ಸಾರಾಂಶ
ಗದಗ: ನಿರುದ್ಯೋಗ, ಬಡತನ ನಿರ್ಮೂಲನೆಯಂತಹ ಆದ್ಯತಾ ವಲಯಗಳ ಕಡೆಗೆ ಕಿಂಚಿತ್ತು ಗಮನ ನೀಡದ ಕೇಂದ್ರ ಸರ್ಕಾರದ ಬಜೆಟ್ ಭಾರತೀಯ ಮಾನವ ಸಂಪನ್ಮೂಲದ ಸದ್ಭಳಕೆಗೆ ಯಾವುದೇ ರೀತಿಯ ಕಾರ್ಯಕ್ರಮ ರೂಪಿಸದೇ ಕೇವಲ ಅಂಕಿ-ಸಂಖ್ಯೆಗಳ ಮೂಲಕ ಗೊಂದಲ ಸೃಷ್ಟಿಸಿ, ನಿರಾಸೆ ಮೂಡಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ. ಪಾಟೀಲ ಹೇಳಿದರು.
ಈ ಕುರಿತು ಪ್ರಕಟಣೆ ನೀಡಿರುವ ಅವರು, ವಿಕಸಿತ ಭಾರತ ಎಂಬ ಹುಸಿ ಕಲ್ಪನೆ ಅನಾವರಣಗೊಳಿಸಿರುವ ಕೇಂದ್ರದ ಬಜೆಟ್ 5 ವರ್ಷಗಳ ಅವಧಿಯಲ್ಲಿ 135 ಕೋಟಿ ಭಾರತೀಯ ಜನಸಂಖ್ಯೆಯ ಪೈಕಿ 20 ಲಕ್ಷ ಯುವಕರಿಗೆ ಕೌಶಲ್ಯ ತರಬೇತಿ ನೀಡುವ ಬಗ್ಗೆ ಪ್ರಸ್ತಾಪಿಸಿರುವುದು ಹಾಸ್ಯಸ್ಪದವಾಗಿದೆ. ₹7.50 ಲಕ್ಷ ಸಾಲ ನೀಡುವ ಕಲ್ಪನೆ ಕೇವಲ ಕಲ್ಪನೆಯಾಗಿಯೇ ಉಳಿಯಲಿದೆ. ಏಕೆಂದರೆ ಇಲ್ಲಿಯವರೆಗೂ ಬ್ಯಾಂಕ್‌ಗಳು ನಿರುದ್ಯೋಗಿಗಳಿಗೆ ಭದ್ರತೆ ರಹಿತ ಸಾಲ ನೀಡಿಲ್ಲ.ಇದರಿಂದ ಇಂತಹ ಯೋಜನೆ ಕೇವಲ ಕಣ್ಣೊರೆಸುವ ತಂತ್ರಗಳಾಗಿವೆ.ಪ್ರಧಾನ ಮಂತ್ರಿ ನಗರ ಆವಾಸ್ ಯೋಜನೆ-2, 1 ಕೋಟಿ ನಗರ ಪ್ರದೇಶದ ಬಡವರು ಮತ್ತು ಮಧ್ಯಮವರ್ಗದ ಕುಟುಂಬದವರಿಗೆ ವಸತಿ ಯೋಜನೆ ಒದಗಿಸುವ ಉದ್ದೇಶಕ್ಕಾಗಿ ₹10 ಲಕ್ಷ ಕೋಟಿ ಒದಗಿಸಿರುವುದಾಗಿ ಹೇಳಿದೆ. ಆದರೆ ಪ್ರಧಾನ ಮಂತ್ರಿ ನಗರ ಆವಾಸ್ ಯೋಜನೆ 1, 2 ಕೋಟಿ ಮನೆ ಒದಗಿಸುವ ಯೋಜನೆ ಕಾರ್ಯಗತಗೊಂಡಿಲ್ಲ. ಇದೊಂದು ಕೇವಲ ಕಾಗದದ ಹುಲಿಯಾಗಿದೆ. ಕೇಂದ್ರ ಸರ್ಕಾರದ ಈ ಮುಂಗಡ ಪತ್ರವು ಕೇವಲ ಶ್ರೀಮಂತರು, ಮೇಲ್ಮಧ್ಯಮ ವರ್ಗದವರ ಅವಶ್ಯಕತೆ ಪೂರೈಸುವತ್ತ ಅತೀ ಹೆಚ್ಚು ಗಮನಹರಿಸಿದ್ದು, ಬಡವರು, ಹಿಂದುಳಿದ ವರ್ಗದವರು, ಪರಿಶಿಷ್ಟ ಜಾತಿ ಮತ್ತು ಜನಾಂಗದ ಹಾಗೂ ಬುಡಕಟ್ಟು ಜನಾಂಗ, ಅಲ್ಪಸಂಖ್ಯಾತರ ಅವಕಾಶ ವಂಚಿತ ಜನರ ಕಲ್ಯಾಣಕ್ಕಾಗಿ ಪರಿಣಾಮಕಾರಿಯಾದ ಯಾವುದೇ ಯೋಜನೆ ಜಾರಿಗೆ ತಂದಿಲ್ಲ.
ಅರ್ಥ ವ್ಯವಸ್ಥೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಯಾವುದೇ ಯೋಜನೆ ಪ್ರಕಟಿಸದ ಕೇಂದ್ರ ಸರ್ಕಾರ ರಾಷ್ಟ್ರದ ಜನತೆಗೆ ನಿರಾಸೆ ಮೂಡಿಸಿದೆ. ಕರ್ನಾಟಕದ ಯಾವುದೇ ಪರಿಣಾಮಕಾರಿ ನೀರಾವರಿ ಯೋಜನೆಯಾಗಲಿ ಅಥವಾ ಅಭಿವೃದ್ಧಿ ಯೋಜನೆಗಳಿಗೆ ಯಾವುದೇ ರೀತಿಯ ಹಣ ಒದಗಿಸದೇ ಕರ್ನಾಟಕ ರಾಜ್ಯಕ್ಕೆ ಏಮ್ಸ್ ಮತ್ತು ಐಐಟಿಗಳ ಪ್ರಸ್ತಾಪಗಳಿಲ್ಲದೇ ಮಂಡಿಸಿರುವ ಈ ಮುಂಗಡ ಪತ್ರ ಕರ್ನಾಟಕದ ಜನತೆಗೆ ಬಿಜೆಪಿ ಭ್ರಮನಿರಸನಗೊಳಿಸಿದೆ.ಆದರೆ ಈ ಮುಂಗಡ ಪತ್ರದ ಭಾಷಣದಲ್ಲಿ ಅರ್ಥ ಸಚಿವೆ ನಿರ್ಮಲ ಸೀತಾರಾಮನ ಅವರು ಲೋಕಸಭೆ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಣಾಳಿಕೆಯ ಪುಟ 30ರಲ್ಲಿ ವಿವರಿಸಿರುವ ಉದ್ಯೋಗಕ್ಕೆ ಉತ್ತೇಜನ ನೀಡುವ ವಿಷಯವನ್ನು ಬಜೆಟ್‌ನಲ್ಲಿ ಅಳವಡಿಸಿಕೊಂಡಿರುವುದಕ್ಕೆ ನನಗೆ ಸಂತಸವಾಗಿದೆ. ನಿರುದ್ಯೋಗಿಗಳಿಗೆ ಅಪ್ರೆಂಟಿಶಿಪ್ ಭತ್ಯೆಯೊಂದಿಗೆ ಯಥಾವತ್ತಾಗಿ ಕಾಂಗ್ರೆಸ್‌ನ ಕಾರ್ಯಕ್ರಮ ಜಾರಿಗೆ ತಂದಿರುವುದು ಕಾಂಗ್ರೆಸ್ ಪ್ರಣಾಳಿಕೆಯ ಭರವಸೆಯ ಪರಿಣಾಮಕಾರಿ ಯೋಜನೆಯನ್ನು ಅತ್ಯಂತ ವ್ಯಾಪಕವಾಗಿ ಬಿಂಬಿಸಿರುವುದಕ್ಕೆ ಅಭಿನಂದಿಸುವೆ ಎಂದು ತಿಳಿಸಿದ್ದಾರೆ.