ಕೆರೆ ಏರಿಗೆ ತಡೆಗೋಡೆ ನಿರ್ಮಿಸಿ ಅಪಘಾತ ತಪ್ಪಿಸಲಿ

| Published : Dec 05 2024, 12:30 AM IST

ಸಾರಾಂಶ

ತಾಲೂಕಿನಲ್ಲಿ ಸುಮಾರು ೫೨೧ಕ್ಕೂ ಹೆಚ್ಚು ಕೆರೆಗಳಿವೆ, ಆದರೆ ನಿರ್ವಹಣೆ ಕೊರತೆಯಿಂದ ಅಪಾಯಕಾರಿ ಸ್ಥಳವಾಗಿ ಪರಿಣಮಿಸಿವೆ. ಸರ್ಕಾರ ತನ್ನ ಆಯವ್ಯಯದಲ್ಲಿ ಕೆರೆಗಳ ಜೀರ್ಣೋದ್ದಾರಕ್ಕೆಂದು ಕೋಟ್ಯಂತರ ಹಣ ಮೀಸಲಿಡುತ್ತಿದೆ. ಆದರೆ ಜೀರ್ಣೋದ್ದಾರವೂ ಇಲ್ಲ ಒತ್ತುವರಿ ತೆರವೂ ಇಲ್ಲ ಎನ್ನುವಂತಾಗಿದೆ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಕೆರೆಗಳ ತವರೂರಲ್ಲಿ ಕೆರೆಗಳಿಗೆ ಹಾಗೂ ಕೆರೆ ಮೇಲೆ ಸಂಚರಿಸುವ ವಾಹನ ಸವಾರರಿಗೆ ರಕ್ಷಣೆಯಿಲ್ಲದಂತಾಗಿದೆ. ಕೆರೆ ಏರಿಗಳು ನಿತ್ಯ ಮೃತ್ಯಕೂಪವಾಗಿ ಪರಿಣಮಿಸಿದರೂ ಸರ್ಕಾರ ಮಾತ್ರ ಮುನ್ನೆಚ್ಚರಿಕೆ ವಹಿಸುತ್ತಿಲ್ಲ, ಅನಾಹುತ ಸಂಭವಿಸಿದ ನಂತರವೇ ಕ್ರಮ ಕೈಗೊಳ್ಳುವ ಸಂಪ್ರದಾಯಕ್ಕೆ ತಾಲೂಕು ಆಡಳಿತ ಬದ್ಧವಾಗಿರುವಂತಿದೆ.ತಾಲೂಕಿನಲ್ಲಿ ಸುಮಾರು ೫೨೧ಕ್ಕೂ ಹೆಚ್ಚು ಕೆರೆಗಳಿವೆ, ಆದರೆ ನಿರ್ವಹಣೆ ಕೊರತೆಯಿಂದ ಅಪಾಯಕಾರಿ ಸ್ಥಳವಾಗಿ ಪರಿಣಮಿಸಿವೆ. ಸರ್ಕಾರ ತನ್ನ ಆಯವ್ಯಯದಲ್ಲಿ ಕೆರೆಗಳ ಜೀರ್ಣೋದ್ದಾರಕ್ಕೆಂದು ಕೋಟ್ಯಂತರ ಹಣ ಮೀಸಲಿಡುತ್ತಿದೆ. ಆದರೆ ಜೀರ್ಣೋದ್ದಾರವೂ ಇಲ್ಲ ಒತ್ತುವರಿ ತೆರವೂ ಇಲ್ಲ ಎನ್ನುವಂತಾಗಿದೆ.

ಕೆರೆ ಏರಿಗೆ ತಡೆಗೋಡೆ ಇಲ್ಲ

ಏರಿಗಳ ಮೇಲೆ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ.ಆದರೆ ಕೆರೆ ಏರಿಗಳ ಮೇಲೆ ತಡೆಗೋಡೆ ನಿರ್ಮಾಣ ಮಾಡದೆ ಕಡೆಗಣಿಸಿರುವುದರಿಂದ ಅಪಘಾತಕ್ಕೆ ಆಹ್ವಾನ ನೀಡಿದಂತಿದೆ. ಪೊಲೀಸ್ ಇಲಾಖೆ ಪ್ರತಿ ವರ್ಷ ರಸ್ತೆ ಸುರಕ್ಷತಾ ಸಪ್ತಾಹ ಆಂದೋಲನ ಕಾರ‍್ಯಕ್ರಮ ನಡೆಸಿ ವಾಹನ ಸವಾರರಲ್ಲಿ ರಸ್ತೆಯಲ್ಲಿ ಹೇಗೆ ವಾಹನ ಚಲಾಯಿಸಬೇಕೆಂದು ಜಾಗೃತಿ ಮೂಡಿಸುತ್ತದೆ. ಆದರೆ ರಸ್ತೆ ಬದಿಗಳಲ್ಲಿ ಹಾಗೂ ಕೆರೆಗಳ ಏರಿಗಳ ಮೇಲೆ ವಾಹನಗಳಿಗೆ ಸುರಕ್ಷತೆ ಇಲ್ಲ ಮತ್ತು ಅಪಾಯದ ಬಗ್ಗೆ ಸೂಚನಾ ಫಲಕಗಳೂ ಸಹ ಅಳವಡಿಸಿಲ್ಲ.

ತಾಲೂಕಿನಲ್ಲಿರುವ ಬಹುತೇಕ ಕೆರೆಗಳಿಗೆ ತಡೆಗೋಡೆ ನಿರ್ಮಿಸಿಲ್ಲ. ಇಂತಹ ಕೆರೆಗಳ ಏರಿಗಳ ಮೇಲೆ ಸಂಚರಿಸುವ ವಾಹನಗಳು ಒಂದಲ್ಲಾ ಒಂದು ರೀತಿ ಅವಘಡಕ್ಕೆ ಸಿಲುಕುವಂತಾಗಿದೆ. ತಾಲೂಕಿನ ದೋಣಿಮಡಗು ಗ್ರಾಪಂ ವ್ಯಾಪ್ತಿಯ ಮುಷ್ಟ್ರಹಳ್ಳಿ ಕೆರೆ ಆಂಧ್ರದ ಕುಪ್ಪಂ ತಾಲೂಕಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಈ ಕೆರೆ ಮೇಲೆಯೇ ನೂರಾರು ವಾಹನಗಳು ಹಾದು ಹೋಗಬೇಕು, ಆದರೆ ಇಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ ಎಂಬುದು ವಾಹನ ಚಾಲಕರ ಆರೋಪ.ಎಚ್ಚರಿಕೆಯ ಫಲಕಗಳೂ ಇಲ್ಲ

ರಸ್ತೆಗಳಲ್ಲಿ ಅಪಘಾತ ವಲಯಗಳನ್ನು ಗುರುತಿಸಿ ಎಚ್ಚರಿಕೆಯ ಫಲಕ ಹಾಕಿ ವಾಹನ ಸವಾರರಿಗೆ ಸೂಚನೆ ನೀಡುವ ವ್ಯವಸ್ಥೆ ಮಾಡಿರುತ್ತಾರೆ, ಆದರೆ ಕೆರೆಗಳ ಏರಿ ಮೇಲೆ ತಡೆಗೋಡೆ ಇಲ್ಲದಿದ್ದರೂ ಸಹ ಎಚ್ಚರಿಕೆಯ ಸೂಚನಾ ಫಲಕ ಹಾಕುತ್ತಿಲ್ಲ, ಇದರಿಂದಾಗಿ ವಾಹನ ಚಾಲಕರು ಅಪಾಯದ ಅರವಿಲ್ಲದೆ ಅಪಘಾತಕ್ಕೀಡಾಗುತ್ತಿದ್ದಾರೆ. ಇಂತಹ ಸ್ಥಿತಿಯ ಕೆರೆಗಳು ತಾಲೂಕಿನಲ್ಲಿ ಅನೇಕ ಕಡೆ ಇವೆ.

ಅಲ್ಲದೆ ಮುಷ್ಟ್ರಹಳ್ಳಿ ಕೆರೆ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ, ಇಲ್ಲಿಗೆ ಆಂಧ್ರ ಮತ್ತು ಕೋಲಾರ ಜಿಲ್ಲೆಯವರು ಶನಿವಾರ ಮತ್ತು ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ ಕೆರೆಯ ಸುತ್ತಲೂ ತಡೆಗೋಡೆ ಇಲ್ಲ. ಸರ್ಕಾರ ಇನ್ನಾದರೂ ಮುನ್ನೆಚ್ಚರಿಕೆವಹಿಸಿ ತಾಲೂಕಿನ ಎಲ್ಲ ಕೆರೆಗಳ ಏರಿಗಳಿಗೆ ತಡೆಗೋಡೆ ನಿರ್ಮಾಣ ಮಾಡಿ ಜನರ ಪ್ರಾಣ ಉಳಿಸಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.