ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಮೊಮ್ಮಗ ಹಾಗೂ ಬೌದ್ಧ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಭೀಮರಾವ್ ಯಶವಂತ್‌ರಾವ್ ಅಂಬೇಡ್ಕರ್ ಹಾಗೂ ಮೀರಾಬಾಯಿ ಅವರ ಸಲಹೆ, ಸಹಕಾರದೊಂದಿಗೆ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಯುವಕರನ್ನು ಸಂಘಟಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಮಾನವೀಯ ಮೌಲ್ಯಗಳು ಮರೆಯಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಬುದ್ಧನ ಸಂದೇಶಗಳು ಪ್ರತಿಯೊಬ್ಬರಿಗೂ ದಾರಿದೀಪವಾಗಲಿವೆ. ಶಾಂತಿ ಸಂದೇಶ ಸಾರುವ ಬೌದ್ಧ ಧರ್ಮದತ್ತ ಜನರು ಬರುವಂತೆ ಮನ ಪರಿವರ್ತನೆಗೆ ಮುಂದಾಗಬೇಕಿದೆ ಎಂದು ಭಾರತೀಯ ಬೌದ್ಧ ಮಹಾ ಸಭಾ ಯುವ ಘಟಕ ರಾಜ್ಯಾಧ್ಯಕ್ಷ ದರ್ಶನ್ ಬಿ.ಸೋಮಶೇಖರ್ ಕರೆ ನೀಡಿದರು.

ಪಟ್ಟಣದ ತಾಲೂಕು ಭಾರತೀಯ ಬೌದ್ಧ ಮಹಾಸಭಾ ಕಚೇರಿಯಲ್ಲಿ ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತೀಯ ಬೌದ್ಧ ಮಹಾಸಭಾವನ್ನು ಮತ್ತಷ್ಟು ಗಟ್ಟಿಗೊಳಿಸಲು ಪ್ರತಿಯೊಂದು ಗ್ರಾಮಗಳಿಗೆ ತೆರಳಿ ಸದಸ್ಯತ್ವ ಹೆಚ್ಚಿಸುವ ಜೊತೆಗೆ ಬುದ್ಧನ ಮಾರ್ಗವನ್ನು ಗ್ರಾಮೀಣ ಜನರಿಗೆ ತಿಳಿಸಿ ಬೌದ್ಧ ಧರ್ಮದ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದರು.

ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಮೊಮ್ಮಗ ಹಾಗೂ ಬೌದ್ಧ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಭೀಮರಾವ್ ಯಶವಂತ್‌ರಾವ್ ಅಂಬೇಡ್ಕರ್ ಹಾಗೂ ಮೀರಾಬಾಯಿ ಅವರ ಸಲಹೆ, ಸಹಕಾರದೊಂದಿಗೆ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಯುವಕರನ್ನು ಸಂಘಟಿಸಲಾಗುತ್ತಿದೆ ಎಂದರು.

ಮಳವಳ್ಳಿ ತಾಲೂಕಿನಲ್ಲಿ ಬುದ್ಧನ ಪುತ್ಥಳಿಯನ್ನು ಪ್ರತಿಷ್ಠಾಪಿಸುವ ಜೊತೆಗೆ ಪಕ್ಷಾತೀತ ಮತ್ತು ಜಾತ್ಯತೀತವಾಗಿ ಎಲ್ಲರನ್ನು ಒಂದುಗೂಡಿಸಿ ಬುದ್ಧನ ಸಂದೇಶವನ್ನು ತಿಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದರು.

ಭಾರತೀಯ ಬೌದ್ಧ ಮಹಾ ಸಭಾ ಜಿಲ್ಲಾಧ್ಯಕ್ಷ ಮಾರ್ಕಾಲು ನಟರಾಜು ಮಾತನಾಡಿ, ಭಾರತೀಯ ಬೌದ್ಧ ಮಹಾ ಸಭಾ ಸದಸ್ಯತ್ವ ಅಭಿಯಾನಕ್ಕೆ ಇಂದಿನಿಂದಲೇ ಚಾಲನೆ ನೀಡಲಾಗಿದೆ. ತಾಲೂಕಿನಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಸಂಘಕ್ಕೆ ನೋಂದಾಯಿಸಿ ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ಬೌದ್ಧ ಸಮ್ಮೇಳನವನ್ನು ಮಳವಳ್ಳಿ ತಾಲೂಕಿನಲ್ಲಿಯೇ ಅಯೋಜಿಸುವ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

ಬೌದ್ಧ ಮಹಾಸಭಾದ ತಾಲೂಕು ಅಧ್ಯಕ್ಷ ಮೋಹನ್‌ಕುಮಾರ್ ಮಾತನಾಡಿದರು. ಮುಖಂಡರಾದ ವಿಜಯ್‌ಕುಮಾರ್, ಚಂದ್ರಶೇಖರ್, ಸಿದ್ದರಾಜು, ಯತೀಶ್, ನಂಜುಂಡಸ್ವಾಮಿ, ಸಿಕ್ರೇಶ್, ಅಶೋಕ್, ಅರವಿಂದ್, ಸ್ವಾಮಿ, ನಾಗೇಂದ್ರ, ಕುಮಾರ್, ಸುಧಾಕರ್, ಮಹೇಶ್‌ಕುಮಾರ್, ಸಂದೇಶ್ ಸೇರಿ ಇತರರು ಇದ್ದರು.