ಉತ್ತಮ ಶಿಕ್ಷಣದ ಜತೆ ಚಾರಿತ್ರ್ಯ ರೂಪಿಸಿಕೊಳ್ಳಿ: ವಿನೋದ ರೆಡ್ಡಿ

| Published : Jul 22 2024, 01:16 AM IST

ಸಾರಾಂಶ

ವಿದ್ಯಾರ್ಥಿ ಜೀವನವು ಬದುಕಿನ ಅತ್ಯಂತ ಪ್ರಮುಖ ಕಾಲಘಟ್ಟ. ಈ ಗಳಿಗೆಯನ್ನು ಸದುಪಯೋಗ ಪಡಿಸಿಕೊಂಡವರು ಮಾತ್ರ ಬದುಕನ್ನು ಉತ್ತಮವಾಗಿ ರೂಪಿಸಲು ಸಾಧ್ಯ.

ಹಳಿಯಾಳ: ಉತ್ತಮ ಅಂಕಗಳನ್ನು ಪಡೆದು ಚಾರಿತ್ರ್ಯ ಹದಗೆಡಿಸಿಕೊಂಡರೆ ಪ್ರಯೋಜನವಿಲ್ಲ. ಅದಕ್ಕಾಗಿ ಕಾಲೇಜು ಜೀವನವನ್ನು ಮೋಜು- ಮಸ್ತಿಯಲ್ಲಿ ಕಳೆಯದೇ ಭವಿಷ್ಯವನ್ನು ಕಂಡುಕೊಳ್ಳಿ. ಪಾಲಕರ ಕನಸನ್ನು ಸಾಧಿಸಿ ಎಂದು ಹಳಿಯಾಳ ಪಿಎಸ್ಐ ವಿನೋದ ರೆಡ್ಡಿ ತಿಳಿಸಿದರು. ತಾಲೂಕಿನ ಹವಗಿ ಗ್ರಾಮದಲ್ಲಿರುವ ಸರ್ಕಾರಿ ಪ್ರಥಮದರ್ಜೆ ಮಹಾವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ವಿದ್ಯಾರ್ಥಿ ಜೀವನವು ಬದುಕಿನ ಅತ್ಯಂತ ಪ್ರಮುಖ ಕಾಲಘಟ್ಟ. ಈ ಗಳಿಗೆಯನ್ನು ಸದುಪಯೋಗ ಪಡಿಸಿಕೊಂಡವರು ಮಾತ್ರ ಬದುಕನ್ನು ಉತ್ತಮವಾಗಿ ರೂಪಿಸಲು ಸಾಧ್ಯ. ಶಿಕ್ಷಣ ಜತೆಗೆ ಉತ್ತಮ ಚಾರಿತ್ರ್ಯವನ್ನು ಮಾನವೀಯ ಬೆಳೆಸಿಕೊಳ್ಳಲು ಮೊದಲ ಆದ್ಯತೆಯನ್ನು ನೀಡಿ ಎಂದರು.

ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಚಂದ್ರಶೇಖರ್ ಲಮಾಣಿ ಮಾತನಾಡಿ, ವಿದ್ಯಾರ್ಥಿಗಳು ದೇಶದ ಆಸ್ತಿ. ಉತ್ತಮ ಪ್ರಜೆಗಳು ಸದೃಢ, ಬಲಿಷ್ಠವಾದ ದೇಶವನ್ನು ನಿರ್ಮಾಣ ಮಾಡಬಲ್ಲರು. ಅದಕ್ಕಾಗಿ ವಿದ್ಯಾರ್ಥಿಗಳು ಕುಟುಂಬದ, ಸಮಾಜದ ಹಾಗೂ ದೇಶದ ಆಸ್ತಿಯಾಗಿ ಬೆಳೆಯಬೇಕು ಎಂದರು. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ವಿಭಾಗದ ಸಂಚಾಲಕ ಡಾ. ಪರಮಾನಂದ ದಾಸರ, ಸಹ ಸಂಚಾಲಕರ ರಾಮಕೃಷ್ಣ ಗೌಡಾ, ಸಂಗೀತಾ ಕಟ್ಟಿಮನಿ, ಎನ್ಎಸ್ಎಸ್ ಅಧಿಕಾರಿ ಲಕ್ಷ್ಮಣ ಕಾಳೆ, ಗ್ರಂಥಪಾಲಕ ಮಂಜುನಾಥ ಲಮಾಣಿ, ಇತರರು ಇದ್ದರು. ಉಪನ್ಯಾಸಕಿ ಅನ್ನಪೂರ್ಣ ಪಾಟೀಲ ನಿರೂಪಿಸಿದರು.