ಸಾರಾಂಶ
ಗದಗ: ಲಿಂಗಾಯತ ಧರ್ಮವನ್ನು ವೈದಿಕಗೊಳಿಸುವ ಹುನ್ನಾರಕ್ಕೆ ಶತಮಾನಗಳ ಇತಿಹಾಸವಿದ್ದು, ಅದರ ಮುಂದುವರೆದ ಭಾಗವಾಗಿ ಇತ್ತೀಚೆಗೆ ಸದಾಶಿವಾನಂದ ಸ್ವಾಮಿಗಳು ಸಂಪಾದನೆ ಮಾಡಿರುವ ವಚನ ದರ್ಶನ ಕೃತಿಯಲ್ಲಿ ಲಿಂಗಾಯತದ ಮೂಲ ಆಶಯ ಬುಡಮೇಲು ಮಾಡುವ ಆಕ್ಷೇಪಾರ್ಹ ಲೇಖನಗಳಿವೆ, ಜಾಗತಿಕ ಲಿಂಗಾಯತ ಮಹಾಸಭೆ ಇದನ್ನು ಬಲವಾಗಿ ಖಂಡಿಸುತ್ತದೆ ಎಂದು ಜಾಗತಿಕ ಲಿಂಗಾಯತ ಮಹಾಸಭೆ ಮಹಾಪ್ರಧಾನ ಕಾರ್ಯದರ್ಶಿ ಡಾ.ಎಸ್.ಎಂ. ಜಾಮದಾರ ಹೇಳಿದರು.
ಅವರು ನಗರದ ತೋಂಟದಾರ್ಯ ಕಲ್ಯಾಣಕೇಂದ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ವಚನ ದರ್ಶನ ಕೃತಿಯನ್ನು ರಾಜ್ಯದ ನಾನಾ ಭಾಗಗಳಲ್ಲಿ ಬಿಡುಗಡೆ ಮಾಡುತ್ತಿದ್ದು, ಆ ಸಮಾರಂಭಗಳಲ್ಲಿ ಬಸವತತ್ವದ ಕುರಿತು ಆರ್.ಎಸ್.ಎಸ್ ಶಾಖೆಯ ಪ್ರಚಾರಕರೆಲ್ಲ ಮನಬಂದಂತೆ ಮಾತನಾಡುತ್ತಿದ್ದಾರೆ, ವಚನಗಳು ರಚಿತವಾಗಿಲ್ಲ ಬದಲಾಗಿ ಅವು ಸೃಜಿತವಾಗಿವೆ, ವಚನ ಚಳವಳಿಯೇ ನಡೆದಿಲ್ಲ ಎಂದೂ ಐತಿಹಾಸಿಕ ಸತ್ಯ ಮರೆಮಾಚುತ್ತಿದ್ದಾರೆ, ವಚನ ಚಳವಳಿಯೇ ನಡೆದಿಲ್ಲವೆಂದಾದರೆ ಸಾವಿರಾರು ಶರಣರ ಕಗ್ಗೋಲೆ ಯಾಕಾಯಿತು ಎಂದು ಪ್ರಶ್ನಿಸಿದರು.
ನಿರಾಕಾರ ದೇವರನ್ನು ಪೂಜಿಸುವರೆಲ್ಲ ಹಿಂದೂಗಳು ಎಂದು ಸದಾಶಿವಾನಂದ ಸ್ವಾಮೀಜಿ ಸೇರಿದಂತೆ ಹಲವರು ಹೇಳುತ್ತಿದ್ದಾರೆ ಹಾಗಾದರೆ ಕ್ರೈಸ್ತ, ಮುಸ್ಲಿಂ ಎಲ್ಲರೂ ಹಿಂದೂಗಳೇ ಎಂದು ಪ್ರಶ್ನಿಸಿದರು. ಇದುವರೆಗೂ 23,000 ವಚನಗಳು ಲಭ್ಯವಾಗಿವೆ, ಕೆಲವು ವಚನಗಳಲ್ಲಿ ಸಂಸ್ಕೃತದ ಉಲ್ಲೇಖ ಇದೆ ಹಾಗಿದ್ದ ಮಾತ್ರಕ್ಕೆ ಎಲ್ಲ ವಚನಗಳ ವೇದ ಆಗಮಗಳ ರೂಪವೇ ಆಗಿದೆ ಎನ್ನುವ ಇವರಿಗೆ ಅಧ್ಯಯನದ ಕೊರತೆ ಇದೆ ಎಂದರು.ವಚನ ದರ್ಶನ ಕೃತಿಯಲ್ಲಿ ಬಸವೇಶ್ವರ ಭಾವಚಿತ್ರವೂ ವಿಕೃತಗೊಂಡಿದ್ದು, ಈ ಕೃತಿ ವಿರೋಧಿಸುವ ಪ್ರಜ್ಞಾವಂತರ ಮೇಲೆ ಬಲಪ್ರಯೋಗ ಮಾಡುವ ಕಾರ್ಯವನ್ನು ಆ ಸ್ವಾಮೀಜಿಗಳು ಸೇರಿ ಆರ್.ಎಸ್.ಎಸ್ ನವರು ಮಾಡುತ್ತಿದ್ದಾರೆ ಇಂತ ಕೃತ್ಯವನ್ನು ಜಾಗತಿಕ ಲಿಂಗಾಯತ ಮಹಾಸಭೆ ತೀವ್ರವಾಗಿ ಖಂಡಿಸುತ್ತದೆ ಎಂದರು.
ನಿವೃತ್ತ ನ್ಯಾಯಾಧೀಶ ಕೆಂಪಣ್ಣಗೌಡರ ಮಾತನಾಡಿ, ಸಂವಿಧಾನದ ಅನ್ವಯ ಯಾವುದೇ ಧರ್ಮವನ್ನು ಪಾಲಿಸಲು ಅವಕಾಶ ಇದ್ದು, ಬಸವವತ್ವದವರಾದ ನಮಗೆ ನೀವು ಹಿಂದೂಗಳೇ ಎಂದು ಆದೇಶ ಹೊರಡಿಸುವ ಅಧಿಕಾರ ಯಾರಿಗೂ ಇಲ್ಲ. ಹಿಂದೂ ಎನ್ನುವುದು ರಾಷ್ಟ್ರದ ಸಂಕೇತವಾಗಿದ್ದು, ಯಾವತ್ತೂ ಅದು ಧಾರ್ಮಿಕ ಸಂಕೇತ ಅಲ್ಲವೇ ಅಲ್ಲ ಎಂದರು.ಈ ವೇಳೆಯಲ್ಲಿ ಬಸವರಾಜ ಧನ್ನೂರ, ಬಸವರಾಜ ರೊಟ್ಟಿ, ಜಿ.ಬಿ. ಪಾಟೀಲ, ಪ್ರಭುಲಿಂಗ ಮಾಧವರ, ಮಹಾಸಭಾ ಜಿಲ್ಲಾಧ್ಯಕ್ಷ ಕೆ.ಎಸ್. ಚಟ್ಟಿ, ಕಾರ್ಯದರ್ಶಿ ಶೇಖಣ್ಣ ಕವಳಿಕಾಯಿ, ಅಶೋಕ ಬರಗುಂಡಿ, ಗುಂಡುಶೆಟ್ಟಿ, ಬಸವರಾಜ ಬುಳ್ಳಾ, ಪ್ರಕಾಶ ಅಸುಂಡಿ, ಶ್ರೀದೇವಿ, ಸವಿತಾ ನಡಕಟ್ಟಿನ ಸೇರಿದಂತೆ ಅನೇಕರು ಇದ್ದರು.