ಸಾರಾಂಶ
ವಿಶ್ವವಿಖ್ಯಾತ ಹಂಪಿ ವೀಕ್ಷಣೆಗಾಗಿ ದೇಶ-ವಿದೇಶಿ ಪ್ರವಾಸಿಗರು ನಿತ್ಯ ಸಹಸ್ರಾರು ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ.
ಹೊಸಪೇಟೆ: ಹಂಪಿ ಗ್ರಾಪಂನಲ್ಲಿ ಜಿಪಂ ಸಿಇಒ ಮೊಹಮ್ಮದ್ ಅಲಿ ಅಕ್ರಮ್ ಷಾ ಅಧ್ಯಕ್ಷತೆಯಲ್ಲಿ ಬುಧವಾರ ಸಾರ್ವಜನಿಕರ ಕುಂದು ಕೊರತೆ ಸಭೆ ನಡೆಯಿತು.
ಈ ವೇಳೆ ಸಿಇಒ ಮಾತನಾಡಿ, ವಿಶ್ವವಿಖ್ಯಾತ ಹಂಪಿ ವೀಕ್ಷಣೆಗಾಗಿ ದೇಶ-ವಿದೇಶಿ ಪ್ರವಾಸಿಗರು ನಿತ್ಯ ಸಹಸ್ರಾರು ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಈಗಾಗಲೇ ಗುರುತಿಸಿರುವ ಜಾಗದಲ್ಲಿ ಆದಷ್ಟು ಬೇಗನೆ ನೂತನ ಗ್ರಾಪಂ ಕಟ್ಟಡವನ್ನು ಹಂಪಿ ಶಿಲ್ಪಕಲಾ ಮಾದರಿಯೊಂದಿಗೆ ಪಾರಂಪರಿಕ ಶೈಲಿಯಲ್ಲಿ ನಿರ್ಮಿಸಬೇಕು ಎಂದು ಸಲಹೆ ನೀಡಿದರು.ಸಾರ್ವಜನಿಕರ ಅರ್ಜಿಗಳಿಗೆ ಅಧಿಕಾರಿಗಳು ಸಕಾಲಕ್ಕೆ ಸ್ಪಂದಿಸಿ ಸಮಸ್ಯೆಗೆ ಶೀಘ್ರವೇ ಪರಿಹಾರ ಒದಗಿಸಬೇಕು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ಭೀಮಪ್ಪ ಲಾಳಿ, ಗ್ರಾಪಂ ಅಧ್ಯಕ್ಷೆ ರಜನಿಗೌಡ, ಪಿಡಿಒ ಗಂಗಾಧರ ಮತ್ತಿತರರಿದ್ದರು.ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ ವ್ಯಾಪ್ತಿಯ ಹಳ್ಳಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಜಿಲ್ಲಾ ಪಂಚಾಯ್ತಿ ಸಿಇಒ ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ್ ಷಾ ಅವರಿಗೆ ಮನವಿ ಸಲ್ಲಿಸಲಾಯಿತು.
ಹಂಪಿ ಗ್ರಾಪಂ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಹಕ್ಕು ಪತ್ರಗಳನ್ನು ನೀಡಿ, ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಅವಕಾಶವನ್ನು ಗ್ರಾಪಂನಿಂದ ಕಲ್ಪಿಸಬೇಕು. ಪ್ರಕಾಶ ನಗರ ಗ್ರಾಮದಲ್ಲಿ ಹೊಸದಾಗಿ ಗ್ರಂಥಾಲಯ ಆರಂಭಿಸಬೇಕು. ರುದ್ರಭೂಮಿಯನ್ನು ಮಂಜೂರು ಮಾಡಬೇಕು. 2 ಲಕ್ಷ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ನಿರ್ಮಿಸಬೇಕು. ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ರಂಗಮಂದಿರವನ್ನು ನಿರ್ಮಿಸಬೇಕು. ಜನತಾ ಪ್ಲಾಟ್ ನಿವಾಸಿಗಳಿಗೆ, ಮನೆಗಳನ್ನು ರಿಪೇರಿ ಮಾಡಿಕೊಳ್ಳಲು ಗ್ರಾಮ ಪಂಚಾಯಿತಿ ವತಿಯಿಂದ ಅನುಮತಿ ನೀಡಬೇಕು. ಹಂಪಿಯ ಬೀದಿ ಬದಿ, ಸಣ್ಣ, ಪುಟ್ಟ ವ್ಯಾಪಾರಿಗಳಿಗೆ ಗುರುತಿನ ಚೀಟಿಯನ್ನು ನೀಡಿ, ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಅವಕಾಶ ಕಲ್ಪಿಸಬೇಕು. ವಾಣಿಜ್ಯ ಚಟುವಟಿಕೆಗಳಿಗೆ ಪರವಾನಗಿ ನೀಡಬೇಕು. ದೇಶ, ವಿದೇಶಿದ ಪ್ರವಾಸಿಗರಿಗೆ ಪ್ರವಾಸಿಗರ ಅನುಕೂಲಕ್ಕಾಗಿ ವಸತಿ ಗೃಹ ನಿರ್ಮಿಸಲು ಅನುಮತಿಯನ್ನು ನೀಡಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯಲು ಇಚ್ಛಿಸುವ ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು. ಹೊಸ ಹಂಪಿ ಗ್ರಾಮವನ್ನು ಸಾರ್ವಜನಿಕರ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಹಂಪಿ ಗ್ರಾಮ ಪಂಚಾಯಿತಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು.ಸಂಘದ ವಿರುಪಾಕ್ಷಿ, ಎಸ್. ದೇವರಾಜ್, ಎಸ್. ನಾಗರಾಜ್, ರಾಜಕುಮಾರ್ ಸಿಂಗ್, ರಾಕೇಶ್ ಹಾಗೂ ಹುಲುಗಪ್ಪ ಮತ್ತಿತರರಿದ್ದರು.