ಕನ್ನಡಪ್ರಭ ವಾರ್ತೆ ಮಂಡ್ಯ

ವಿದ್ಯಾರ್ಥಿಗಳಲ್ಲಿ ಶಿಸ್ತು, ನಾಯಕತ್ವ ಮತ್ತು ಆತ್ಮವಿಶ್ವಾಸ ಬೆಳೆಸುವುದು ಪ್ರಸ್ತುತದಲ್ಲಿ ಅಗತ್ಯವಾಗಿದೆ ಎಂದು ವಕೀಲ ಎಂ.ಗುರುಪ್ರಸಾದ್ ಹೇಳಿದರು.

ಇಲ್ಲಿನ ಅಶೋಕನಗರದಲ್ಲಿ ನೂತನವಾಗಿ ಕೌಟಿಲ್ಯ ಗುರುಕುಲ ಅಕಾಡೆಮಿಗೆ ವಿಧ್ಯುಕ್ತ ಚಾಲನೆ ನೀಡಿ ಮಾತನಾಡಿ, ಇದು ಸ್ಪರ್ಧಾತ್ಮಕ ಯುಗ. ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಎದುರಿಸುವ ರೀತಿಯಲ್ಲಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕಿದೆ. ಕೇವಲ ಪಠ್ಯ ವಿಷಯಗಳನ್ನು ಕಲಿಸುವುದರಿಂದ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆ ಸಾಧ್ಯವಿಲ್ಲ ಎಂದು ನುಡಿದರು.

ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ವ್ಯಕ್ತಿತ್ವ ವಿಕಸನಗೊಳ್ಳುವಂತಹ ಶಿಕ್ಷಣವನ್ನು ಕಲಿಸಬೇಕಿದೆ. ಬಹುಮುಖ ಪ್ರತಿಭೆಗಳಾಗಿ ಮಕ್ಕಳು ಹೊರಹೊಮ್ಮಬೇಕು. ಕಲಿಕೆಯಲ್ಲಿ ಯಾರೂ ಹಿಂದುಳಿಯದೆ ಎಲ್ಲರೂ ಶಿಕ್ಷಣ ಕಲಿತು ದೇಶದ ಸತ್ಪ್ರಜೆಗಳಾಗಬೇಕು. ಆ ಮೂಲಕ ದೇಶಕ್ಕೆ, ನಾಡಿಗೆ ಕೊಡುಗೆಯನ್ನು ನೀಡುವಂತೆ ಸಲಹೆ ನೀಡಿದರು.

ರಾಮನಗರ ಡಯಟ್ ಉಪನ್ಯಾಸಕ ಕೆ.ಪಿ.ಬಾಬು ಮಾತನಾಡಿ, ನವಯುಗದ ಮಕ್ಕಳಲ್ಲಿ ಬೌದ್ಧಿಕ ಸಾಮರ್ಥ್ಯ, ಗ್ರಹಿಕೆ ಶಕ್ತಿ ಹೆಚ್ಚಿದೆ. ಅನೇಕ ವಿಷಯಗಳನ್ನು ಕರಗತ ಮಾಡಿಕೊಳ್ಳುವ ಕ್ರಿಯಾಶೀಲತೆ ಅವರಲ್ಲಿದೆ. ಶಿಸ್ತು ಮಕ್ಕಳಿಗೆ ಬಹಳ ಮುಖ್ಯ. ಶಿಸ್ತಿನ ಜೊತೆ ನಾಯಕತ್ವ ಗುಣ ಮತ್ತು ಆತ್ಮವಿಶ್ವಾಸವನ್ನು ಬೆಳೆಸುವುದೂ ಅವಶ್ಯವಾಗಿದೆ. ನವೋದಯ, ಸೈನಿಕ, ಕಿತ್ತೂರು, ಮೊರಾರ್ಜಿ, ಆದರ್ಶ, ಏಕಲವ್ಯದಂತಹ ಪ್ರತಿಷ್ಠಿತ ಶಾಲೆಗಳಿಗೆ ಪ್ರವೇಶ ಪಡೆಯುವುದಕ್ಕೆ ಪೂರಕ ತರಬೇತಿಯನ್ನು ಇಲ್ಲಿ ನೀಡುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ನುಡಿದರು.


ಮೆಮೋರಿ ಟೆಕ್ನಿಕ್, ಮನೋಂಜನೆ, ಆಟ, ಚಟುವಟಿಕೆಗಳ ಮೂಲಕ ಮಕ್ಕಳಿಗೆ ನಿಯಮಿತ ಪರೀಕ್ಷೆ, ವಿಶ್ಲೇಷಣೆ, ಮಾರ್ಗದರ್ಶನ ನೀಡಲಾಗುವುದು. ವ್ಯಕ್ತಿತ್ವ ವಿಕಸನಕ್ಕೆ ತರಬೇತಿ ಕೊಡುವುದರಿಂದ ಮಕ್ಕಳು ಪಿಯುಸಿ ಹಂತ ತಲುಪುವ ವೇಳೆಗೆ ಸರ್ವಾಂಗೀಣ ಬೆಳವಣಿಗೆಗೆ ಬೇಕಾದ ಅಂಶಗಳನ್ನು ಅವರಲ್ಲಿ ಮೂಡಿಸಲಾಗುವುದು ಎಂದರು.

ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳನ್ನು ಪಠ್ಯವಿಷಯಗಳಿಗಷ್ಟೇ ಸೀಮಿತಗೊಳಿಸಬಾರದು. ಪಠ್ಯೇತರ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವಂತಹ ಸಾಮರ್ಥ್ಯವನ್ನು ಬೆಳೆಸಬೇಕು. ವೇದಿಕೆಗಳಲ್ಲಿ ನಿಂತು ಭಾಷಣ ಮಾಡುವ, ಸ್ವತಂತ್ರವಾಗಿ ವ್ಯಕ್ತಿತ್ವವನ್ನು ಗಟ್ಟಿಗೊಳಿಸಿಕೊಳ್ಳುವ ಆತ್ಮಸ್ಥೈರ್ಯವನ್ನು ಅವರಲ್ಲಿ ಮೂಡಿಸಬೇಕು. ಭಯ, ಆತಂಕ, ಒತ್ತಡವಿಲ್ಲದೆ ಪರೀಕ್ಷೆಗಳನ್ನು ನಿಭೀತಿಯಿಂದ ಎದುರಿಸುವ ಗುಣವನ್ನು ಅವರಲ್ಲಿ ಬೆಳೆಸಿದಾಗ ಭವಿಷ್ಯವನ್ನು ಉಜ್ವಲಗೊಳಿಸಬಹುದು ಎಂದರು.

ಕೌಟಿಲ್ಯ ಗುರುಕುಲ ಅಕಾಡೆಮಿ ಅಧ್ಯಕ್ಷ ಸಿದ್ದನಗೌಡ ಬಿರಾದಾರ್, ಕಾರ್ಯದರ್ಶಿ ಪಾವನಾ ಎಸ್.ಬಿರಾದಾರ್, ಸಿ.ಎನ್.ಸಂತೋಷ್, ತಿಮ್ಮರಾಯಿಗೌಡ, ಪ್ರಗತಿ ಕೃಷ್ಣ ಇತರರಿದ್ದರು.