ಬುದ್ಧನ ಬೋಧನೆ ಇಂದಿಗೂ ಪ್ರಸ್ತುತ: ಡಾ.ಅರಡಿ ಮಲ್ಲಯ್ಯ ಕಟ್ಟೇರ

| Published : Oct 16 2025, 02:00 AM IST

ಸಾರಾಂಶ

ಬಹುಶಃ ಬುದ್ಧ ಜಗತ್ತಿನ ಆಕರ್ಷಣೆಯ ಕೇಂದ್ರ ಬಿಂದು. ಬಿಂದು ಒಂದು ಕೇಂದ್ರವನ್ನು ಸ್ಪರ್ಶಿಸಿದರ ಸೂಚ್ಯವೇ ಬುದ್ಧ. ಮಾನವನ ನೆಮ್ಮದಿಯ ಜೀವನ ದಾರಿ ದೀಪಗಳಾದ ಪ್ರೀತಿ, ಕರುಣೆ, ಮೈತ್ರಿ ಸಮಾನತೆಯ ತತ್ತ್ವಗಳನ್ನು ಹಾಗೂ ಬುದ್ಧನ ಸಂದೇಶವನ್ನು ಜನತೆ ತಿಳಿಸುವ ಉದ್ದೇಶವನ್ನು ಇಟ್ಟುಕೊಂಡು ಬೌದ್ಧ ಸಂಸ್ಕೃತಿ ಅಧ್ಯಯನ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಆಧುನಿಕ ವೈಚಾರಿಕ ಯುಗದಲ್ಲಿ ಬುದ್ಧನ ಭೋಧನೆಗಳು ಹೆಚ್ಚು ಚರ್ಚೆಗೊಳಪಡುತ್ತಿವೆ ಎಂದು ಚಿಂತಕ ಡಾ.ಅರಡಿಮಲ್ಲಯ್ಯ ಕಟ್ಟೇರ ಹೇಳಿದರು.

ನಗರದ ಮಹಾರಾಜ ಕಾಲೇಜಿನ ಮೈದಾನದಲ್ಲಿ ಕರ್ನಾಟಕ ರಾಜ್ಯ ಭಿಕ್ಕು ಸಂಘ, ರಾಜ್ಯ ಬೌದ್ಧ ಸಂಘ-ಸಂಸ್ಥೆಗಳು ಹಾಗೂ ರಾಜ್ಯ ಅಂಬೇಡ್ಕರ್ ವಾದಿ ಸಂಘ-ಸಂಸ್ಥೆಗಳು ಮತ್ತು ವಿಶ್ವ ಮೈತ್ರಿ ಬುದ್ಧವಿಹಾರದ ಸಂಯುಕ್ತಾಶ್ರಯದಲ್ಲಿ ಬುಧವಾರ ಸಾಮ್ರಾಟ್ ಅಶೋಕನ ವೇದಿಕೆಯಲ್ಲಿ ಬುದ್ಧ ಮತ್ತು ಆತನ ಧಮ್ಮ ಹಾಗೂ ಸರ್ವಚೇತನ ಎಂಬ ವಿಷಯದ ಕುರಿತು ಅಯೋಜಿಸಿದ್ದ ಕವಿಗೋಷ್ಠಿ ಸಮಾರಂಭದಲ್ಲಿ ಭಾಗವಹಿಸಿ, ಮಾತನಾಡಿದರು.

ಬುದ್ಧ ಸುಮ್ಮನೆ ಇದ್ದ ಅದರೂ ಜಗವನ್ನೆ ಗೆದ್ದ..

ಬಹುಶಃ ಬುದ್ಧ ಜಗತ್ತಿನ ಆಕರ್ಷಣೆಯ ಕೇಂದ್ರ ಬಿಂದು. ಬಿಂದು ಒಂದು ಕೇಂದ್ರವನ್ನು ಸ್ಪರ್ಶಿಸಿದರ ಸೂಚ್ಯವೇ ಬುದ್ಧ. ಮಾನವನ ನೆಮ್ಮದಿಯ ಜೀವನ ದಾರಿ ದೀಪಗಳಾದ ಪ್ರೀತಿ, ಕರುಣೆ, ಮೈತ್ರಿ ಸಮಾನತೆಯ ತತ್ತ್ವಗಳನ್ನು ಹಾಗೂ ಬುದ್ಧನ ಸಂದೇಶವನ್ನು ಜನತೆ ತಿಳಿಸುವ ಉದ್ದೇಶವನ್ನು ಇಟ್ಟುಕೊಂಡು ಬೌದ್ಧ ಸಂಸ್ಕೃತಿ ಅಧ್ಯಯನ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ ಎಂದರು.

ನಮ್ಮ ದೇಹ ಮತ್ತು ಮನಸ್ಸನ್ನು ಶುದ್ಧವಾಗಿಡುವುದು ದಮ್ಮ. ಇರುವ ಜನ್ಮದಲ್ಲೆ ಪರಿಪೂರ್ಣತೆಯನ್ನು ಸಾಧಿಸುವುದು ದಮ್ಮ. ಜೀವನದಲ್ಲಿ ನಿಬ್ಬಣ (ನಿರ್ವಾಣ)ವನ್ನು ಪಡೆಯುವುದು ದಮ್ಮ. ದುರಾಸೆಯನ್ನು ತ್ಯಜಿಸುವುದು ದಮ್ಮ. ಸೃಷ್ಟಿಯ ಸಕಲ ವಸ್ತುಗಳೂ ಅನಿತ್ಯ ಎಂದು ತಿಳಿಯುವುದು ದಮ್ಮ. ಎಲ್ಲರಿಗೂ ವಿದ್ಯೆ ಲಭಿಸುವಂತೆ ಮಾಡುವುದು ದಮ್ಮ. ಬರಿ ವಿದ್ಯೆ ಆಭರಣ ಮಾತ್ರ. ವಿದ್ಯೆಯನ್ನು ಜೀವನದಲ್ಲಿ ಅಳವಡಿಸಿ ನಡೆಯುವುದು ಪ್ರಜ್ಞೆ. ಮತ್ತು ‘ಪ್ರಜ್ಞೆ’ ಅಂದರೆ ವಿಚಾರ ದಮ್ಮ. ಇಂತಹಾ ಪ್ರಜ್ಞೆಯನ್ನು ವಿದ್ಯೆಯ ಜೊತೆ ಬೆಳೆಸುವುದು ದಮ್ಮ ಎಂದರು.

ನಾಡಗೀತೆಯಲ್ಲಿ ‘ಬೌದ್ಧರುಧ್ಯಾನ ಯಾಕಿಲ್ಲ’ ವಿಷಯದ ಕುರಿತು ಡಾ. ಚಿಂ.ಬ.ಬಸವರಾಜು ಮಾತನಾಡಿ, ಸಮಯ, ಪ್ರಾಸ, ಲಯ, ಸಂಗೀತ ಹೀಗೆ ಹಲವು ಕಾರಣಗಳನ್ನು ಮುಂದೆ ಇಟ್ಟು ನಾಡಗೀತೆಗೆ ಆಪರೇಷನ್ ಮಾಡಲಾಗಿದೆ. ಮತ್ತೆ ನಾಡಗೀತೆಯಲ್ಲಿ ಕುವೆಂಪು ಅವರು ಮೂಲದಲ್ಲಿ ರಚಿಸಿದಂತೆ ಬೌದ್ಧರುದ್ಯಾನ ಪದ ಸೇರ್ಪಡೆಯಾಗಬೇಕು ಎಂದು ಅಭಿಪ್ರಾಯಪಟ್ಟರು.

‘ಯುದ್ಧ ಬೇಡ ಬುದ್ಧ ಬೇಕು’ ಎಂದು ಜಗತ್ತು ಜಪಿಸುತ್ತಿರುವಾಗ, ಬುದ್ಧರ ಶಾಂತಿ, ಕರುಣೆ, ಮೈತ್ರಿಗಳು ಜಗತ್ತನ್ನು ವ್ಯಾಪಿಸುತ್ತಿರುವಾಗ, ನಮ್ಮ ನಾಡಿನ ಅಸ್ಮಿತೆಯಿಂದ ಈ ಚಿಂತನೆಗಳನ್ನು ದೂರೀಕರಿಸುವುದು ಹೇಗೆ? ಸಾರ್ವಜನಿಕವಾಗಿ ಬುದ್ಧರ ಆಲೋಚನೆಗಳು, ಚಿಂತನೆಗಳಿಗೆ ಅನ್ಯಾಯ ಮಾಡುವುದು ಸರಿಯೇ ಎಂದು ಅವರು ಪ್ರಶ್ನಿಸಿದರು.

ನಾಡಗೀತೆ ಶುರುವಾಗಿ ಎದ್ದುನಿಂತು, ಎಲ್ಲವನ್ನು ಎಲ್ಲರನ್ನೂ ಗೌರವಿಸುವಾಗ ಬುದ್ಧನನ್ನೇಕೆ ಇಲ್ಲಿಂದ ಉದ್ದೇಶಪೂರ್ವಕವಾಗಿ ಕತ್ತರಿಸಿದರು ಎಂಬ ಕೊರಗು ನಮ್ಮನ್ನು ಕಾಡಲೇ ಬೇಕು ಎಂದರು.

ಈಗಾಗಲೇ ಆಗಿರುವ ಪ್ರಮಾದವನ್ನು ಸರಿಪಡಿಸುವ ಕಾಲ ಸನ್ನಿಹಿತವಾಗಿದೆ. ಹಾಗೆಯೇ ನಾಡಗೀತೆಗೆ ನೂರು ವರ್ಷ ತುಂಬುತ್ತಿರುವ ಈ ವರ್ಷದಲ್ಲಿ ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಬೌದ್ಧರ ಅಸ್ತಿತ್ವವು ಉಳಿಯಲಿ. ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ; ಬರುವ ನವೆಂಬರ್ ಅಷ್ಟರಲ್ಲಿ ಸರಿಪಡಿಸಲಿ ಎಂದು ಅವರು ಮನವಿ ಮಾಡಿದರು.