ಸಾರಾಂಶ
ಶಿವಮೊಗ್ಗ: 2025-26ನೇ ಸಾಲಿನ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಬಡವರು, ಯುವಕರು, ರೈತರು ಹಾಗೂ ಮಹಿಳೆಯರ ಏಳಿಗೆಗಾಗಿ ಹೆಚ್ಚು ಆದ್ಯತೆಯನ್ನು ನೀಡಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ಗ್ರಾಮೀಣ ಭಾಗದ ರೈತರಿಗೆ ಆರ್ಥಿಕ ನೆರವು ನೀಡುವ ದೃಷ್ಟಿಯಿಂದ ಪ್ರಧಾನ ಮಂತ್ರಿಧನ್ ಧಾನ್ಯ ಕೃಷಿ ಯೋಜನೆ ಅಡಿಯಲ್ಲಿ ಕಡಿಮೆ ಇಳುವರಿ ಇರುವ ರಾಷ್ಟ್ರದ ನೂರು ಜಿಲ್ಲೆಗಳನ್ನು ಗುರುತಿಸಿ ಅವುಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಇದರಿಂದ ಸುಮಾರು 1.7 ಕೋಟಿ ರೈತರು ಇದರ ಲಾಭ ಪಡೆಯಲಿದ್ದಾರೆ. ಯುವಕರನ್ನು ಕೃಷಿಯತ್ತ ಸೆಳೆಯುವಲ್ಲಿ ಕೇಂದ್ರ ಸರ್ಕಾರ ಹೆಚ್ಚು ಗಮನ ನೀಡಿದೆ. ಮೂರು ಯೂರಿಯಾ ಪ್ಲಾಂಟ್‌ಗಳನ್ನು ದೇಶದಲ್ಲಿ ಆರಂಭಿಸಲಾಗುತ್ತದೆ. ಕೃಷಿ ಕಾರ್ಡ್ ಲೋನ್ ಮೊತ್ತವನ್ನು 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಮೀನುಗಾರರ ವಲಯಕ್ಕೆ 60,000 ಕೋಟಿ ರು. ಅನುದಾನ ನೀಡಲಾಗಿದೆ. ಅದಲ್ಲದೆ ರೈತ ಉತ್ಪಾದನಾ ಸಹಕಾರ ಸಂಘಗಳ ರಚನೆ ಮಾಡಲು ಕ್ರಮ ವಹಿಸಲಾಗಿದೆ. ಕೃಷಿ ಉತ್ಪನ್ನಗಳನ್ನು ಹೆಚ್ಚಳ ಮಾಡಲು ಆದ್ಯತೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.ದೇಶದ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ, ನಗರ ಅಭಿವೃದ್ಧಿಗಾಗಿ ಒಂದು ಲಕ್ಷ ಕೋಟಿ ರು. ಅನುದಾನವನ್ನು ನೀಡಲಾಗಿದೆ. ಮುಂದಿನ 10 ವರ್ಷಗಳಲ್ಲಿ 100 ಹೊಸ ವಿಮಾನ ನಿಲ್ದಾಣಗಳ ನಿರ್ಮಾಣ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ.
ಆದಾಯ ತೆರಿಗೆಗೆ ಸಂಬಂಧಿಸಿದಂತೆ ನಮ್ಮ ಸರ್ಕಾರ 12 ಲಕ್ಷಗಳವರೆಗೆ ಯಾವುದೇ ಆದಾಯ ತೆರಿಗೆ ನೀಡುವಂತಿಲ್ಲ ಎಂದು ಘೋಷಣೆ ಮಾಡಿರುವುದರಿಂದ ಬಹಳಷ್ಟು ಬಡ ಹಾಗೂ ಮಧ್ಯಮ ವರ್ಗದವರಿಗೆ ಒಂದು ದೊಡ್ಡ ಕೊಡುಗೆಯನ್ನು ನಮ್ಮ ಕೇಂದ್ರ ಸರ್ಕಾರ ಈ ಬಜೆಟ್‌ನಲ್ಲಿ ನೀಡಿದೆ. ಒಟ್ಟಾರೆ ದೇಶದ ಅಭಿವೃದ್ಧಿಗಾಗಿ ಮಾಡಿದ ಬಜೆಟ್ ಆಗಿದೆ ಎಂದು ತಿಳಿಸಿದ್ದಾರೆ.ಮಧ್ಯಮ ವರ್ಗದವರಿಗೆ ಸಂಜೀವಿನಿಯಂತೆ ಮೂಡಿ ಬಂದ ಬಜೆಟ್
ಶಿವಮೊಗ್ಗ: ಮಧ್ಯಮ ವರ್ಗದ ಜನತೆಯನ್ನು ಗಮನದಲ್ಲಿಟ್ಟುಕೊಂಡು ಆದಾಯ ತೆರಿಗೆಯಲ್ಲಿ ಬಾರಿ ಪ್ರಮಾಣದ ಅನುಕೂಲತೆಯನ್ನು ವಿತ್ತ ಸಚಿವರು ಅನುವು ಮಾಡಿಕೊಡುವ ಮುಖಾಂತರ ಮಧ್ಯಮ ವರ್ಗ ದೇಶದ ಬಲವರ್ಧನೆಗೆ ಬೆನ್ನೆಲುಬು ಎಂದು ವ್ಯಾಖ್ಯಾನಿಸಿದ ಮುಂಗಡಪತ್ರ ಇದಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ತಿಳಿಸಿದ್ದಾರೆ. ಎಲ್ಲಾ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ದೇಶದ ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸುವ ಹಾಗೂ ಉಳಿತಾಯಕ್ಕೆ ಹೆಚ್ಚು ಒತ್ತು ಕೊಡುವ ಘನ ಉದ್ದೇಶದಿಂದ ವಿತ್ತ ಸಚಿವೆಯರು ಸಾಧ್ಯವಾದ ಎಲ್ಲಾ ರೀತಿಯ ನೆರವನ್ನು ವಿದ್ಯಾರ್ಥಿಗಳಿಗೆ, ಉದ್ಯಮ ಕ್ಷೇತ್ರ, ಕೃಷಿ ಕ್ಷೇತ್ರ, ಹಣಕಾಸಿನ ಕ್ಷೇತ್ರಕ್ಕೆ ಒತ್ತು ಕೊಡುವ ಮೂಲಕ ಹೊಸ ಭರವಸೆಯನ್ನು ಎಲ್ಲಾ ವರ್ಗದ ಜನರಲ್ಲಿ ಮೂಡಿಸಿರುವ ಮುಂಗಡ ಪತ್ರ ಎಂದು ಹೇಳಲು ಇಚ್ಛಿಸುತ್ತೇನೆ. ಜಾಗತಿಕ ಮಟ್ಟದಲ್ಲಿ ಭಾರತದ ವಿಮಾ ಉದ್ಯಮವನ್ನು ಮತ್ತಷ್ಟು ಬಲಪಡಿಸಿದ್ದಾರೆ ಎಂದು ಹೇಳಿದ್ದಾರೆ. ಎಂಎಸ್‌ಎಂಇ ಕ್ಷೇತ್ರಕ್ಕೆ ಆಶಾದಾಯಕ ಬಜೆಟ್ಶಿವಮೊಗ್ಗ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಎಂಎಸ್‌ಎಂಇ ಕ್ಷೇತ್ರದ ಬೆಳವಣಿಗೆಗೆ ಆಶಾದಾಯಕವಾಗಿದೆ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದ್ದಾರೆ.ದೇಶದಲ್ಲಿ ಇರುವ ಒಂದು ಕೋಟಿಗೂ ಅಧಿಕ ಎಂಎಸ್‌ಎಂಇ ಒಳಗೊಂಡು ಗ್ಲೋಬಲ್ ಮ್ಯಾನುಫ್ಯಾಕ್ಚರಿಂಗ್ ಹಬ್ ನಿರ್ಮಿಸಲು ಮುಂದಾಗುತ್ತಿರುವುದು ಅಭಿನಂದನೀಯ. ಎಂಎಸ್‌ಎಂಇ ಕ್ಷೇತ್ರದ ಉದ್ಯಮಕ್ಕೆ 5 ಕೋಟಿ ರೂ.ನಿಂದ 10 ಕೋಟಿ ರು. ಸಾಲಸೌಲಭ್ಯ ಮೊತ್ತ ಹೆಚ್ಚಿಸಿರುವುದು ಸಹಕಾರಿಯಾಗಲಿದೆ. ಹೊಸದಾಗಿ ಉದ್ಯಮ ಆರಂಭಿಸುವವರಿಗೆ 20 ಕೋಟಿ ರೂ.ವರೆಗೆ ಸಾಲಸೌಲಭ್ಯ ನೀಡುವ ನಿರ್ಧಾರ ಸ್ವಾಗತಾರ್ಹ. ಐದು ಲಕ್ಷ ರೂ.ವರೆಗೆ ಕಸ್ಟಮೈಸ್ಡ್ ಕ್ರೆಡಿಟ್ ಕಾರ್ಡ್ ಸೌಲಭ್ಯ ನೀಡುತ್ತಿರುವುದು ಹೆಚ್ಚಿನ ಅನುಕೂಲ ಒದಗಿಸಲಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಅಂಬೇಡ್ಕರ್ ಆಶಯಕ್ಕೆ ಪೂರಕವಾದ ಬಜೆಟ್
ಶಿವಮೊಗ್ಗ: ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಎಂಟನೇ ಬಾರಿಗೆ ಬಜೆಟ್ ಮಂಡಿಸಿದ್ದು, ಈಬಾರಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಇದು ಅಂಬೇಡ್ಕರ್ ಅವರ ಆಶಯಕ್ಕೆ ಪೂರಕವಾಗಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದ್ದಾರೆ.ಕೇಂದ್ರ ಬಜೆಟ್‌ನಲ್ಲಿ ಮಹಿಳೆಯರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಕ್ಯಾನ್ಸರ್ ಪೀಡಿತರಿಗೆ ಅನುಕೂಲವಾಗುವಂತ ಕ್ರಮವನ್ನು ಘೋಷಣೆ ಮಾಡಿದ್ದಾರೆ. ತಾಯಿ ಹೃದಯದ ಬಜೆಟ್ ಅನ್ನು ಅವರು ನೀಡಿದ್ದಾರೆ. ಬಿಹಾರಕ್ಕೆ ಈ ಬಾರಿ ಜಾಸ್ತಿ ನೀಡಿರಬಹುದು. ಮುಂದಿನ ಬಾರಿ ಕರ್ನಾಟಕಕ್ಕೂ ಸಹ ಕೊಡಬಹುದು. ರೈಲ್ವೆ ಸೇರಿದಂತೆ ಕೇಂದ್ರದ ಯೋಜನೆಗಳು ಶಿವಮೊಗ್ಗಕ್ಕೂ ಬಂದಿವೆ. ಒಟ್ಡಿನಲ್ಲಿ ಗ್ರಾಮೀಣ ಭಾರತದ ಅಭಿವೃದ್ಧಿಗೆ ಪೂರಕವಾದ ಬಜೆಟ್ ಇದಾಗಿದೆ ಎಂದು ಹೇಳಿದ್ದಾರೆ.
ಬಡವರ, ರೈತ ವಿರೋಧಿ ಬಜೆಟ್: ಡಾ.ಎಂ.ಎಸ್.ಮಂಜುನಾಥ್ಶಿವಮೊಗ್ಗ: ನಿರ್ಮಲ ಸೀತಾರಾಮನ್ ಮಂಡಿಸಿರುವ ಬಜೆಟ್‌ನಿಂದ ವೇತನದಾರರು, ಮಾಧ್ಯಮ ವರ್ಗದವರು, ನಿರ್ಮಿತಿದಾರರಿಗೆ ಅನುಕೂಲಕರವಾಗಿದ್ದು, ರಕ್ಷಣೆ, ಗ್ರಾಮೀಣಾಭಿವೃದ್ಧಿ, ಕೃಷಿ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ನಿವೃತ್ತ ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ.ಎಂ.ಎಸ್.ಮಂಜುನಾಥ್ ತಿಳಿಸಿದ್ದಾರೆ.ಬಜೆಟ್‌ನಲ್ಲಿ ಹೊಸ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಲು ಒತ್ತು ನೀಡಲಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಇನ್ನಷ್ಟು ಸುಧಾರಣೆಗೆ ಒತ್ತು ನೀಡಲಾಗಿದೆ. ಆದರೆ ಮುಂಗಡಪತ್ರವು ಸೈದ್ಧಾಂತಿಕವಾಗಿದೆ. ತಳಮಟ್ಟದಲ್ಲಿ ಶೈಕ್ಷಣಿಕ ಗುಣಮಟ್ಟಕ್ಕೆ, ಉದ್ಯೋಗ ನಿರ್ಮಾಣಕ್ಕೆ, ರಾಷ್ಟ್ರದ ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂಬ ಭಾವನೆ ಮೂಡುತ್ತದೆ ಎಂದು ಹೇಳಿದ್ದಾರೆ.ರಾಷ್ಟ್ರದ ಕೃಷಿಕರ ಬೆಳೆಗಳಿಗೆ ನಿಗದಿತ ಬೆಲೆ ನಿರ್ಧಾರವಾಗದಿರುವುದರಿಂದ ಈ ಮುಂಗಡ ಪತ್ರವು ಬಡವರ ಹಾಗೂ ರೈತ ವಿರೋಧಿಯಾಗಿದೆ. ಜನಸಾಮಾನ್ಯರ ವಿರೋಧಿಯು ಆಗಿದೆ. ಕೆಲವೇ ರಾಜ್ಯಗಳಿಗೆ ವಿಶೇಷ ಪ್ಯಾಕೇಜ್ ನೀಡಲಾಗಿದೆ. ಅದರಲ್ಲೂ ನಮ್ಮ ಕರ್ನಾಟಕ ರಾಜ್ಯಕ್ಕೆ ವಿಶೇಷವಾಗಿ ಯಾವುದೇ ಅನುದಾನ, ಆರ್ಥಿಕ ಸಂಪನ್ಮೂಲದ ನೆರವನ್ನು ಯಾವುದೇ ಯೋಜನೆಗಳಿಗೆ ನೀಡದಿರುವುದರಿಂದ ಅನ್ಯಾಯವಾದಂತಾಗಿದೆ ಎಂದಿದ್ದಾರೆ. ಕಲ್ಯಾಣ ಕರ್ನಾಟಕ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಸಮಗ್ರ ಭಾರತದ ಅಭಿವೃದ್ಧಿಗೆ ಎಲ್ಲಾ ರಾಜ್ಯಗಳ ದುಡಿಮೆಗೆ ಅನುಗುಣವಾಗಿ ಸಮಪಾಲನ್ನು ಮುಂಗಡಪತ್ರದಲ್ಲಿ ನೀಡದಿರುವುದು ದುರದೃಷ್ಟಕರ ಸಂಗತಿ. ಈ ಬಾರಿಯ ಬಜೆಟ್ ಅಷ್ಟೇನೂ ಆಶಾದಾಯಕರವಾಗಿಲ್ಲ. ರಾಜ್ಯದ ಪಾಲಿಗಂತೂ ನಿರಾಶದಾಯಕವಾಗಿದೆ ಎಂದು ತಿಳಿಸಿದ್ದಾರೆ.ಬೋಗಸ್ ಬಜೆಟ್: ಸುಂದರೇಶ್: ಎಚ್.ಎಸ್.ಸುಂದರೇಶ್‌ಶಿವಮೊಗ್ಗ: ಕೇಂದ್ರ ಸರ್ಕಾರದ ಬಜೆಟ್ ಬೋಗಸ್ ಬಜೆಟ್ ಎಂದು ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಟೀಕಿಸಿದ್ದಾರೆ.ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಘೋಷಣೆಯಾಗಿರುವ ತೆರಿಗೆ ರಿಯಾಯಿತಿ ಗೊಂದಲ ಮೂಡಿಸುವಂತೆ ಇದೆ. ಕರ್ನಾಟಕ ರಾಜ್ಯ ಅತಿ ಹೆಚ್ಚು ತೆರಿಗೆ ನೀಡಿದರೂ ರಾಜ್ಯಕ್ಕೆ ಬಜೆಟ್‌ನಲ್ಲಿ ಏನನ್ನೂ ಕೊಟ್ಟಿಲ್ಲ. ಎಲೆಕ್ಷನ್ ಕಾರಣ ಬಿಹಾರ ರಾಜ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ನೀರಾವರಿಗೆ ಯೋಜನೆಗೆ ಏನೂ ಇಲ್ಲ. ಕಳೆದ ಬಾರಿ ಘೋಷಣೆ ಮಾಡಿದ ಕಾಮಗಾರಿಗಳೇ ಇನ್ನು ಆರಂಭವಾಗಿಲ್ಲ. ಹೀಗಾಗಿ ರಾಜ್ಯದ ಪಾಲಿಗೆ ಇದು ನಿರಾಸದಾಯಕ ಬಜೆಟ್ ಎಂದು ಹೇಳಿದ್ಧಾರೆ.