ಬಳ್ಳಾರಿ: ಬಳ್ಳಾರಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುತ್ತೀರೋ ಇಲ್ಲವೋ ಸ್ಪಷ್ಟಪಡಿಸಿ. ಇಲ್ಲವಾದಲ್ಲಿ ಅರ್ಸೆಲ್ಲರ್ ಮಿತ್ತಲ್, ವಿಮಾನ ನಿಲ್ದಾಣಕ್ಕಾಗಿ ಸ್ವಾಧೀನಕ್ಕೆ ಪಡೆದಿರುವ ಭೂಮಿಯನ್ನು ರೈತರಿಗೆ ಹಿಂದಿರುಗಿಸಿ ಎಂದು ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಆಗ್ರಹಿಸಿದ್ದಾರೆ.

ವಿಧಾನಪರಿಷತ್ತಿನ ಬಜೆಟ್ ಅಧಿವೇಶದಲ್ಲಿ ಮಂಗಳವಾರ, ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಭೂ ಸ್ವಾಧೀನ ಮಾಡಿಕೊಂಡಿರುವ ವಿಷಯ ಪ್ರಸ್ತಾಪಿಸಿ, ಅಧಿಕಾರಿಗಳು ರಸ್ತೆಗೆ ಭೂಮಿ ಸ್ವಾಧೀನ ಮಾಡಿಕೊಂಡಿಲ್ಲ. ಅಧಿಕಾರಿಗಳು ಮತ್ತು ಸರ್ಕಾರದ ಮಧ್ಯೆ ಯಾವ ರೀತಿಯಲ್ಲಿ ಕೆಲಸ ನಡೆಯುತ್ತಿದೆ ಎನ್ನಲು ಇದು ಉತ್ತಮವಾದ ಸಾಕ್ಷಿ. ರಸ್ತೆ ಇಲ್ಲದೇ ವಿಮಾನ ನಿಲ್ದಾಣಕ್ಕಾಗಿ ಭೂ ಸ್ವಾಧೀನ ಮಾಡಿಕೊಂಡ ಅಧಿಕಾರಿಗೆ ಗೌರವ ಸನ್ಮಾನ ಮಾಡಬೇಕು ಎಂದು ವ್ಯಂಗ್ಯವಾಡಿದರು.

ಇದಕ್ಕೆ ಉತ್ತರಿಸಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು, ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳಿಂದಲೂ ವಿಮಾನ ನಿಲ್ದಾಣಕ್ಕಾಗಿ ಬೇಡಿಕೆ ಬಂದಿದೆ. ಕಾರಣ ಮುಖ್ಯಮಂತ್ರಿ ನೇತೃತ್ವದಲ್ಲಿ ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಯ ಜನಪ್ರತಿನಿಧಿಗಳ ಸಭೆಯನ್ನು ಶೀಘ್ರದಲ್ಲೇ ಏರ್ಪಡಿಸಿ, ವಿಮಾನ ನಿಲ್ದಾಣವನ್ನು ಎಲ್ಲಿ ನಿರ್ಮಾಣ ಮಾಡಲಾಗುತ್ತದೆ ಎನ್ನುವ ಸ್ಪಷ್ಟ ನಿರ್ಧಾರವನ್ನು ಕೈಗೊಳ್ಳಲಾಗುತ್ತದೆ. ಆನಂತರವೇ, ಬಳ್ಳಾರಿಯಲ್ಲಿ ವಿಮಾನ ನಿಲ್ದಾಣ ಪ್ರಾರಂಭಿಸುವ ಕುರಿತು ಸ್ಪಷ್ಟವಾಗಿ ಹೇಳಲು ಸಾಧ್ಯ ಎಂದರು.

ಬಳ್ಳಾರಿಯಲ್ಲಿ ಪಿಪಿಪಿ ಮಾದರಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಮಾರ್ಗ್ ಶ್ರೀ ಕೃಷ್ಣದೇವರಾಯ ಏರ್‍ಪೋರ್ಟ್ ಪ್ರೈವೇಟ್ ಲಿಮಿಟೆಡ್‍ಗೆ 2010ರ ಆಗಸ್ಟ್ 3ರಲ್ಲಿ ಲೆಟರ್ ಆಫ್ ಅವಾರ್ಡ್ (ಕಾಮಗಾರಿ ಪ್ರಾರಂಭಿಸಲು) ಪತ್ರ ನೀಡಲಾಗಿತ್ತು. 2010ರ ಆ. 6ರಂದು ಯೋಜನಾ ಅಭಿವೃದ್ಧಿ ಒಪ್ಪಂದಕ್ಕಾಗಿ ಸರ್ಕಾರ ಮತ್ತು ಕಂಪನಿ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಆದರೆ, ಕಂಪನಿ ಕಾಮಗಾರಿ ಪ್ರಾರಂಭಿಸದ ಕಾರಣ ಭೂಮಿಯನ್ನು ಕಂಪನಿಗೆ ಹಸ್ತಾಂತರ ಮಾಡದೇ, ಒಪ್ಪಂದ ರದ್ದು ಮಾಡಲಾಯಿತು ಎಂದು ಸಚಿವರು ಉತ್ತರಿಸಿದರಲ್ಲದೆ,

ಬಳ್ಳಾರಿ ವಿಮಾನ ನಿಲ್ದಾಣವನ್ನು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತದ ಮೂಲಕ ನಿರ್ಮಾಣ ಮಾಡಲು ಡಿಪಿಆರ್ ಸಿದ್ಧಪಡಿಸಲು ಸಮಾಲೋಚಕರನ್ನು ನೇಮಕ ಮಾಡುವ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ತಿಳಿಸಿದರು.


ಸ್ವಾಧೀನ ಮಾಡಿಕೊಂಡಿರುವ ಭೂಮಿಗೆ ಪರಿಹಾರ ನೀಡಿರುವ ಕಾರಣ ಆ ಭೂಮಿಯನ್ನು ರೈತರಿಗೆ ಹಿಂದಿರುಗಿಸಲು ಸಾಧ್ಯವಿಲ್ಲ. ಬಳ್ಳಾರಿ ವಿಮಾನ ನಿಲ್ದಾಣದ ರಸ್ತೆಗೆ ಅಗತ್ಯವಾಗಿರುವ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲಾಗುತ್ತದೆ. ಬೇರೆ ಉದ್ದೇಶಗಳಿಗೆ ಭೂಮಿಯನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ಹೇಳಿದರು.