ಮಾರ್ಚ್ 1ರಂದು ಯಾದಗಿರಿ ನಗರಸಭೆ ಹೊಸ ಕಟ್ಟಡದಲ್ಲಿ ಬಜೆಟ್‌ ಸಭೆ

| Published : Mar 01 2025, 01:02 AM IST

ಸಾರಾಂಶ

ಮಾ.1 ರ ಶನಿವಾರ ಬೆಳಿಗ್ಗೆ 11 ಗಂಟೆಗೆ ಯಾದಗಿರಿ ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಅಧ್ಯಕ್ಷತೆಯಲ್ಲಿ, ನಗರಸಭೆಯ ಸದಸ್ಯರ ಸಾಮಾನ್ಯ ಸಭೆ ಹಾಗೂ ಬಜೆಟ್‌ ಸಭೆ ಆಯೋಜಿಸಲಾಗಿದೆ. ವಿಶೇಷವೆಂದರೆ, ದಶಕಗಳಷ್ಟು ಹಳೆಯದಾಗಿದ್ದ ನಗರಸಭೆ ಕಚೇರಿ ಕಟ್ಟಡ ಧ್ವಂಸಗೊಳಿಸಿ, ಅದೇ ಸ್ಥಳದಲ್ಲಿ 5 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಅತ್ಯಾಧುನಿಕ ಹಾಗೂ ಸುಸಜ್ಜಿತ ನಗರಸಭೆಯ ನೂತನ ಕಟ್ಟಡದಲ್ಲಿ ನಡೆಯುತ್ತಿರುವ ಮೊದಲ ಸಭೆ ಇದಾಗಿದೆ.

ಸಾಮಾನ್ಯ ಸಭೆಯೂ ಆಯೋಜನೆ । ಅನುದಾನವಿಲ್ಲದೆ ಕಟ್ಟಡ ನಿರ್ಮಾಣ । ತೆರಿಗೆ ಸಂಗ್ರಹ, ರಸ್ತೆ ದುರಸ್ತಿ ಸೇರಿ ಹಲವು ಸಮಸ್ಯೆ ಚರ್ಚೆ ನಿರೀಕ್ಷೆ

ಕನ್ನಡಪ್ರಭ ವಾರ್ತೆ ಯಾದಗಿರಿ

ಮಾ.1 ರ ಶನಿವಾರ ಬೆಳಿಗ್ಗೆ 11 ಗಂಟೆಗೆ ಯಾದಗಿರಿ ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಅಧ್ಯಕ್ಷತೆಯಲ್ಲಿ, ನಗರಸಭೆಯ ಸದಸ್ಯರ ಸಾಮಾನ್ಯ ಸಭೆ ಹಾಗೂ ಬಜೆಟ್‌ ಸಭೆ ಆಯೋಜಿಸಲಾಗಿದೆ. ವಿಶೇಷವೆಂದರೆ, ದಶಕಗಳಷ್ಟು ಹಳೆಯದಾಗಿದ್ದ ನಗರಸಭೆ ಕಚೇರಿ ಕಟ್ಟಡ ಧ್ವಂಸಗೊಳಿಸಿ, ಅದೇ ಸ್ಥಳದಲ್ಲಿ 5 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಅತ್ಯಾಧುನಿಕ ಹಾಗೂ ಸುಸಜ್ಜಿತ ನಗರಸಭೆಯ ನೂತನ ಕಟ್ಟಡದಲ್ಲಿ ನಡೆಯುತ್ತಿರುವ ಮೊದಲ ಸಭೆ ಇದಾಗಿದೆ.

ಶಿಕ್ಷಣ ಸಂಸ್ಥೆಗಳು, ಕಲ್ಯಾಣ ಮಂಟಪಗಳು ಹಾಗೂ ನಗರದ ನಾಗರಿಕರು ಸೇರಿದಂತೆ ವಿವಿಧ ರೀತಿಯ ಆಸ್ತಿಗಳಿಂದ ನಗರಸಭೆಗೆ ಬಾಕಿಯಿರುವ ಕೋಟ್ಯಂತರ ರುಪಾಯಿಗಳ ತೆರಿಗೆ ಸಂಗ್ರಹ, ಸ್ವಚ್ಛ ಕುಡಿಯುವ ನೀರು ಸರಬರಾಜು, ಚರಂಡಿ ಸ್ವಚ್ಛತೆ, ಕಡತ ವಿಲೇವಾರಿಯಂತಹ ನೂರಾರು ಕೆಲಸಗಳು ಬಾಕಿ ಬಗ್ಗೆ ನಗರಸಭೆಯ ಚರ್ಚೆಯ ವಿಷಯವಾಗಲಿದೆ.

ಇನ್ನೂ ವಿವಿಧೆಡೆಯಿಂದ ಬಾಕಿಯಿರುವ ಸುಮಾರು 8 ಕೋಟಿ ರು.ಗಳಿಗೂ ಹೆಚ್ಚು ತೆರಿಗೆ ಸಂಗ್ರಹ ಹಾಗೂ ಈ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಬೇಕೆಂಬ ಸದುದ್ದೇಶ ಹೊಂದಿರುವ ನಗರಸಭೆಯ ತೆರಿಗೆ ಅಭಿಯಾನ ಇನ್ನೂ ನಡೆಯುತ್ತಿದೆ.

ರಸ್ತೆ ದುರಸ್ತಿ: ನಗರಸಭೆ ಮಹತ್ಕಾರ್ಯ:

ಕ್ಲಿಷ್ಟಕರ ಸನ್ನಿವೇಶದಲ್ಲಿ ಆಗಷ್ಟೇ ಅಧಿಕಾರ ಸ್ವೀಕರಿಸಿದ್ದ ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಮತ್ತವರ ತಂಡಕ್ಕೆ ಇದು ಮೊಟ್ಟ ಮೊದಲ ಸವಾಲಿನ ಕೆಲಸವಾಗಿತ್ತು. ನಾಗರಿಕರ ಕಷ್ಟನಷ್ಟಗಳಿಗೆ ಸ್ಪಂದಿಸುವ ಮೂಲಕ ಜನಮಾನಸದಲ್ಲಿ ಹತ್ತಿರವಾಗಿದ್ದ ಲಲಿತಾ ಅನಪುರ, ತೆರಿಗೆ ಸಂಗ್ರಹ ಅಭಿಯಾನದ ಮೂಲಕ ಸಂಗ್ರಹಿಸಿದ ಹಣವನ್ನು ಇದಕ್ಕೆಂದೇ ಮೀಸಲಿಟ್ಟರು. ಆರೇಳು ದಿನಗಳಲ್ಲಿ ಮಾರಣಾಂತಿಕವಾಗಿ ಪರಿಣಮಿಸಿದ್ದ ತೆಗ್ಗುಗುಂಡಿಗಳ ಮುಚ್ಚಿದರು.

ನಗರಸಭೆಯಿಂದ ತೆರಿಗೆ ಸಂಗ್ರಹ ಅಭಿಯಾನ ಹಾಗೂ ಸಂಗ್ರಹವಾಗಿದ್ದ ಹಣವನ್ನು ರಸ್ತೆ ದುರಸ್ತಿ ಕಾರ್ಯಕ್ಕೆ ಬಳಸಿಕೊಂಡ ಪರಿ ಮೆಚ್ಚುಗೆಗೆ ಪಾತ್ರವಾಗಿತ್ತು. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ನಗರಸಭೆ ದುರಸ್ತಿ ಮಾಡಿದ್ದ ರಸ್ತೆಗಳನ್ನೇ ತಾವು ಮಾಡಿದ್ದೇವೆಂದು ಯಾವುದೋ ರಸ್ತೆಗೆ ಇನ್ನಾವುದೋ ಫೋಟೋ ಅಂಟಿಸಿ, ಸಿಎಂ ಕಚೇರಿಯಿಂದ ಬೆನ್ನು ತಟ್ಟಿಸಿಕೊಳ್ಳುವ ಯತ್ನವೂ ವ್ಯಾಪಕ ಟೀಕೆಗೊಳಗಾಗಿತ್ತು.

ಶಿಕ್ಷಣ ಸಂಸ್ಥೆಗಳತ್ತ ತೆರಿಗೆ ಹಣ ಕೇಳಲು ಹಾಗೂ ಅನಧಿಕೃತ ಕಟ್ಟಡ ನಿರ್ಮಾಣದ ಕುರಿತು ಕೇಳಲು ಹೋದ ನಗರಸಭೆ ಅಧ್ಯಕ್ಷೆ ಸೇರಿದಂತೆ ಎಲ್ಲರನ್ನೂ ಒಂದು ರೀತಿ ‘ವಿಲನ್‌’ಗಳಂತೆ ಬಿಂಬಿಸಿ, ಸುಖಾಸುಮ್ಮನೇ ಪೀಡಿಸುತ್ತಿದ್ದಾರೆಂದು ಸಾಮಾಜಿಕ ಜಾಲತಾಣಗಳಲ್ಲಿ ಗೋಳಿಟ್ಟಿದ್ದ ಕೆಲವು ಸಂಸ್ಥೆಗಳ ಮಾಲೀಕರು, ನಂತರದಲ್ಲಿ ತಮ್ಮ ತಪ್ಪುಗಳ ಅರಿವಾದೊಡನೆ ತೆರಿಗೆ ಸಂಗ್ರಹಕ್ಕೆ ಮುಂದಾಗಿವೆ.

₹10 ಕೋಟಿಗೂ ಹೆಚ್ಚು ತೆರಿಗೆ ಬಾಕಿ

ಒಂದು ಅಂದಾಜಿನ ಪ್ರಕಾರ, ಯಾದಗಿರಿ ನಗರಸಭೆಗೆ ಶಿಕ್ಷಣ ಸಂಸ್ಥೆಗಳು, ಕಲ್ಯಾಣ ಮಂಟಪಗಳು, ವಿವಿಧ ವಾಣಿಜ್ಯ ಮಳಿಗೆಗಳಿಂದ ಸುಮಾರು 10 ಕೋಟಿ ರು.ಗಳಿಗೂ ಹೆಚ್ಚಿನ ತೆರಿಗೆ ಬಾಕಿ ಬರಬೇಕಿದೆ. ಈ ಆರು ತಿಂಗಳಲ್ಲಿ ಸಂಗ್ರಹವಾಗಿದ್ದ ಸುಮಾರು ಐದು ಕೋಟಿ ರು.ಗಳಷ್ಟು ತೆರಿಗೆ ಹಣವನ್ನು ರಸ್ತೆ ದುರಸ್ತಿ, ಉದ್ಯಾನವನಗಳ ಅಭಿವೃದ್ಧಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಲಾಗಿದ. 14.15 ಲಕ್ಷ ರು.ಗಳಷ್ಟು ಹಣವನ್ನು ಗ್ರಂಥಾಲಯ ಕರ, ಆರೋಗ್ಯ ಕರ 35.39 ಲಕ್ಷ ರು.ಗಳ ನೀಡಲಾಗಿದೆ, 4.71 ಲಕ್ಷ ರು.ಗಳ ಟ್ರಾನ್ಸಪೋರ್ಟೇಶನ್‌ ಸೆಸ್‌ ಭರಿಸಲಾಗಿದೆ. 2122 ಖಾತಾ ನೀಡಲಾಗಿದೆ.

ಒಂದೇ ದಿನದಲ್ಲಿ 113 ಕಡತ ಯಜ್ಞ!

ಯಾದಗಿರಿ ನಗರಸಭೆ ಕಚೇರಿಯಲ್ಲಿ ಬಾಕಿಯುಳಿದಿದ್ದ ವಿವಿಧ ಕಡತಗಳನ್ನು ತ್ವರಿತ ವಿಲೇವಾರಿಗೆ ಫಾಸ್ಟ್ ಟ್ರ್ಯಾಕ್‌ ಅನುಸರಿಸುತ್ತಿರುವ ನಗರಸಭೆ ಅಧಿಕಾರಿಗಳು ಒಂದೇ ದಿನದಲ್ಲಿ 113 ಕಡತಗಳ ವಿಲೇವಾರಿ ಮುಗಿಸಿ, ದಶಕಗಳಿಂದ ಪರದಾಡುತ್ತಿದ್ದ ಜನರ ನೋವಿಗೆ ಸ್ಪಂದಿಸಿದ್ದಾರೆ. ರಾಜ್ಯ ಸರ್ಕಾರದ ಜನಸ್ಪಂದನ ರೀತಿಯಲ್ಲಿ ನಗರಸಭೆಯಲ್ಲೂ ಜನಸ್ಪಂದನ ಮೆಚ್ಚುಗೆಗೆ ಪಾತ್ರವಾಗಿದೆ.

ಜನರು ಆಸ್ತಿ ತೆರಿಗೆ ಭರಿಸಿದರೆ ನಗರದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಕೋಟ್ಯಂತರ ರುಪಾಯಿಗಳ ಬಾಕಿಯುಳಿಸಿಕೊಂಡರೆ ಅಭಿವೃದ್ಧಿ ನಿರೀಕ್ಷಿಸುವುದಾದರೂ ಹೇಗೆ. ಜನರು ನಗರಸಭೆ ಜೊತೆ ಸಹಕರಿಸಬೇಕು.

ಲಲಿತಾ ಅನಪೂರ, ಅಧ್ಯಕ್ಷೆ, ಯಾದಗಿರಿ ನಗರಸಭೆ

ಸಾಮಾನ್ಯ ಸಭೆಯಲ್ಲಿ ಯಾದಗಿರಿ ನಗರದ ಅಭಿವೃದ್ಧಿ ಕುರಿತ ಚರ್ಚೆಗಳು ನಡೆಯಲಿವೆ. ಈ ಸಾಲಿನಲ್ಲಿ ಯಾವ ರೀತಿ ಸಂಗ್ರಹ, ಖರ್ಚು ಹಾಗೂ ಅನುದಾನ ಬಳಕೆ ಕುರಿತು ಗಂಭೀರ ವಿಷಯಗಳು ಮಂಡನೆಯಾಗಲಿವೆ.

ಉಮೇಶ ಚವ್ಹಾಣ್‌, ಪೌರಾಯುಕ್ತ. ಯಾದಗಿರಿ ನಗರಸಭೆ.