ಸಾರಾಂಶ
ಹಾವೇರಿ: ಮೆಡಿಕಲ್ ವಿದ್ಯಾರ್ಥಿಗಳು ಅಧ್ಯಯನದ ಎಷ್ಟೇ ಒತ್ತಡಗಳಿದ್ದರೂ ಒತ್ತಡ ನಿವಾರಣೆಗಾಗಿ ಮಾದಕ ವಸ್ತುಗಳಿಗೆ ದಾಸರಾಗದೇ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಶಹರ ಪೊಲೀಸ್ ಠಾಣೆಯ ಸಿಪಿಐ ಮೋತಿಲಾಲ್ ಪವಾರ ತಿಳಿಸಿದರು.ಹಾವೇರಿಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಡ್ರಗ್ಸ್ ಮುಕ್ತ ಹಾವೇರಿ ಜಿಲ್ಲೆ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು.ನಗರದಲ್ಲಿ ದಿನ ಕಳೆದಂತೆ ಯುವಕ- ಯುವತಿಯರ ಸಂಖ್ಯೆ ಹೆಚ್ಚಾಗುತ್ತಿದೆ. ಜನರಲ್ಲಿ ಆರ್ಥಿಕ ಸೌಲಭ್ಯ ಹೆಚ್ಚಾದಂತೆ ದುಶ್ಚಟಗಳು ಹೆಚ್ಚಾಗುತ್ತಿವೆ. ವಿದ್ಯಾರ್ಥಿಗಳು ವಿವಿಧ ಪ್ರಭಾವಕ್ಕೆ ಒಳಗಾಗಿ ತಪ್ಪು ಪರಿಕಲ್ಪನೆಗಳಿಂದ ಮಾದಕ ವ್ಯಸನಿಗಳಾಗುತ್ತಿದ್ದಾರೆ. ಇಂದಿನ ವೈದ್ಯಕೀಯ ವಿದ್ಯಾರ್ಥಿಗಳು ನಾಳಿನ ವೈದ್ಯರು. ಜನರ ಆರೋಗ್ಯದ ಬಗ್ಗೆ ಕಾಳಜಿ ತೆಗೆದುಕೊಳ್ಳುವ ಸಂಪೂರ್ಣ ನೈತಿಕ ಅಧಿಕಾರ ತಮಗಿದೆ. ಆದ್ದರಿಂದ ವಿದ್ಯಾರ್ಥಿಗಳು ಅಧ್ಯಯನದ ಒತ್ತಡವಿದ್ದರೂ ಯಾವುದೇ ಮಾದಕ ವಸ್ತುಗಳನ್ನು ಸೇವಿಸಬಾರದು ಎಂದರು. ರಾಣಿಬೆನ್ನೂರಿನ ಆಯುರ್ವೇದಿಕ್ ಫಿಜಿಶಿಯನ್ ಮತ್ತು ಪಂಚಕರ್ಮ ಸ್ಪೆಷಲಿಸ್ಟ್ ಡಾ. ನಾರಾಯಣ ಪವಾರ ಮಾತನಾಡಿ, ವೈದ್ಯಕೀಯ ಹಾಗೂ ತಾಂತ್ರಿಕ ವಿಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾದಕ ದ್ರವ್ಯ ಸೇವಿಸುತ್ತಾರೆ ಎಂಬ ತಪ್ಪು ಪರಿಕಲ್ಪನೆ ಸಮಾಜದಲ್ಲಿ ಬೇರೂರಿದೆ. ಮಾದಕ ದ್ರವ್ಯ ಸೇವಿಸುವುದರಿಂದ ವಿದ್ಯಾರ್ಥಿ ಜೀವನ ನಾಶವಾಗುತ್ತದೆ. ಅಲ್ಲದೆ ಭವಿಷ್ಯವು ಕೂಡ ನಾಶವಾಗಿ ದಾರುಣ ಅಂತ್ಯ ಕಾಣಬೇಕಾಗುತ್ತದೆ. ತಾತ್ಕಾಲಿಕ ಆನಂದಕ್ಕಾಗಿ ಮಾದಕ ವಸ್ತು ಸೇವಿಸುವುದು ವ್ಯಕ್ತಿಯ ಜೀವನವನ್ನೆ ಸಂಪೂರ್ಣ ನಾಶಪಡಿಸುತ್ತದೆ. ವಿದ್ಯಾರ್ಥಿಗಳು ಮಾದಕ ದ್ರವ್ಯ ಸೇವಿಸುವ ವ್ಯಕ್ತಿಗಳಿಂದ ದೂರವಿರಬೇಕು. ನಾವೆಲ್ಲರೂ ಜಿಲ್ಲೆಯನ್ನು ಡ್ರಗ್ಸ್ ಮುಕ್ತ ಜಿಲ್ಲೆಯನ್ನಾಗಿ ನಿರ್ಮಿಸೋಣ ಎಂದರು.ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಪ್ರಾಚಾರ್ಯೆ ಡಾ. ಆಶಾಕಿರಣ ಎಸ್. ಮಾತನಾಡಿ, ತಮ್ಮ ಸಂಸ್ಥೆಯನ್ನು ಡ್ರಗ್ಸ್ ಮುಕ್ತ ಸಂಸ್ಥೆಯನ್ನಾಗಿಸಲು ಕಾರ್ಯನಿರ್ವಹಿಸುತ್ತೇವೆ. ಅಲ್ಲದೆ ವಿದ್ಯಾರ್ಥಿಗಳಿಗೆ ಅಧ್ಯಯನದ ಜತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸುತ್ತೇವೆ ಎಂದರು.ಜಿಪಂ ಮಾಜಿ ಸದಸ್ಯ ಸಿದ್ದರಾಜ ಕಲಕೋಟಿ ಹಾಗೂ ಡಾ. ರವಿಕುಮಾರ ಮಲ್ಲಾಡದ ಮಾತನಾಡಿದರು. ಡಾ. ಸಂತೋಷ ಆಲದಕಟ್ಟಿ ಪ್ರತಿಜ್ಞಾ ವಿಧಿ ಬೋಧಿಸಿದರು. ಕಿರಣಕುಮಾರ ಕೋಣನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ ಕೋಡಬಾಳ ನಿರೂಪಿಸಿದರು. ಅಭಿಯಾನದ ಸಂಚಾಲಕ ವಿನಯ ತಹಸೀಲ್ದಾರ್, ಅಮಿತಗೌಡ ಪಾಟೀಲ, ಪ್ರವೀಣ ಅಂಗರಗಟ್ಟಿ, ಮೇಗರಾಜ ಇದ್ದರು.