ಮಹಿಳೆಯರ ಸ್ವ-ಉದ್ಯೋಗಕ್ಕೆ ಬಜೆಟ್‌ ಬಂಪರ್‌

| Published : Feb 17 2024, 01:19 AM IST

ಸಾರಾಂಶ

ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬಲು ಮತ್ತು ಅವರ ಸಬಲೀಕರಣಕ್ಕಾಗಿ ‘ಶಕ್ತಿ ಹಾಗೂ ಗೃಹಲಕ್ಷ್ಮೀ’ ಗ್ಯಾರಂಟಿ ಯೋಜನೆ ಘೋಷಿಸಿದ ಹಾಗೂ ಅಧಿಕಾರ ಬಂದ ಕೆಲವೇ ದಿನಗಳಲ್ಲಿ ಈ ಎರಡೂ ಯೋಜನೆಗಳನ್ನು ಅನುಷ್ಠಾನಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಮ್ಮ 2.0 ಸರ್ಕಾರದ ಎರಡನೇ ಬಜೆಟ್‌ನಲ್ಲೂ ಸಹ ಮಹಿಳಾ ಆರ್ಥಿಕತೆಗೆ ಹಾಗೂ ಆರೋಗ್ಯಕ್ಕೆ ಶಕ್ತಿ ತುಂಬಲು ಭರಪೂರ ಯೋಜನೆ ಘೋಷಿಸಿದ್ದಾರೆ.

ಬೆಂಗಳೂರು: ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬಲು ಮತ್ತು ಅವರ ಸಬಲೀಕರಣಕ್ಕಾಗಿ ‘ಶಕ್ತಿ ಹಾಗೂ ಗೃಹಲಕ್ಷ್ಮೀ’ ಗ್ಯಾರಂಟಿ ಯೋಜನೆ ಘೋಷಿಸಿದ ಹಾಗೂ ಅಧಿಕಾರ ಬಂದ ಕೆಲವೇ ದಿನಗಳಲ್ಲಿ ಈ ಎರಡೂ ಯೋಜನೆಗಳನ್ನು ಅನುಷ್ಠಾನಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಮ್ಮ 2.0 ಸರ್ಕಾರದ ಎರಡನೇ ಬಜೆಟ್‌ನಲ್ಲೂ ಸಹ ಮಹಿಳಾ ಆರ್ಥಿಕತೆಗೆ ಹಾಗೂ ಆರೋಗ್ಯಕ್ಕೆ ಶಕ್ತಿ ತುಂಬಲು ಭರಪೂರ ಯೋಜನೆ ಘೋಷಿಸಿದ್ದಾರೆ.ಮಹಿಳೆಯರಿಗೆ ರಾಜ್ಯಾದ್ಯಂತ ಉಚಿತ ಬಸ್‌ ಪ್ರಯಾಣ ಸೌಲಭ್ಯ ಕಲ್ಪಿಸಿರುವ ಶಕ್ತಿ ಯೋಜನೆಗೆ 3 ಸಾವಿರ ಕೋಟಿ ರು., ಮಹಿಳೆಯರ ಆರ್ಥಿಕ ಸ್ವಾತಂತ್ರ್ಯಕ್ಕೆ ಬೆಂಬಲ ನೀಡುವ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯಡಿ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2,000 ರು. ನೀಡಲು 28,608 ಕೋಟಿ ರು. ಅನ್ನು ಮುಖ್ಯಮಂತ್ರಿ ಘೋಷಿಸಿದ್ದಾರೆ. ಕುಟುಂಬ ನಿರ್ವಹಣೆಯ ಜೊತೆಗೆ ಆದಾಯೋತ್ಪನ್ನಕ್ಕೂ ಆದ್ಯತೆ ನೀಡಿರುವ ಸಿಎಂ, ಒಂದು ಲಕ್ಷ ಮಹಿಳಾ ಸ್ವ-ಸಹಾಯ ಗುಂಪುಗಳು ಮೀನುಗಾರಿಕೆ, ಕುಕ್ಕುಟ, ಕುರಿ ಮತ್ತು ಮೇಕೆ, ಜೇನು ಸಾಕಾಣಿಕೆ ಸಂಬಂಧಿಸಿದ ಕಿರು ಉದ್ದಿಮೆಗಳನ್ನು ಸ್ಥಾಪಿಸಲು 100 ಕೋಟಿ ರು., ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರೇ ಕ್ಯಾಂಟೀನ್‌ ಸ್ಥಾಪಿಸಲು ‘ಕೆಫೆ ಸಂಜೀವಿನಿ’ ಎಂಬ ಹೊಸ ರೂಪಿಸಲಾಗಿದ್ದು, ಅದಕ್ಕಾಗಿ ಯೋಜನೆಗೆ 7.5 ಕೋಟಿ ರು. ನೀಡಿದ್ದಾರೆ.ಕಾಫಿ ಮಂಡಳಿಯ ಸಹಭಾಗಿತ್ವದಲ್ಲಿ ಒಂದು ಲಕ್ಷ ಮಹಿಳೆಯರಿಗೆ ಕಾಫಿ ಉದ್ಯಮಿಗಳಾಗಲು ತರಬೇತಿ ನೀಡಲು ಮತ್ತು 2500 ಕಾಫಿ ಕಿಯೋಸ್ಕ್‌ ಆರಂಭಿಸಲು 25 ಕೋಟಿ ರು. ನೀಡಲಾಗಿದೆ. ರಾಜ್ಯದ 5 ನಗರಗಳಲ್ಲಿ 2 ಕೋಟಿ ರು. ವೆಚ್ಚದಲ್ಲಿ ವಿದ್ಯಾರ್ಥಿನಿಯರು ಮತ್ತು ಉದ್ಯೋಗಸ್ಥ ಮಹಿಳೆಯರು ತಂಗಲು ರಾತ್ರಿ ತಂಗುವ ವ್ಯವಸ್ಥೆ, ರಾಜ್ಯದ 100 ಆಯ್ದ ಗ್ರಾ.ಪಂ ಗಳಲ್ಲಿ ಮಹಿಳಾ ಉದ್ಯೋಗಾಧಾರಿತ ಕೌಶಲ್ಯ ತರಬೇತಿ ನೀಡಲು ‘ಸಾವಿತ್ರಿಬಾಯಿ ಫುಲೆ ಮಹಿಳಾ ಸಬಲೀಕರಣ ಯೋಜನೆ ಪ್ರಾರಂಭಿಸಲು ಬಜೆಟ್‌ನಲ್ಲಿ ತೀರ್ಮಾನಿಸಲಾಗಿದೆ.ರಾಜ್ಯದ ಎಲ್ಲಾ ಗ್ರಾ. ಪಂ.ಗಳಲ್ಲಿ ತಲಾ ಒಂದು ಲಕ್ಷ ರು. ನೆರವಿನೊಂದಿಗೆ ಎಣ್ಣೆ ಗಾಣ ಸ್ಥಾಪನೆ. ರಾಜ್ಯದ 14 ಸ್ಥಳಗಳಲ್ಲಿ ಮುಂದಿನ ಎರಡು ವರ್ಷದೊಳಗೆ 35 ಕೋಟಿ ರು. ವೆಚ್ಚದಲ್ಲಿ ಮಹಿಳಾ ಕ್ರೀಡಾ ವಸತಿ ನಿಲಯ ನಿರ್ಮಾಣ. ಬಳ್ಳಾರಿಯಲ್ಲಿ ಕ್ರೀಡಾ ಮಹಿಳಾ ವಸತಿ ನಿಲಯದ ಉನ್ನತೀಕರಣ ಹಾಗೂ ಕ್ರೀಡಾ ಸೌಕರ್ಯಗಳ ಅಭಿವೃದ್ಧಿಗೆ 10 ಕೋಟಿ ರು. ಒದಗಿಸಲಾಗಿದೆ. ಹಸು/ಎಮ್ಮೆ ಖರೀದಿಗೆ ಪಡೆಯುವ ಸಾಲವನ್ನು ಸಕಾಲದಲ್ಲಿ ಮರು ಪಾವತಿಸಿದ ರೈತ ಮಹಿಳೆಗೆ ಶೇ.6ರಷ್ಟು ಬಡ್ಡಿ ಸಹಾಯಧನ ಘೋಷಿಸಲಾಗಿದೆ.

ಗ್ರಾಮೀಣ ಭಾಗದ ಸ್ವ-ಸಹಾಯ ಗುಂಪು, ಗ್ರಾ.ಪಂ. ಮಹಿಳಾ ಸದಸ್ಯರು ಹಾಗೂ ಮುಂಚೂಣಿಯ ಕಾರ್ಯಕರ್ತೆಯರಿಗೆ ಮೆನ್ಸ್‌ಟ್ರೂಯಲ್‌ (menstrual cup) ಕಪ್‌ ಬಳಕೆ ಪ್ರೋತ್ಸಾಹಿಸಲು, ಸ್ವ-ಸಹಾಯ ಗುಂಪುಗಳ ಸಕ್ರಿಯ ಭಾಗವಹಿಸಲು ಮತ್ತು ನಾಯಕತ್ವ ಬಲಪಡಿಸಲು ಜಿಪಿ-ಎಸ್‌ಎಚ್‌ಜಿ ಒಗ್ಗೂಡಿಸುವಿಕೆಯ ನೀತಿ ಜಾರಿಗೊಳಿಸಲು ಉದ್ದೇಶಿಸಲಾಗಿದೆ. ಮಾಧ್ಯಮಿಕ, ಫೆಡರಲ್‌ ಮತ್ತು ಅಪೆಕ್ಸ್‌ ಸಹಕಾರ ಸಂಘಗಳ ಆಡಳಿತ ಮಂಡಳಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಮಹಿಳೆಯರಿಗೆ ಮೀಸಲಾತಿ ತರಲು ಅಧಿನಿಯಮಗಳಿಗೆ ತಿದ್ದುಪಡಿಸಿ ತರಲು ನಿರ್ಧರಿಸಲಾಗಿದೆ.ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಕಟ್ಟಡ ನಿರ್ಮಾಕ್ಕೆ 54 ಕೋಟಿ ರು., ಬೆಂಗಳೂರಿನ ಮಹಾರಾಣಿ ಕಲಾ, ವಾಣಿಜ್ಯ ಕಾಲೇಜು ಹಾಸ್ಟೆಲ್‌ ಕಟ್ಟಡ ನಿರ್ಮಾಣ 116 ಕೋಟಿ ರು., ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿನಿಯರ ದಾಖಲಾತಿ ಹೆಚ್ಚಿಸಲು ರಾಜ್ಯದ 30 ಸರ್ಕಾರಿ ಮಿಹಿಳಾ ಪ್ರಥಮ ದರ್ಜೆ ಕಾಲೇಜುಗಳು ಮತ್ತು ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‌ಗಳ ಉನ್ನತೀಕರಣಕ್ಕೆ ಒಟ್ಟು 30 ಕೋಟಿ ರು. ಅನುದಾನ ನೀಡಲಾಗಿದೆ.ಕೆ.ಸಿ.ಜನರಲ್‌ ಆಸ್ಪತ್ರೆಯ ಆವರಣದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಕಟ್ಟಡ ಮತ್ತಿತರ ಮೂಲ ಸೌಕರ್ಯಗಳ ಕಾಮಗಾರಿಗಳಿಗೆ 150 ಕೋಟಿ ರು., ಸ್ತನ ಕ್ಯಾನ್ಸರ್‌ ಮತ್ತು ಗರ್ಭಕಠದ ಕ್ಯಾನ್ಸರ್‌ ಅನ್ನು ಪ್ರಾರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಚಕಿತ್ಸೆ ನೀಡಲು 20 ಜಿಲ್ಲಾ ಆಸ್ಪತ್ರೆಗಳಲ್ಲಿ ಡಿಜಿಟಲ್‌ ಮಮೋಗ್ರಫಿ (digital mammography) ಯಂತ್ರಗಳನ್ನು ಮತ್ತು ಕೆ.ಸಿ. ಜನರಲ್‌ ಆಸ್ಪತ್ರೆಯ ಬೆಂಗಳೂರು ಹಾಗೂ ಉಡುಪಿ, ಕೋಲಾರ ಮತ್ತು ದಾವಣಗೆರೆ ಜಿಲ್ಲಾ ಆಸ್ಪತ್ರೆಗಳಿಗೆ ಕೊಲ್ಪೊಸ್ಸೋಪಿ (colposcopy) ಉಪಕರಣಗಳ ಖರೀದಿಗೆ 21 ಕೋಟಿ ರು. ಅನುದಾನ ಒದಗಿಸಲಾಗಿದೆ.