ದೇಶ ಇಂದು ಎಲ್ಲ ಕ್ಷೇತ್ರಗಳಲ್ಲೂ ಮುನ್ನುಗ್ಗುತ್ತಿದೆ. ಇದಕ್ಕೆ ಕಾರಣ ದೇಶದಲ್ಲಿ ಪ್ರತಿಭಾವಂತರೇ. ವಿಕಸಿತ ಭಾರತವಾಗುವಲ್ಲೂ ಪ್ರತಿಭಾವಂತರ ಕೊಡುಗೆ ಅತ್ಯಗತ್ಯ. ಬಾಹ್ಯಾಕಾಶ ಹಾಗೂ ಲಸಿಕೆಗಳಂಥ ಕ್ಷೇತ್ರಗಳಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿದೆ.
ಧಾರವಾಡ:
ಬಾಹ್ಯಾಕಾಶ ಮತ್ತು ಲಸಿಕೆಗಳಂತಹ ಬಹು ಕ್ಷೇತ್ರಗಳಲ್ಲಿ ಭಾರತ ತನ್ನ ತಾಂತ್ರಿಕತೆಯಿಂದಾಗಿ ಮುಂಚೂಣಿಯಲ್ಲಿದೆ. ವಿಕಸಿತ ಭಾರತವನ್ನಾಗಿಸುವ ಜವಾಬ್ದಾರಿ ಪ್ರತಿಭಾವಂತ ಯುವಕರ ಮೇಲಿದ್ದು ಈ ನಿಟ್ಟಿನಲ್ಲಿ ನೀವು ಕಾರ್ಯಪ್ರವೃತ್ತರಾಗುತ್ತೀರಿ. 2047ರಲ್ಲಿ ವಿಕಸಿತ ಭಾರತ ಆಗಿಯೇ ತೀರುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.ಇಲ್ಲಿನ ಐಐಐಟಿ (ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ) ಘಟಿಕೋತ್ಸವದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ದೇಶ ಇಂದು ಎಲ್ಲ ಕ್ಷೇತ್ರಗಳಲ್ಲೂ ಮುನ್ನುಗ್ಗುತ್ತಿದೆ. ಇದಕ್ಕೆ ಕಾರಣ ದೇಶದಲ್ಲಿ ಪ್ರತಿಭಾವಂತರೇ. ವಿಕಸಿತ ಭಾರತವಾಗುವಲ್ಲೂ ಪ್ರತಿಭಾವಂತರ ಕೊಡುಗೆ ಅತ್ಯಗತ್ಯ. ಬಾಹ್ಯಾಕಾಶ ಹಾಗೂ ಲಸಿಕೆಗಳಂಥ ಕ್ಷೇತ್ರಗಳಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿದೆ. ಈ ಪರಂಪರೆ ಮುಂದುವರಿಯಬೇಕು. ಆ ಜವಾಬ್ದಾರಿ ಹೊಸ ಪದವೀಧರರ ಮೇಲಿದೆ ಎಂದರು.
ಧಾರವಾಡ ಐಐಐಟಿಗಳಂತಹ ಸಂಸ್ಥೆಗಳು ಪ್ರತಿಭಾವಂತ ಪದವೀಧರರನ್ನು ಜಗತ್ತಿಗೆ ಕೊಡುಗೆಯಾಗಿ ನೀಡುತ್ತಿವೆ. ನಿಮ್ಮಂಥವರಿಂದಾಗಿ ಭಾರತ ವಿಕಸಿತ ಭಾರತವಾಗುವಲ್ಲಿ ಯಾವುದೇ ಸಂಶಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಘಟಿಕೋತ್ಸವ ಭಾಷಣ ಮಾಡಿದ ಐಐಟಿ ದೆಹಲಿ ನಿರ್ದೇಶಕ ಪ್ರೊ. ರಂಗನ್ ಬ್ಯಾನರ್ಜಿ, ಭಾರತ ತಂತ್ರಜ್ಞಾನದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ. ಹಿಂದೆ ತಾವು ವಿದ್ಯಾರ್ಥಿಯಾಗಿದ್ದಾಗ, ಬ್ಯಾಂಕಿನ ವಹಿವಾಟು, ಟಿಕೆಟ್ ಬುಕ್ಕಿಂಗ್, ಶಾಪಿಂಗ್‌ಗೆ ಎಷ್ಟು ಕಷ್ಟ ಪಡಬೇಕಿತ್ತು. ಆದರೆ, ಈಗ ಆ ಸಮಸ್ಯೆಯಿಲ್ಲ. ಎಲ್ಲವೂ ಕ್ಷಣ ಮಾತ್ರದಲ್ಲೇ ಪೂರೈಸಿಕೊಳ್ಳಬಹುದಾಗಿದೆ. ಆನ್‌ಲೈನ್ ವ್ಯವಸ್ಥೆ ಜನರ ಬದುಕನ್ನು ಹಗುರಗೊಳಿಸಿದೆ. ಆದರೆ, ಅದರ ಜತೆಗೆ ಸಾಕಷ್ಟು ಬಾಧಕಗಳುಂಟು. ಎರಡನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.ಅಲ್ಲದೇ, ತಂತ್ರಜ್ಞಾನದಲ್ಲಿ ಇಷ್ಟೊಂದು ಬೆಳವಣಿಗೆಯಾಗಿರುವುದು ನಮ್ಮ ಯುವಕರ ಬೌದ್ಧಿಕ ಸಾಮರ್ಥ್ಯಗಳಿಂದ ಸಾಧ್ಯವಾಗಿದೆ. ಯುವ ಪದವೀಧರರು ತಮ್ಮ ವೃತ್ತಿಜೀವನವನ್ನು ದೇಶದ ಬೆಳವಣಿಗೆಗೆ ಅನುಗುಣವಾಗಿ ಯೋಜಿಸಬೇಕೆಂದು ಒತ್ತಾಯಿಸಿದರು.
ಐಐಐಟಿ ಧಾರವಾಡದ ಆಡಳಿತ ಮಂಡಳಿ ಅಧ್ಯಕ್ಷ, ಕೈಗಾರಿಕೋದ್ಯಮಿ ಆಶ್ರಿ ಜಲಜ್ ದಾನಿ ಅವರು, ಪದವೀಧರರಾಗಿರುವ ನೀವು ಕಷ್ಟಪಟ್ಟು ಕೆಲಸ ಮಾಡುವ ಮೂಲಕ ದೇಶದ ಪ್ರಗತಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.ಸಂಸ್ಥೆಯ ನಿರ್ದೇಶಕ ಪ್ರೊ. ಮಹಾದೇವ್ ಪ್ರಸನ್ನ, ಗವರ್ನರ್ ಮಂಡಳಿ ಮತ್ತು ಸೆನೆಟ್ ಸದಸ್ಯರು ಉಪಸ್ಥಿತರಿದ್ದರು. ಸುಮಾರು 255 ವಿದ್ಯಾರ್ಥಿಗಳಿಗೆ ಘಟಿಕೋತ್ಸವದಲ್ಲಿ ಪದವಿ ನೀಡಿ ನೀಡಿ ಗೌರವಿಸಲಾಯಿತು. ಇದರಲ್ಲಿ ಆರು ವಿದ್ಯಾರ್ಥಿಗಳು ಚಿನ್ನದ ಪದಕ ಪಡೆದರು. ರಾಷ್ಟ್ರಪತಿ ಚಿನ್ನದ ಪದಕ ಹಾಗೂ ಇನ್‌ಸ್ಟಿಟ್ಯೂಟ್ ಚಿನ್ನದ ಪದಕವನ್ನು ಶಿವಶಂಕರ ಬಿ. ಪಡೆದರೆ, ಆದಿತ್ಯರಾಜ್, ಶ್ರೀಜನ ಶುಕ್ಲಾ ಇನ್‌ಸ್ಟಿಟ್ಯೂಟ್ ಚಿನ್ನದ ಪದಕ ಪಡೆದರು. ನಿರ್ದೇಶಕ ಪದಕ ಆದಿತ್ಯ ರಾಜ್ ಪಡೆದನು. ಅತ್ಯುತ್ತಮ ವಿದ್ಯಾರ್ಥಿನಿ ಪ್ರಶಸ್ತಿಯನ್ನು ಶೇಟ್ ರಿಂಚಲ್ ಸಚಿನ ತನ್ನ ಮುಡಿಗೇರಿಸಿಕೊಂಡಳು.