ಗದಗ: ಮೇ 9ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಬಿ.ಎಸ್. ಯಡಿಯೂರಪ್ಪ ಅಭಿಮಾನೋತ್ಸವಕ್ಕೆ ಗದಗದಿಂದ ಚಿತ್ರದುರ್ಗಕ್ಕೆ ಸೈಕಲ್ ಮೂಲಕ ಬಿ.ವೈ. ವಿಜಯೇಂದ್ರ ಹಾಗೂ ಸುಧೀರ್ ಕಾಟಿಗರ್ ಅವರ ಅಭಿಮಾನಿ ಪ್ರಭು ಡಿಗ್ಗಾವಿ ಹೊರಟಿದ್ದು, ನಗರದ ವೀರೇಶ್ವರ ಪುಣ್ಯಾಶ್ರಮದ ಪುಟ್ಟರಾಜ ಗವಾಯಿಗಳ ಮಠದಲ್ಲಿ ಪೂಜೆ ಸಲ್ಲಿಸಿ ಕಲ್ಲಯ್ಯಜ್ಜನವರು ಚಾಲನೆ ನೀಡಿದರು.ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಯಡಿಯೂರಪ್ಪನವರ ಸೇವೆ ರಾಜ್ಯಕ್ಕೆ ಮರೆಯಲಾಗದ ಕೊಡುಗೆ ಹಿಂದೆ ಅವರು ರಾಜ್ಯಾದ್ಯಂತ ಸೈಕಲ್ ಮುಖಾಂತರ ಪ್ರವಾಸ ಮಾಡಿ ಪಕ್ಷ ಗಟ್ಟಿಗೊಳಿಸಿ, ದಕ್ಷಿಣ ಭಾರತದಲ್ಲಿ ಪಕ್ಷ ಬೆಳೆಯಲು ಕಾರಣೀಕರ್ತರು. ಗದುಗಿನ ಯುವಕ ಪ್ರಭು ಡಿಗ್ಗಾವಿ ಅವರು ಚಿತ್ರದುರ್ಗದಲ್ಲಿ ನಡೆಯುವ ಅಭಿಮಾನೋತ್ಸವ ಕಾರ್ಯಕ್ರಮಕ್ಕೆ ಸೈಕಲ್ ಮುಖಾಂತರ ಹೊರಟಿದ್ದು, ಅವರ ಪ್ರಯಾಣ ಶುಭಕರವಾಗಲಿ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ ಮಾತನಾಡಿ, ಮೇ 9ರಂದು ನಡೆಯಲಿರುವ ಕಾರ್ಯಕ್ರಮಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಜನರು ಕಾರ್ಯಕ್ರಮಕ್ಕೆ ಹೊರಟಿದ್ದು, ಅದೇ ರೀತಿ ಜಿಲ್ಲೆಯಿಂದಲೂ ಬಿ.ಎಸ್. ಯಡಿಯೂರಪ್ಪನವರ ಅಭಿಮಾನಿಗಳು ಕಾರ್ಯಕ್ರಮಕ್ಕೆ ಬಂದು ಯಶಸ್ವಿಗೊಳಿಸಬೇಕೆಂದರು.ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಸುಧೀರ್ ಕಾಟಿಗರ್ ಮಾತನಾಡಿ, ಯಡಿಯೂರಪ್ಪನವರ ಅಭಿಮಾನೋತ್ಸವ ಕಾರ್ಯಕ್ರಮ ರಾಜ್ಯ ಹಾಗೂ ರಾಷ್ಟ್ರದ ಗಮನ ಸೆಳೆದಿದ್ದು, ಅವರು ಈ ಹಿಂದೆ ಗದಗ ನಗರಕ್ಕೆ ಆಗಮಿಸಿದಾಗ ಅವರು ಸೈಕಲ್ ಮುಖಾಂತರ ಪ್ರವಾಸ ಮಾಡಿ ಸಾಕಷ್ಟು ಗಮನ ಸೆಳೆದಿದ್ದರು. ಜಿಲ್ಲೆಯಲ್ಲಿ ಪಕ್ಷ ಗಟ್ಟಿಯಾಗಲು ಶ್ರಮಿಸಿದರು. ಅವರ ಹಾದಿಯಲ್ಲಿ ಈಗಿನ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕೂಡ ಜಿಲ್ಲೆಯಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದು, ಅವರ ಅಭಿಮಾನಿ ಕುರ್ತಕೋಟಿ ಗ್ರಾಮದ ಯುವಕ ಪ್ರಭು ಡಿಗ್ಗಾವಿ ಅವರು ಸೈಕಲ್ ಮುಖಾಂತರ ಚಿತ್ರದುರ್ಗಕ್ಕೆ ಹೊರಟಿದ್ದು, ಅವರಿಗೆ ಶುಭವಾಗಲಿ ಎಂದರು.ಈ ವೇಳೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ್ ಪಾಟೀಲ, ಸುರೇಶ್ ಮರಳಪ್ಪನವರ್, ಶಂಕರ್ ಕಾಕಿ, ಅನಿಲ ಅಬ್ಬಿಗೇರಿ, ರಮೇಶ್ ಸಜ್ಜಗಾರ, ಜಯಶ್ರೀ ಉಘಲಾಟ, ಸಂತೋಷ ಅಕ್ಕಿ, ಬಸವರಾಜ ನರೇಗಲ್, ಇರ್ಷಾ ಮಾನ್ವಿ, ರವಿ ಮಾನ್ವಿ, ಮಂಜುನಾಥ ಶಾಂತಗೆರಿ, ದೇವೇಂದ್ರಪ್ಪ ಹೂಗಾರ, ರವಿ ಚವಾನ, ನಾರಾಯಣ ಟಿಕಂದಾರ್, ಕುಶಾಲ್ ಕಾಟಿಗರ್ ಸೇರಿದಂತೆ ಬಿಜೆಪಿಯ ಕಾರ್ಯಕರ್ತರು, ಪದಾಧಿಕಾರಿಗಳು ಹಾಗೂ ಯಡಿಯೂರಪ್ಪನವರ ಅಭಿಮಾನಿಗಳು ಇದ್ದರು.