ಉಡುಪಿ: ಶತಮಾನಗಳ ಹಿಂದೆಯೇ ಶ್ರೀ ರೇಣುಕಾಚಾರ್ಯ, ಯೋಗಿ ನಾರೇಯಣ ಯತೀಂದ್ರ ಸೇರಿದಂತೆ ಹಲವಾರು ದಾರ್ಶನಿಕರು ಸಮಾಜ ಸುಧಾರಣೆಗೆ ಮಾರ್ಗದರ್ಶನ ನೀಡಿದ್ದಾರೆ. ಅವರ ಸರಳ ಜೀವನ, ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಿದರೆ ಇಂದೂ ಮೌಲ್ಯಯುತ ಸಮಾಜ ನಿರ್ಮಾಣ ಸಾಧ್ಯವಿದೆ ಎಂದು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಆಶ್ರಯದಲ್ಲಿ ನಡೆದ ಶ್ರೀ ರೇಣುಕಾಚಾರ್ಯ
ಮತ್ತು ಯೋಗಿ ನಾರೇಯಣ ಯತೀಂದ್ರ ಜಯಂತಿ (ಕೈವಾರ ತಾತಯ್ಯ)ಗಳನ್ನು ಉದ್ಘಾಟಿಸಿ ಮಾತನಾಡಿದರು.ರೇಣುಕಾಚಾರ್ಯ ಹಾಗೂ ಕೈವಾರ ತಾತಯ್ಯ ಅವರ, ಇತರರ ಬಗ್ಗೆ ಒಳ್ಳೆಯ ಭಾವನೆ ಹೊಂದಿರಬೇಕು. ಮಕ್ಕಳು ತಮ್ಮ ತಂದೆ-ತಾಯಿಗಳಿಗೆ ವಿಧೇಯರಾಗಿರಬೇಕು, ಗುರು-ಹಿರಿಯರನ್ನು ಗೌರವಿಸಬೇಕು ಕಾಣಬೇಕು ಎನ್ನುವಂತಹ ಜೀವನಾದರ್ಶಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಸಲುವಾಗಿ ಈ ಜಯಂತಿ ಕಾರ್‍ಯಕ್ರಮಗಳನ್ನು ಆಚರಿಸಲಾಗುತ್ತಿದೆ ಎಂದರು.ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ಉಪನ್ಯಾಸಕಿ ಸುಲೋಚನ ಪಚ್ಚಿನಡ್ಕ ಅವರು ಈ ಮಹನೀಯರ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಉಪತಹಶೀಲ್ದಾರ್ ಗಳಾದ ನವನೀತ್ ಹಾಗೂ ಜಯಲಕ್ಷ್ಮೀ, ಸಮುದಾಯದ ಸದಸ್ಯರು, ಜಿಲ್ಲಾಡಳಿತದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ, ಸಿಬ್ಬಂದಿ ವರ್ಷಾ ಬಿ. ಕೋಟ್ಯಾನ್ ನಿರೂಪಿಸಿ, ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾ ಅಧ್ಯಕ್ಷ ಸಿದ್ಧಬಸಯ್ಯ ಚಿಕ್ಕಮಠ ವಂದಿಸಿದರು.