ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ನಗರವನ್ನು ಸ್ವಚ್ಛ ಮತ್ತು ಸುಂದರ ನಗರವನ್ನಾಗಿ ಮಾಡಲು ನನ್ನ ಅವಧಿಯಲ್ಲಿ ಪ್ರಥಮ ಆದ್ಯತೆ ನೀಡಲಾಗುವುದು ಎಂದು ನಗರಸಭೆ ನೂತನ ಅಧ್ಯಕ್ಷ ಎಂ.ವಿ.ಪ್ರಕಾಶ್ (ನಾಗೇಶ್) ತಿಳಿಸಿದರು.ಇತ್ತೀಚೆಗಷ್ಟೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಸಮಸ್ಯೆಗಳನ್ನು ಅರಿತು, ಅವುಗಳ ನಿವಾರಣೆಗೆ ಸರ್ವ ಸದಸ್ಯರ ಜೊತೆಗೂಡಿ ಕೆಲಸ ಮಾಡಲು ಶ್ರಮಿಸುತ್ತೇವೆ. ರಸ್ತೆ, ಚರಂಡಿಗಳ ಅಭಿವೃದ್ಧಿ, ಬೆಂಗಳೂರು- ಮೈಸೂರು ಹೆದ್ದಾರಿ ಬದಿಯಲ್ಲಿ ಪಾದಚಾರಿ ಮಾರ್ಗವನ್ನು ಪುನರ್ ನಿರ್ಮಿಸುವ ಕೆಲಸ ನಡೆಯುತ್ತಿದೆ. ಇದರೊಂದಿಗೆ ಫುಟ್‌ಪಾತ್ ವ್ಯಾಪಾರಿಗಳಿಗೆ ಪ್ರತ್ಯೇಕ ಸ್ಥಳ ನಿಗದಿಪಡಿಸಿ, ಶೆಲ್ಟರ್ ನಿರ್ಮಿಸುವುದು. ಬಸ್ ಪ್ರಯಾಣಿಕರ ತಂಗುದಾಣಗಳನ್ನು ನವೀಕರಿಸುವುದು, ಆಟೋ ನಿಲ್ದಾಣಗಳಿಗೆ ಶೆಲ್ಟರ್ ಅಳವಡಿಸಿ ಅನುಕೂಲ ಕಲ್ಪಿಸಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಗರಸಭೆಯಲ್ಲಿ ನಮೂನೆ-೩ ಸೇರಿದಂತೆ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ವಿಳಂಬವಾಗದಂತೆ ಮಾಡಿಸಿಕೊಡಲಾಗುವುದು. ಈ ಸಂಬಂಧ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು ಎಂದು ಹೇಳಿದರು.ಸಿಬ್ಬಂದಿ ಕೊರತೆ:
ಸಿಬ್ಬಂದಿ ಕೊರತೆಯ ಪರಿಣಾಮ ನಗರಸಭೆಯಲ್ಲಿ ಜನರಿಗೆ ಅಗತ್ಯ ದಾಖಲೆಗಳ ವಿತರಣೆ ಹಾಗೂ ವಿವಿಧ ಸೇವೆಗಳು ಸಕಾಲದಲ್ಲಿ ದೊರೆಯುತ್ತಿಲ್ಲ. ಇದು ತಮ್ಮ ಗಮನಕ್ಕೂ ಬಂದಿದೆ. ರೆವಿನ್ಯೂ, ಇಂಜಿನಿಯರಿಂಗ್ ವಿಭಾಗ ಹಾಗೂ ಆರೋಗ್ಯ ವಿಭಾಗದಲ್ಲಿ ಸಿಬ್ಬಂದಿ ಕೊರತೆಯಿದೆ. ಪೌರಕಾರ್ಮಿಕರ ಕೊರತೆಯೂ ಇದೆ. ಈ ಬಗ್ಗೆ ಸರ್ಕಾರದ ಗಮನ ಸೆಳೆದು, ತ್ವರಿತವಾಗಿ ಸಿಬ್ಬಂದಿ ನೇಮಕಕ್ಕೆ ಕ್ರಮ ವಹಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.ಎಚ್‌ಡಿಕೆಯಿಂದ ಅನುದಾನ:
ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಅವರು ನಗರದ ಅಭಿವೃದ್ಧಿಗೆ ಕೇಂದ್ರದಿಂದ ಅಗತ್ಯ ನೆರವು, ಅನುದಾನ ದೊರಕಿಸಿಕೊಡುವ ಭರವಸೆ ನೀಡಿದ್ದಾರೆ. ಹಾಗೆಯೇ ಮಂಡ್ಯ ಶಾಸಕ ಪಿ.ರವಿಕುಮಾರ್‌ಗೌಡ ಅವರ ಸಹಕಾರವನ್ನೂ ಕೋರಿದ್ದೇವೆ. ಎಲ್ಲರೂ ಕೆಲಸ ಮಾಡುವುದು ಮಂಡ್ಯ ನಗರದ ಅಭಿವೃದ್ಧಿಗಾಗಿ. ಇದನ್ನು ಒಟ್ಟಿಗೆ ಮಾಡೋಣ ಎಂದು ಶಾಸಕರಿಗೆ ತಿಳಿಸಿದ್ದೇನೆ. ಅದಕ್ಕೆ ಅವರೂ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಸೆ.೫ರಂದು ಅಧಿಕಾರ ಸ್ವೀಕಾರ:
ನಗರಸಭೆ ಅಧ್ಯಕ್ಷರಾಗಿ ಅಧಿಕೃತವಾಗಿ ಸೆ.೫ರಂದು ಅಧಿಕಾರ ಸ್ವೀಕರಿಸಲಾಗುವುದು ಎಂದು ನಗರಸಭೆ ನೂತನ ಅಧ್ಯಕ್ಷ ಎಂ.ವಿ.ಪ್ರಕಾಶ್(ನಾಗೇಶ್) ತಿಳಿಸಿದರು. ಆ.೨೮ರಂದು ನಡೆದ ನಗರಸಭೆ ವರಿಷ್ಠರ ಚುನಾವಣೆಯಲ್ಲಿ ೧೯ ಮತಗಳ ಬಲದೊಂದಿಗೆ ನಾನು ಅಧ್ಯಕ್ಷನಾಗಿ ಹಾಗೂ ಎಂ.ಪಿ.ಅರುಣ್‌ಕುಮಾರ್ ಉಪಾಧ್ಯಕ್ಷರಾಗಿ ಚುನಾಯಿತರಾಗಿದ್ದೇವೆ. ಆದರೆ, ಅಧಿಕೃತವಾಗಿ ಸೆ.೫ರಂದು ವಿಶೇಷ ಪೂಜೆಯೊಂದಿಗೆ ಅಧಿಕಾರ ವಹಿಸಿಕೊಳ್ಳಲಿದ್ದೇವೆ ಎಂದು ಹೇಳಿದರು.ಜೆಡಿಎಸ್- ಬಿಜೆಪಿ ಮೈತ್ರಿಕೂಟವು ನಗರಸಭೆಯ ಆಡಳಿತ ಚುಕ್ಕಾಣಿ ಹಿಡಿದಿದ್ದರೂ ಎಲ್ಲ ೩೫ ಸದಸ್ಯರನ್ನು ವಿಶ್ವಾಸ ತೆಗೆದುಕೊಂಡು ಹಾಗೂ ಎಲ್ಲರ ಸಹಕಾರದೊಂದಿಗೆ ಕೆಲಸ ಮಾಡುವುದು ನಮ್ಮ ಆಶಯವಾಗಿದೆ. ಇದಕ್ಕಾಗಿ ನಗರದ ಅಭಿವೃದ್ಧಿಗೆ ಪಕ್ಷಾತೀತವಾಗಿ ಎಲ್ಲ ಸದಸ್ಯರ ಬೆಂಬಲ ಕೋರುತ್ತೇವೆ. ಹಾಗೆಯೇ ಸೆ.೫ರಂದು ನಡೆಯುವ ಅಧಿಕಾರ ಸ್ವೀಕಾರ ಸಮಾರಂಭಕ್ಕೂ ಆಹ್ವಾನಿಸುತ್ತೇವೆ ಎಂದರು.
ಗೋಷ್ಠಿಯಲ್ಲಿ ನಗರಸಭೆ ಉಪಾಧ್ಯಕ್ಷ ಎಂ.ಪಿ ಅರುಣ್‌ಕುಮಾರ್, ಸದಸ್ಯ ರವಿ ಹಾಜರಿದ್ದರು.