ಪ್ರಾಣಿ ಬಲಿಗೆ ಬುದ್ದ ಕಟು ವಿರೋಧಿಯಾಗಿದ್ದರು

| Published : Oct 16 2024, 12:51 AM IST

ಸಾರಾಂಶ

ದೇವರು, ಧರ್ಮದ ಹೆಸರಿನಲ್ಲಿ ಪ್ರಾಣಿಗಳನ್ನು ಬಲಿಕೊಡುವುದನ್ನು ಬುದ್ದ ಕಟುವಾಗಿ ವಿರೋಧಿಸಿದ್ದರು ಎಂದು ಪ್ರೊ.ಸಿ.ಕೆ. ಮಹೇಶ್ ಹೇಳಿದರು. ನಗರದ ಅಂಬೇಡ್ಕರ್ ಪ್ರತಿಮೆ ಹತ್ತಿರ ಅಂಬೇಡ್ಕರ್-ನವಯಾನ ಬುದ್ದ ಧಮ್ಮ ಸಂಘದಿಂದ ಸೋಮವಾರ ನಡೆದ ಧಮ್ಮ ದೀಕ್ಷೆ ಉತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.

ಬುದ್ದ ಧಮ್ಮ ಸಂಘದ ಧಮ್ಮ ದೀಕ್ಷೆ ಉತ್ಸವದಲ್ಲಿ ಮಹೇಶ್

ಕನ್ನಡಪ್ರಭವಾರ್ತೆ ಚಿತ್ರದುರ್ಗ

ದೇವರು, ಧರ್ಮದ ಹೆಸರಿನಲ್ಲಿ ಪ್ರಾಣಿಗಳನ್ನು ಬಲಿಕೊಡುವುದನ್ನು ಬುದ್ದ ಕಟುವಾಗಿ ವಿರೋಧಿಸಿದ್ದರು ಎಂದು ಪ್ರೊ.ಸಿ.ಕೆ. ಮಹೇಶ್ ಹೇಳಿದರು. ನಗರದ ಅಂಬೇಡ್ಕರ್ ಪ್ರತಿಮೆ ಹತ್ತಿರ ಅಂಬೇಡ್ಕರ್-ನವಯಾನ ಬುದ್ದ ಧಮ್ಮ ಸಂಘದಿಂದ ಸೋಮವಾರ ನಡೆದ ಧಮ್ಮ ದೀಕ್ಷೆ ಉತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.ಶ್ರೀಮಂತ-ಬಡವ ಎನ್ನುವ ವ್ಯತ್ಯಾಸದಿಂದ ಹಿಂಸೆ ಹುಟ್ಟುತ್ತದೆಯೆಂದು ಬುದ್ದ ವಿಶ್ವಕ್ಕೆ ಸಂದೇಶ ಸಾರಿದ್ದರು. ಬುದ್ದನ ಆಲೋಚನೆಯನ್ನು ಪಲ್ಲವರು, ಅಶೋಕರೂ ಹಿಂಸೆ ವಿರೋಧಿಸುತ್ತಿದ್ದರು. ಅದಕ್ಕಾಗಿ ಬುದ್ದ ಧಮ್ಮವನ್ನು ಪ್ರತಿಯೊಬ್ಬರು ಪಾಲಿಸಿದರೆ ಹಿಂಸೆ ತೊಲಗುತ್ತದೆ. ಜ್ಯೋತಿಷಿ, ಭವಿಷ್ಯವನ್ನು ಹೇಳಿ ಅಮಾಯಕರನ್ನು ವಂಚಿಸುತ್ತಿದ್ದುದನ್ನು ಬುದ್ದ ಒಪ್ಪುತ್ತಿರಲಿಲ್ಲ ಎಂದು ತಿಳಿಸಿದರು.ಧರ್ಮ ದೇವರ ನೆಪದಲ್ಲಿ ಕುಣಿದು ಕುಪ್ಪಳಿಸುವವರ ಸಂಖ್ಯೆ ಜಾಸ್ತಿಯಾಗಿದೆ. ಕುಡಿತದಿಂದ ಕುಟುಂಬ ಹಾಳಾಗುತ್ತದೆ. ಅದಕ್ಕಾಗಿ ಬುದ್ದನ ವಿಚಾರಗಳನ್ನು ಒಪ್ಪುವವರು ಮೊದಲು ಕುಡಿತ ತ್ಯಜಿಸಬೇಕು. ಹಾಗಾಗಿ ಬುದ್ದ ಎಲ್ಲಾ ಕಾಲಕ್ಕೂ ಪ್ರಸ್ತುತ. ಯಜ್ಞ, ಯಾಗಾದಿ, ಹವನ, ಹೋಮಗಳನ್ನು ಬುದ್ದ ಸದಾ ವಿರೋಧಿಸುತ್ತಿದ್ದರು ಎಂದರು.

ಸುಳ್ಳು, ಹಿಂಸೆ, ಕುಡಿತ, ವ್ಯಭಿಚಾರದಿಂದ ನೈತಿಕ ಹಾಗೂ ಭೌತಿಕವಾಗಿ ಮನುಷ್ಯ ದಿವಾಳಿಯಾಗುತ್ತಾನೆ. ಕುಡಿತ ತಪ್ಪಿಸಿದರೆ ಮನೆ, ಕುಟುಂಬ ಉಳಿಯುತ್ತದೆ ಎನ್ನುವುದು ಬುದ್ದನ ಚಿಂತನೆಯಾಗಿತ್ತು. ಬುದ್ದ ಧಮ್ಮದ ಬೆಳವಣಿಗೆಯಂದರೆ ಅದು ದೇಶದ ಅಭಿವೃದ್ದಿಯಿದ್ದಂತೆ. ಮನಸ್ಸು ಮತ್ತು ಮನೆಗಳಲ್ಲಿ ಬುದ್ದ ಧಮ್ಮದ ಆಲೋಚನೆಯಿಟ್ಟು ಕೊಳ್ಳಬೇಕು ಎಂದು ನುಡಿದರು. ನಿವೃತ್ತ ಉಪ ವಿಭಾಗಾಧಿಕಾರಿ ಮಲ್ಲಿಕಾರ್ಜುನ್ ಹಿರೇಹಳ್ಳಿ ಮಾತನಾಡಿ, ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‌ರವರು ಹಿಂದೂ ಧರ್ಮವನ್ನು ತೊರೆದು ಬುದ್ದ ಧರ್ಮಕ್ಕೆ ಹೋದರು. ಅಂತಹ ವಾತಾವರಣ ಸೃಷ್ಟಿಯಾಗಬೇಕಾದರೆ ಪ್ರತಿ ಮನೆ ಮನೆಗೆ ಬುದ್ದನ ವಿಚಾರಗಳು ತಲುಪಬೇಕು ಎಂದು ತಿಳಿಸಿದರು. ನಗರಸಭೆ ಅಧ್ಯಕ್ಷೆ ಸುಮಿತ ರಾಘವೇಂದ್ರ, ಡಿ. ದುರುಗೇಶಪ್ಪ, ಚಿಕ್ಕಣ್ಣ, ರಾಮುಗೋಸಾಯಿ, ದಲಿತ ಮುಖಂಡ ಬಿ. ರಾಜಣ್ಣ, ಪಿ.ವೈ. ದೇವರಾಜ್‌ಪ್ರಸಾದ್, ಟಿ. ರಾಮು ನಿವೃತ್ತ ಡಿ.ಡಿ.ಪಿ.ಐ. ರುದ್ರಪ್ಪ, ಲೇಖಕ ಎಚ್. ಆನಂದ್‌ಕುಮಾರ್, ಸಿದ್ದೇಶಿ ಇನ್ನು ಅನೇಕರು ಧಮ್ಮ ದೀಕ್ಷೆ ಉತ್ಸವದಲ್ಲಿ ಪಾಲ್ಗೊಂಡಿದ್ದರು.