- ಪವರ್ ಶೇರಿಂಗ್ ಕುರಿತ ಚನ್ನರಾಜ ಹಟ್ಟಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಲು ನಕಾರ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಈಗಾಗಲೇ ಸಿದ್ದರಾಮಯ್ಯ 3 ಬಾರಿ ಬಜೆಟ್ ಕೊಟ್ಟಿದ್ದಾರೆ. ಮಾ.6ನೇ ತಾರೀಖಿನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡಿಸಲಿದ್ದಾರೆ. ಈ ಸಲದ ಬಜೆಟ್ ಗಾತ್ರವು ₹10-₹20 ಸಾವಿರ ಕೋಟಿ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಹರಿಹರ ತಾಲೂಕಿನ ರಾಜನಹಳ್ಳಿ ಶ್ರೀ ವಾಲ್ಮೀಕಿ ಗುರುಪೀಠಕ್ಕೆ ಶುಕ್ರವಾರ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಪರಿಶಿಷ್ಟ ಜಾತಿ- ಪಂಗಡಗಳ ಸಮುದಾಯಕ್ಕೆ ನಿವೇಶನ ನೀಡಲು ಈಗಾಗಲೇ ಮುಖ್ಯಮಂತ್ರಿ ಅನುಮತಿ ನೀಡಿದ್ದಾರೆ. ಸರ್ಕಾರಿ ಜಾಗಗಳನ್ನು ಗುರುತಿಸಿ, ಅಭಿವೃದ್ಧಿಪಡಿಸಿ, ಜಾಗ ನೀಡುವ ಕೆಲಸವನ್ನು ಮಾಡುತ್ತೇವೆ ಎಂದರು.


ಶಕ್ತಿ ಯೋಜನೆಗೆ ಸ್ಮಾರ್ಟ್ ಕಾರ್ಡ್‌ಗಳನ್ನು ಉಚಿತವಾಗಿಯೇ ನೀಡಲು ನಮ್ಮ ಸರ್ಕಾರದಲ್ಲಿ ನಿರ್ಣಯವಾಗಿದೆ. ಸ್ಮಾರ್ಟ್ ಕಾರ್ಡ್ ವಿಚಾರದಲ್ಲಿ ಯಾವುದೇ ಗೊಂದಲಗಳೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಡಿಸಿಎಂ ಡಿ.ಕೆ.ಶಿವಕುಮಾರ ಮುಖ್ಯಮಂತ್ರಿ ಆಗುವ ಕಾಲ ಸನ್ನಿಹಿತವೆಂಬ ಚನ್ನರಾಜ ಹಟ್ಟಿಹೊಳಿ ನೀಡಿರುವ ಪವರ್ ಶೇರಿಂಗ್‌ ಹೇಳಿಕೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಸಚಿವರು, ಸಾರಿ... ಅದರ ಬಗ್ಗೆ ಕೇಳಬೇಡಿ ಎಂದಷ್ಟೇ ಪ್ರತಿಕ್ರಿಯಿಸಿದರು.

ಸಚಿವರಿಗೆ ಸನ್ಮಾನಿಸಿ ಕೃತಜ್ಞತೆ:

ಸುಕ್ಷೇತ್ರ ಉಕ್ಕಡಗಾತ್ರಿ- ಮಲ್ಲನಾಯಕನಹಳ್ಳಿ ಗ್ರಾಮಗಳ ಮಧ್ಯೆ ತುಂಗಭದ್ರಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣಕ್ಕೆ ಸಚಿವರು ಮಂಜೂರಾತಿ ನೀಡಿದ್ದಾರೆ. ಈ ಹಿನ್ನೆಲೆ ಹೆಲಿಕಾಪ್ಟರ್‌ನಲ್ಲಿ ವಾಲ್ಮೀಕಿ ಗುರುಪೀಠಕ್ಕೆ ಆಗಮಿಸಿದ ಸಚಿವ ಸತೀಶ ಜಾರಕಿಹೊಳಿ ಅವರನ್ನು ಉಕ್ಕಡಗಾತ್ರಿ ಶ್ರೀ ಕರಿಬಸವೇಶ್ವರ ಗದ್ದಿಗೆ ಟ್ರಸ್ಟ್ ಹಾಗೂ ಉಭಯ ಗ್ರಾಮಸ್ಥರ ಪರವಾಗಿ ಹಾರ ಹಾಕಿ, ಕೃತಜ್ಞತೆ ಸಲ್ಲಿಸಲಾಯಿತು. ಅನಂತರ ಶಾಲೆಯ ಮಕ್ಕಳೊಂದಿಗೆ ಸಚಿವ ಸತೀಶ ಜಾರಕಿಹೊಳಿ ಗ್ರೂಪ್‌ ಫೋಟೋ ತೆಗೆಸಿಕೊಂಡು ಅವರಲ್ಲಿ ಸಂಭ್ರಮಕ್ಕೂ ಕಾರಣರಾದರು.

- - -

(ಸತೀಶ್‌ ಜಾರಕಿಹೊಳಿ)