ಸಾರಾಂಶ
ಕನ್ನಡಪ್ರಭ ವಾರ್ತೆ ವಿರಾಜಪೇಟೆ
ಶಿಕ್ಷಣದಿಂದ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಶಿಕ್ಷಣ ಪಡೆದಾತ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳುತ್ತಾನೆ ಎಂದು ವಿರಾಜಪೇಟೆ ಆರಕ್ಷಕ ವೃತ್ತ ನಿರೀಕ್ಷಕ ಬಿ.ಎಸ್. ಶಿವರುದ್ರ ಅಭಿಪ್ರಾಯಪಟ್ಟಿದ್ದಾರೆ.ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಇಲ್ಲಿನ ಜನ ಸೇವಾ ಟ್ರಸ್ಟ್ ವತಿಯಿಂದ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇಂದಿನ ಸಮಾಜದಲ್ಲಿ ಪ್ರತಿಯೊಬ್ಬರೂ ಶಿಕ್ಷಣ ಪಡೆಯುವುದು ಅನಿವಾರ್ಯವಾಗಿದೆ. ಹಿಂದೆ ಶಿಕ್ಷಣಕ್ಕೆ ಮಹತ್ವವಿದ್ದರೂ ಪ್ರೋತ್ಸಾಹದ ಕೊರತೆ ಕಾಣಿಸಿಕೊಂಡಿತ್ತು. ಸರ್ಕಾರವು ಯಾವುದೇ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು. ಜಾತಿ, ಮತ, ಧರ್ಮ ಬೇದವಿಲ್ಲದೆ ಸರ್ವರಿಗೂ ಉಚಿತ ಶಿಕ್ಷಣ ನೀಡುವ ಕಾರ್ಯಕ್ಕೆ ಮುಂದಾಗಿದೆ ಎಂದರು.ಬಾಲ್ಯದಿಂದಲೇ ಸಂಸ್ಕಾರಗಳನ್ನು ಪಡೆಯುವುದು ಉತ್ತಮ. ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲಿ ಮೌಲ್ಯಯುತ ಶಿಕ್ಷಣ ಒದಗಿಸುವ ಅನಿವಾರ್ಯವಿದೆ. ಸರ್ಕಾರಿ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳು ಕೆಳಸ್ತರದವರಲ್ಲ. ಸರ್ಕಾರಿ ಶಾಲೆಗಳಲ್ಲಿ ಓದಿದ ಹಲವಾರು ಮಂದಿ ಖ್ಯಾತನಾಮರಾಗಿದ್ದಾರೆ. ಉತ್ತಮ ಪದವಿ ಹೊಂದಿದ್ದಾರೆ. ಸರ್ಕಾರಿ ಶಾಲೆಗಳನ್ನು ತುಚ್ಛವಾಗಿ ಕಾಣದೆ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಿ ಸರ್ಕಾರಿ ಶಾಲೆಗಳನ್ನು ಪುನರ್‌ಚೇತನಗೊಳಿಸುವಂತಾಗಬೇಕು ಎಂದರು.
ಜನ ಸೇವಾ ಟ್ರಸ್ಟ್ ಸ್ಥಾಪಕ ಅದ್ಯಕ್ಷ ಎಂ.ಇ.ಶರೀಫ್ ಪ್ರಾಸ್ತಾವಿಕ ಭಾಷಣದಲ್ಲಿ, ಸಂಸ್ಥೆಯು 2012 ರಲ್ಲಿ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ವಿದ್ಯಾಬ್ಯಾಸಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ವಿಧ್ಯಾರ್ಥಿ ವೇತನ ನೀಡುತ್ತಾ ಬಂದಿದೆ. ಸಾಮಾಜಿಕ ಕಳಕಳಿಯೋಂದಿಗೆ ಆರೋಗ್ಯ, ಸಾಮಾಜಿಕ, ಶಿಕ್ಷಣ, ಮತ್ತು ಕ್ರೀಡೆಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಸಂಸ್ಥೆಯು ಜಾತಿ ಮತ ಭೇದವಿಲ್ಲದೆ ಎಲ್ಲಾ ವರ್ಗದ ಬಡ ವಿದ್ಯಾಥಿಗಳನ್ನು ಗುರುತಿಸಿ ಶಿಕ್ಷಣದ ಮಹತ್ವ ಅರಿತು ಪ್ರೋತ್ಸಾಹ ಧನ ಸಹಾಯ ನೀಡುತ್ತಾ ಬಂದಿದೆ ಎಂದರು.ವಿರಾಜಪೇಟೆ ಪುರಸಭೆ ಸದಸ್ಯ ಮನೆಯಪಂಡ ದೇಚಮ್ಮ ಕಾಳಪ್ಪ ಮತ್ತು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಡಿ.ಪಿ. ರಾಜೇಶ್ ಪದ್ಮನಾಭ ಮಾತನಾಡಿದರು.
ವಕೀಲ ರೀಹಾನ, ಸಂಸ್ಥೆಯ ಉಪಾಧ್ಯಕ್ಷ ರಹೀಂ, ಸಮಾಜ ಸೇವಕ ಅಖೀಲ್, ರಜಾಕ್, ಉದ್ಯಮಿಗಳಾದ ಅಲ್ತಾಫ್ ಮತ್ತಿತರರಿದ್ದರು.ಸುಮಾರು 40 ವಿದ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನ, ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ವಿಭಾಗದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ವಿರಾಜಪೇಟೆ ಸಂತ ಅನ್ನಮ್ಮ ಶಾಲೆ ದೈಹಿಕ ಶಿಕ್ಷಕರಾದ ಶಬರೀಶ್ ಅವರನ್ನು ಸನ್ಮಾನಿಸಲಾಯಿತು.