ಮನೆಯ ಚಾವಣಿ, ಖಾಲಿ ಜಾಗ ಅಥವಾ ಗ್ರೋ ಬ್ಯಾಗ್‌ಗಳಲ್ಲಿ ಸುಲಭವಾಗಿ ತರಕಾರಿ ಹಾಗೂ ಸೊಪ್ಪುಗಳನ್ನು ಬೆಳೆಸಬಹುದು.
ಗದಗ: ಇಂದಿನ ಜೀವನಶೈಲಿಯಲ್ಲಿ ಮಾನಸಿಕ ಒತ್ತಡ, ಆರೋಗ್ಯ ಸಮಸ್ಯೆಗಳು ಹಾಗೂ ವಿಷಕಾರಿ ಆಹಾರದ ಬಳಕೆ ಹೆಚ್ಚುತ್ತಿರುವ ಹಿನ್ನೆಲೆ ಪ್ರತಿಯೊಬ್ಬರೂ ತಮ್ಮ ಮನೆಯ ಪ್ರಾಂಗಣದಲ್ಲಿ ಕೈತೋಟ ನಿರ್ಮಿಸಿ ವಿಷಮುಕ್ತ ತರಕಾರಿ ಮತ್ತು ಸೊಪ್ಪುಗಳನ್ನು ಬೆಳೆಸಿಕೊಳ್ಳಬೇಕು ಎಂದು ಬಾಗಲಕೋಟೆಯ ತೋಟಗಾರಿಕಾ ಮಹಾವಿದ್ಯಾಲಯದ ಮುಖ್ಯ ಪ್ರಾಧ್ಯಾಪಕ ಡಾ. ಸತೀಶ ಆರ್. ಪಾಟೀಲ ತಿಳಿಸಿದರು.ನಗರದ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಮಹಿಳಾ ಘಟಕ ಹಾಗೂ ಅಕ್ಕನ ಬಳಗದ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಮನೆಯ ಪ್ರಾಂಗಣದಲ್ಲಿ ಕೈತೋಟ ನಿರ್ಮಾಣ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಮಾರುಕಟ್ಟೆಯಲ್ಲಿ ದೊರೆಯುವ ಅನೇಕ ತರಕಾರಿ, ಸೊಪ್ಪು ಮತ್ತು ಹಣ್ಣುಗಳಲ್ಲಿ ಅಧಿಕ ಪ್ರಮಾಣದ ಕೀಟನಾಶಕ ಹಾಗೂ ರಾಸಾಯನಿಕಗಳ ಬಳಕೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂದರು.ಮನೆಯ ಚಾವಣಿ, ಖಾಲಿ ಜಾಗ ಅಥವಾ ಗ್ರೋ ಬ್ಯಾಗ್‌ಗಳಲ್ಲಿ ಸುಲಭವಾಗಿ ತರಕಾರಿ ಹಾಗೂ ಸೊಪ್ಪುಗಳನ್ನು ಬೆಳೆಸಬಹುದು. ಬೇವಿನ ಎಣ್ಣೆ, ಮೆಣಸಿನಕಾಯಿ- ಬೆಳ್ಳುಳ್ಳಿ ಕಷಾಯ ಮತ್ತು ಜೈವಿಕ ಕೀಟನಾಶಕಗಳ ಬಳಕೆಯಿಂದ ರಾಸಾಯನಿಕ ಕೀಟನಾಶಕಗಳ ಅವಲಂಬನೆಯನ್ನು ಕಡಿಮೆ ಮಾಡಬಹುದು ಎಂದರು.
ಬಾಗಲಕೋಟೆಯ ತೋಟಗಾರಿಕಾ ಮಹಾವಿದ್ಯಾಲಯದ ತರಕಾರಿ ವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ಎಚ್.ಪಿ. ಹಾದಿಮನಿ ಮಾತನಾಡಿ, ಸೀಸನ್‌ಗೆ ಅನುಗುಣವಾಗಿ ಬೆಂಡೆಕಾಯಿ, ಪಾಲಕ್, ಮೆಂತೆ, ಕೊತ್ತಂಬರಿ ಮುಂತಾದ ತರಕಾರಿಗಳನ್ನು ಮನೆಯಲ್ಲೇ ಬೆಳೆಸಿಕೊಂಡರೆ ಕುಟುಂಬದ ಆಹಾರ ಭದ್ರತೆ ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದರು.ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಶರಣಬಸಪ್ಪ ಗುಡಿಮನಿ, ಗೌರವ ಕಾರ್ಯದರ್ಶಿ ಚನ್ನವೀರಪ್ಪ ಹುಣಸಿಕಟ್ಟಿ, ಅಕ್ಕನ ಬಳಗದ ಟ್ರಸ್ಟಿ ಅಧ್ಯಕ್ಷೆ ಕಸ್ತೂರಿ ಹಿರೇಗೌಡ್ರ ಹಾಗೂ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ದಾನಪ್ಪಗೌಡರ ಮಾತನಾಡಿದರು.ಗುರುನಾಥ ಓದುಗೌಡ್ರ, ಉಮೇಶ ಹುಬ್ಬಳ್ಳಿ, ಸುಜಾತಾ ಗುಡಿಮನಿ, ಪಾರ್ವತಿ ಶಾಬಾದಿಮಠ, ಸುಧಾ ಹುಣಸಿಕಟ್ಟಿ, ಶಿಲ್ಪಾ ವೀರಲಿಂಗಯ್ಯನಮಠ, ರೇಣುಕಾ ಅಮಾತ್ಯ, ಶಿವಲೀಲಾ ಹಿರೇಮಠ ಸೇರಿದಂತೆ ಅಕ್ಕನ ಬಳಗದ ಸದಸ್ಯರು, ಟ್ರಸ್ಟಿಗಳು, ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಮಹಿಳಾ ಘಟಕದ ಪದಾಧಿಕಾರಿಗಳು ಇದ್ದರು.ಅಕ್ಕನ ಬಳಗದ ಅಧ್ಯಕ್ಷೆ ಜಯಶ್ರೀ ಹುಬ್ಬಳ್ಳಿ ಸ್ವಾಗತಿಸಿದರು. ಕಾರ್ಯದರ್ಶಿ ಜಯಶ್ರೀ ಪಾಟೀಲ ನಿರೂಪಿಸಿದರು. ಪೂರ್ಣಿಮಾ ಆಟದ ವಂದಿಸಿದರು.