ಸೋಲು, ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡಾಸ್ಪೂರ್ತಿಯಿಂದ ಮುನ್ನಡೆಯುವಂತೆ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು
ಗದಗ: ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಕ್ರೀಡೆ ಅತ್ಯಂತ ಅಗತ್ಯವಾಗಿದ್ದು, ಕ್ರೀಡೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ಶಿಸ್ತು, ಸಹನೆ ಹಾಗೂ ನಾಯಕತ್ವದ ಗುಣಗಳು ಬೆಳೆಯುತ್ತವೆ. ಕ್ರೀಡಾ ಸಾಧನೆಯಿಂದ ಉಜ್ವಲ ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂದು ಕೆ.ಎಲ್.ಇ. ಪ್ರಾಥಮಿಕ ಶಾಲೆಯ ಪ್ರಾಚಾರ್ಯೆ ಕಲ್ಪನಾ ಕಿಚಡಿ ಹೇಳಿದರು.
ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಶಹರ ವಲಯ ಹಾಗೂ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಸಂಯುಕ್ತ ಆಶ್ರಯದಲ್ಲಿ ಗದಗ ನಗರದ ಜೆ.ಟಿ. ಕಾಲೇಜು ಮೈದಾನದಲ್ಲಿ ಶನಿವಾರ ಆಯೋಜಿಸಲಾಗಿದ್ದ 2026-27ನೇ ಸಾಲಿನ 14 ಮತ್ತು 17 ವರ್ಷದೊಳಗಿನ ಬಾಲಕ, ಬಾಲಕಿಯರ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸೋಲು, ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡಾಸ್ಪೂರ್ತಿಯಿಂದ ಮುನ್ನಡೆಯುವಂತೆ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕ್ರೀಡಾಜ್ಯೋತಿ ಸ್ವೀಕರಿಸಿ ಮಾತನಾಡಿದ ಎಸ್.ಕೆ. ಮಂಗಳಗುಡ್ಡ, ಕ್ರೀಡಾಪಟುಗಳು ದುಶ್ಚಟಗಳಿಂದ ದೂರವಿದ್ದು ನಿರಂತರ ಪರಿಶ್ರಮದ ಮೂಲಕ ತಾಲೂಕು ಮಟ್ಟದಿಂದ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮಿಂಚಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಪಿ. ಪ್ರಭಯ್ಯನಮಠ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಶಾಲಾ ಹಂತದ ಕ್ರೀಡಾಕೂಟಗಳು ಉತ್ತಮ ವೇದಿಕೆಯಾಗಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಮುಖ್ಯ ಅತಿಥಿಗಳಾಗಿ ಜೆ.ಬಿ. ಅಣ್ಣಿಗೇರಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಲ್.ಬಿ. ಹುಡೇದ, ರವಿ ಕೋಟಿ, ಐ.ಬಿ. ಮಡಿವಾಳರ, ಎಸ್.ಆರ್. ಕಿನ್ನಾಳ, ಎಲ್.ಕೆ. ಚೌಕಿಮಠ, ಕೆ.ಎಸ್. ಕೊಪ್ಪಳ, ಎಸ್.ಎಂ. ಉಮ್ಮಣ್ಣವರ, ಎಸ್.ಸಿ. ಹಿರೇಮಠ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು ಹಾಗೂ ಕ್ರೀಡಾಪಟುಗಳು ಉಪಸ್ಥಿತರಿದ್ದರು. ಎಸ್.ಬಿ. ಮುಳಗುಂದ ಪ್ರತಿಜ್ಞಾವಿಧಿ ಬೋಧಿಸಿದರು. ಎಲ್.ಬಿ. ಹುಡೇದ ಸ್ವಾಗತಿಸಿದರು, ಜೆ.ಬಿ. ಅಣ್ಣಿಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಎಸ್. ಕುಚಬಾಳ ನಿರೂಪಿಸಿದರು. ಎಸ್.ಎಂ. ಬುರಡಿ ವಂದಿಸಿದರು.