆಯುವ ದಸರಾ ಮಹೋತ್ಸವ ಉಳಿಸಿ ಬೆಳೆಸಿಕೊಂಡು ಸಂಪ್ರದಾಯ ಪಾಲನೆ ಅತ್ಯಂತ ಸಂತೋಷದಾಯಕವಾಗಿದ್ದು, ಪ್ರತಿಯೊಬ್ಬರೂ ಅಣ್ಣ ತಮ್ಮಂದಿರ ರೀತಿ ಆತ್ಮೀಯತೆ, ಸಂತೋಷ, ಒಗ್ಗಟ್ಟಿನಿಂದ ಬದುಕೋಣ ಎಂದರು.ನಾಡಿನ ಬೆನ್ನೆಲುಬಾದ ರೈತ ಅತಿವೃಷ್ಟಿಯಿಂದಾಗಿ ಸಂಕಷ್ಟ ಸ್ಥಿತಿಯಲ್ಲಿದ್ದು, ರೈತನ ಬಗ್ಗೆ ಕರುಣೆ ತೋರಿಸುವ ಜತೆಗೆ ಬೆಳೆಗೆ ವೈಜ್ಞಾನಿಕ ಬೆಲೆ ದೊರೆತು ಸಂತೃಪ್ತಿಯಿಂದ ಬದುಕುವಂತೆ ಭಗವಂತನಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.

ತಾ.ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಸ್.ಪಿ.ನಾಗರಾಜಗೌಡ ಮಾತನಾಡಿ, ತಾಲೂಕಿನ ಬಹುತೇಕ ದೇವಾಲಯಗಳಲ್ಲಿ ನವರಾತ್ರಿ ಅಂಗವಾಗಿ ನಿತ್ಯ ಅನ್ನಸಂತರ್ಪಣೆ ಆಯೋಜಿಸಲಾಗಿದ್ದು, ಅತ್ಯುತ್ತಮ ಸಂಪ್ರದಾಯಕ್ಕೆ ನಿದರ್ಶನವಾಗಿದೆ ಎಂದರು.

ರಾಜ್ಯ ಸರ್ಕಾರ ಉತ್ತಮ ಆಡಳಿತದ ಮೂಲಕ ಪ್ರಸಿದ್ಧವಾಗಿದ್ದು, 5 ಗ್ಯಾರಂಟಿಯಿಂದಾಗಿ ತಾಲೂಕಿನ ಪ್ರತಿ ಕುಟುಂಬಕ್ಕೆ ಮಾಸಿಕ 5 ರಿಂದ 6 ಸಾವಿರ ರು. ಮೌಲ್ಯದ ಪ್ರಯೋಜನ ದೊರಕುತ್ತಿದೆ. ರೈತರು ಮಹಿಳೆಯರ ಸಹಿತ ಪ್ರತಿಯೊಬ್ಬರ ಕಲ್ಯಾಣ ಸರ್ಕಾರದ ಆದ್ಯತೆಯಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಪಟ್ಟಣದ ಪ್ರಸಿದ್ಧ ಶ್ರೀ ಹುಚ್ಚುರಾಯಸ್ವಾಮಿ, ಸಿರ್ಸಿ ಮಾರಮ್ಮ, ಗಿಡ್ಡಯ್ಯ ಸ್ವಾಮಿ, ಹುಲಿಕಟ್ಟೆಪ್ಪ ಸ್ವಾಮಿ, ಬೇಗೂರಿನ ಆಂಜನೇಯಸ್ವಾಮಿ, ಆಪಿನಕಟ್ಟೆಯ ಕೊನೆ ಬಸವೇಶ್ವರ, ಬೆಂಡೆಕಟ್ಟೆಯ ಬಸವೇಶ್ವರ ಸ್ವಾಮಿ, ಬಾಳೆ ಕೊಪ್ಪದ ಹನುಮಂತ ದೇವರು ಸಹಿತ ಹಲವು ದೇವರು ವೈಭವದ ಪಲ್ಲಕ್ಕಿ ಮೆರವಣಿಗೆ ಮೂಲಕ ಕರೆತರಲಾಯಿತು.ಗ್ರಾ.ಪಂ ಅಧ್ಯಕ್ಷೆ ರೂಪ ಮಹೇಶಪ್ಪ ಅಧ್ಯಕ್ಷತೆ ವಹಿಸಿದ್ದರು.

ತಹಸೀಲ್ದಾರ್ ಮಂಜುಳ ಭಜಂತ್ರಿ ಅಂಬುಚ್ಚೇಧ ಗೊಳಿಸಿದರು. ಪುರಸಭಾಧ್ಯಕ್ಷೆ ಸುನಂದಾ, ಉಪಾಧ್ಯಕ್ಷೆ ರೂಪ, ಗ್ರಾ.ಪಂ ಸದಸ್ಯ ಲಕ್ಷ್ಮಣರಾವ್, ಬಸವರಾಜಪ್ಪ, ಕುಮಾರಿಬಾಯಿ, ರಾಘವೇಂದ್ರನಾಯ್ಕ, ಬೇಗೂರು ರಘುನಾಥ್ ಸಹಿತ ವಿವಿಧ ದೇವಸ್ಥಾನ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.