ಬುದ್ದ, ಬಸವ, ಸರ್ವಜ್ಞರಂತಹ ಅನೇಕ ಮಹಾನೀಯರು ಕೇವಲ ರಾಜ್ಯ, ರಾಷ್ಟ್ರಕ್ಕೆ ಮಾತ್ರವಲ್ಲ ಇಡೀ ವಿಶ್ವದ ಮನುಕುಲಕ್ಕೆ ದಾರಿದೀಪವಾಗಿದ್ದಾರೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಬುದ್ದ, ಬಸವ, ಸರ್ವಜ್ಞರಂತಹ ಅನೇಕ ಮಹಾನೀಯರು ಕೇವಲ ರಾಜ್ಯ, ರಾಷ್ಟ್ರಕ್ಕೆ ಮಾತ್ರವಲ್ಲ ಇಡೀ ವಿಶ್ವದ ಮನುಕುಲಕ್ಕೆ ದಾರಿದೀಪವಾಗಿದ್ದಾರೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು

ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಅಡಳಿತ ಹಾಗೂ ಕುಂಬಾರ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ತ್ರಿಪದಿಕವಿ ಸರ್ವಜ್ಞ ಅವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಸರ್ವಜ್ಞನ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.

ದೇಹದ ಅನಾರೋಗ್ಯವನ್ನು ವೈದ್ಯರು ಸರಿಪಡಿಸಿದಂತೆ ಸಾಮಾಜದ ಅನಾರೋಗ್ಯಗಳನ್ನು ಸರ್ವಜ್ಞರಂತಹ ಅನೇಕ ಮಹಾನೀಯರು ತಮ್ಮ ವಚನ,ಸಾಹಿತ್ಯಗಳ ಮೂಲಕ ವೈದ್ಯರಂತೆ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಶ್ರಮಿಸಿದ್ದಾರೆ ಎಂದು ಹೇಳಿದರು.

ಸರ್ವಜ್ಞರ ತ್ರಿಪದಿಗಳು ತಮಿಳು ಭಾಷೆಗೆ ಭಾಷಾಂತರಗೊಂಡಿದ್ದು, ಅಲ್ಲಿನವರು ಇವರ ತ್ರಿಪದಿಗಳ ವಚನಗಳಿಂದ ಪ್ರಭಾವಿತರಾಗಿ ತಮಿಳು ನಾಡಿಲ್ಲಿ ನಮ್ಮ ಸರ್ವಜ್ಞರ ಪ್ರತಿಮೆ ಪ್ರತಿಷ್ಠಾಪಿಸಿದ್ದು, ಇದು ಅವರ ಹಿರಿಮೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಕುಂಬಾರ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಬಡ, ಶ್ರಮಿಕ ವರ್ಗದವರಿದ್ದು, ಇವರು 2ಎ ಮೀಸಲಾತಿಗಾಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಕೆಲ ತಾಂತ್ರಿಕ ಕಾರಣಗಳಿಂದ ಸಾಧ್ಯವಾಗುತ್ತಿಲ್ಲ. ಸಮಾಜದ ಎಲ್ಲರೂ ಕೂಡ ಕೇವಲ ಕುಂಬಾರ ಎಂದು ಶಾಲಾ ದಾಖಲಾತಿಗಳಲ್ಲಿ ನಮೋದಿಸಿರಬೇಕು. ಅದರೆ ವೀರಶೈವ ಕುಂಬಾರ, ಲಿಂಗಾಯತ ಕುಂಬಾರ ಎಂದು ಶಾಲಾ ದಾಖಲೆಗಳಲ್ಲಿರುವ ಕಾರಣಕ್ಕೆ ಇವರಿಗೆ 2ಎ ಮೀಸಲಾತಿ ಪ್ರಮಾಣ ಪತ್ರ ನೀಡುವಲ್ಲಿ ತೋಡಕಾಗುತ್ತಿದೆ ಎಂದರು.

ಮುಂದಿನ ದಿನಗಳಲ್ಲಿ ತಾಲೂಕು ಕಚೇರಿ ಮೇಲ್ಛಾವಣಿಯಲ್ಲಿ ಸುಮಾರು 20 ಲಕ್ಷ ರು. ವೆಚ್ಚದಲ್ಲಿ ಸಭಾಂಗಣ ನಿರ್ಮಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಅಲ್ಲಿಯೇ ಕಾರ್ಯಕ್ರಮ ನಡೆಸೋಣ ಎಂದರು.

ಬಯಲು ಸೀಮೆ ಪ್ರದೇಶಾಭಿವೃದ್ದಿ ಮಂಡಳಿ ಅಧ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿ, ಕುಂಬಾರ ಸಮುದಾಯ ಅತಿ ಹಿಂದುಳಿದಿದ್ದು ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಮುಂದೆಬರಬೇಕಾಗಿದ್ದು, ಈ ಬಗ್ಗೆ ಸರ್ಕಾರಗಳಿಂದ ಸಮುದಾಯವರು ಹೆಚ್ಚಿನ ಸೌಲಭ್ಯಗಳನ್ನು ಪಡೆಯುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಹೇಳಿದರು ಕುಂಬಾರ ಬೀದಿಗೆ ಹೋಗುವ ರಸ್ತೆಯ ವೃತ್ತಕ್ಕೆ ಸರ್ವಜ್ಞನ .ವೃತ್ತವೆಂದು ಹೆಸರಿಡಲಾಗಿದ್ದು, ಆದರೆ ರಸ್ತೆ ಆಗಲೀಕರಣದಿಂದಾಗಿ ಹೆಸರಿನ ನಾಮ ಫಲಕ ಹಾಳಾಗಿದ್ದು, ರಸ್ತೆ ಅಗಲೀಕರಣ ಕಾಮಗಾರಿ ಮುಗಿಯುತ್ತಿದ್ದಂತೆ ಪುನಃ ನಾಮಫಲಕ ಸರಿಪಡಿಸಲಾಗುವುದು ಎಂದು ಹೇಳಿದರು.

ಉಪನ್ಯಾಸಕ ಗೊಲ್ಲರಹಳ್ಳಿ ಮಂಜುನಾಥ್ ಸರ್ವಜ್ಞನ ಹುಟ್ಟು ಸಾಹಿತ್ಯ ಸೇವೆಗಳ ಕುರಿತು ಉಪನ್ಯಾಸ ನೀಡಿದರು, ಗ್ರೇಡ್-2 ತಹಸೀಲ್ದಾರ್ ಸುರೇಶ್ ಮಾತನಾಡಿದರು. ರಂಗಕರ್ಮಿ ಪ್ರೇಮ್ ಕುಮಾರ್ ಬಂಡಿಗಡಿ ಮಾತನಾಡಿದರು. ಚನ್ನೇಶ್ ಚಕ್ಕಾಲಿ ಸಮಾಜದ ಕೆಲವು ಬೇಡಿಕೆಗಳ ಬಗ್ಗೆ ಶಾಸಕರ ಗಮನಸೆಳೆದರು.

ಕುಂಬಾರ ಸಮಾಜದ ಅಧ್ಯಕ್ಷ ಬಸವರಾಜಪ್ಪ, ಮುಖಂಡರು, ರಂಗ ಕರ್ಮಿಯಾದ ಬಸವರಾಜ್ ಟೈಲರ್, ಕುಂಬಾರ ಸಮಾಜದ ಅನೇಕ ಮುಖಂಡರು ಇದ್ದರು.