ಕವಿ ವರ್ತಮಾನದ ಸಾಮಾಜಿಕ ಸಮಸ್ಯೆಗಳ ಕುರಿತಾಗಿ ಬೆಳಕು ಚೆಲ್ಲುವ ಗಂಭೀರ ಸಾಹಿತ್ಯ ಕೃಷಿಯತ್ತ ಗಮನ ಹರಿಸಬೇಕು.
ಹೂವಿನಹಡಗಲಿ: ಸಾಹಿತ್ಯದಿಂದ ಸೌಹಾರ್ದ ಸಮಾಜ ಕಟ್ಟುವ ಕೆಲಸ ನಿರಂತರವಾಗಿ ಆಗಬೇಕಿದೆ ಎಂದು ಸಾಹಿತಿ ಇಸ್ಮಾಯಿಲ್ ಯಲಿಗಾರ್ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಭಾನುವಾರ ಸಿಂಚನ ಪ್ರಕಾಶನ ಮೇ ಸಾಹಿತ್ಯ ಮೇಳ ಬಳಗದ ಸಹಯೋಗದಲ್ಲಿ ಆಯೋಜಿಸಿದ್ದ 2023 ಹಾಗೂ 2024ರ ಸಿಂಚನ ಕಾವ್ಯ ಪ್ರಶಸ್ತಿ ಪ್ರದಾನ, ಕವಿ ಎ.ಎಸ್. ಮಕಾನದಾರ ಅವರ ದರ್ವೇಶಿ ಪದ್ಯ ಕೃತಿ ಲೋಕಾರ್ಪಣೆ ಸಾಧಕರಿಗೆ ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಕವಿ ವರ್ತಮಾನದ ಸಾಮಾಜಿಕ ಸಮಸ್ಯೆಗಳ ಕುರಿತಾಗಿ ಬೆಳಕು ಚೆಲ್ಲುವ ಗಂಭೀರ ಸಾಹಿತ್ಯ ಕೃಷಿಯತ್ತ ಗಮನ ಹರಿಸಬೇಕು. ಯುದ್ಧ ವಿರೋಧಿ ವಿಷಯ ಹೆಚ್ಚು ಕಾವ್ಯದ ವಸ್ತುವನ್ನಾಗಿಸಿ ಜಾಗೃತಿ ಮೂಡಿಸುವತ್ತ ಚಿತ್ತವಿರಲಿ ಎಂದು ಹೇಳಿದರು.
ಕನ್ನಡ ನಾಡು ಸೌಹಾರ್ದ ಸಮಾನತೆಯ ತವರು. ಬಸವಣ್ಣ, ಕುವೆಂಪು, ಕನಕದಾಸರು, ಶರೀಫರು, ಸಂತರು, ಸೂಫಿಗಳು ಬಿತ್ತಿದ ಮಾನವೀಯ ಮೌಲ್ಯಗಳನ್ನು ಎಲ್ಲರೂ ಅನುಸಬೇಕೆಂದು ತಿಳಿಸಿದರು.ಎ.ಎಸ್. ಮಕಾನದಾರ ಅವರ ದರ್ವೇಶಿ ಪದ್ಯಗಳು ಸಮಕಾಲೀನ ಚಿಂತನೆಗೆ ಹಚ್ಚುವಂತೆ ವ್ಯಕ್ತವಾಗಿವೆ ಎಂದು ಹಾವೇರಿ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯೆ ಡಾ.ಪುಷ್ಪಾ ಶಲವಡಿಮಠ ಹೇಳಿದರು.
ಸಿಂಚನ ಕಾವ್ಯ ಪ್ರಶಸ್ತಿ ಪುರಸ್ಕೃತರ ಕೃತಿಗಳಾದ ಗೋರಿ ಮತ್ತು ಧರ್ಮ ಹಾಗೂ ಕನ್ನಡೆಮೆನಿಪ್ಪಾ ನಾಡು ಕುರಿತು ಕವಿ ರಾಮಪ್ಪ ಕೋಟಿಹಾಳ ಮಾಹಿತಿ ನೀಡಿದರು.2023, 2024ರ ಸಿಂಚನ ಕಾವ್ಯ ಪ್ರಶಸ್ತಿಯನ್ನು ಬೀಳಗಿಯ ಸೋಮಲಿಂಗ ಬೇಡರ ಆಳೂರ, ಹುರಕಡ್ಲಿ ಶಿವಕುಮಾರ ಅವರಿಗೆ ₹5 ಸಾವಿರ ನಗದು ಬಹುಮಾನ, ₹2 ಸಾವಿರ ಮೌಲ್ಯದ ಪುಸ್ತಕಗಳನ್ನು ನೀಡಿ ಗೌರವಿಸಲಾಯಿತು.
ಸಿಂಚನ ಕಾವ್ಯ ಪ್ರಶಸ್ತಿ ವಿಜೇತ ಸಾಹಿತಿಗಳಾದ ಹುರಕಡ್ಲಿ ಶಿವಕುಮಾರ, ಸೋಮಲಿಂಗ ಬೇಡರ ಆಳೂರ ಮಾತನಾಡಿ, ಸಾಹಿತ್ಯ ಕ್ಷೇತ್ರದಲ್ಲಿ ಮತ್ತಷ್ಟು ಬರೆಯಲು ಸ್ಫೂರ್ತಿ ಆಗಿದೆ ಎಂದು ಹೇಳಿದರು.ಶಾಖಾ ಗ್ರಂಥಾಲಯಾಧಿಕಾರಿ ಬಿ.ನಾರಾಯಣ್ ದಾಸ್, ಪ್ರಕಾಶಕಿ ಸವಿತಾ ಅಂಗಡಿ ಉಪಸ್ಥಿತರಿದ್ದರು. ಅಧ್ಯಕ್ಷತೆ ವಹಿಸಿದ್ದ ಸಾಹಿತಿ ತೋ.ಮ. ಶಂಕ್ರಯ್ಯ ಮಾತನಾಡಿ, ನಿರಂತರವಾಗಿ ಸಾಹಿತ್ಯ ಚಟುವಟಿಕೆಗಳನ್ನು ಮಲ್ಲಿಗೆ ನಾಡಲ್ಲಿ ಆಯೋಜಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು.
ಸಿಂಚನ ಪ್ರಕಾಶನದ ಸಾಹಿತ್ಯ, ಓದು ಜನಮೇಜಯ ಪುಸ್ತಕ ಅಭಿಯಾನ ಬಗ್ಗೆ ಸುರೇಶ ಅಂಗಡಿ ವಿವರ ಒದಗಿಸಿದರು.ಚಂದನಾ ಕಲಾ ಬಳಗದ ಎ.ಎಂ.ಪಿ.ಪ್ರಶಾಂತ್, ಜಡೇಶ್ ಕನ್ನಡ ಭಾವಗೀತೆಗಳನ್ನು ಹಾಡಿದರು. ಪತ್ರಕರ್ತ ಎಂ.ದಯಾನಂದ, ನಾಗರಾಜ ಮಲ್ಕಿಒಡೆಯರ್, ನಯನಾ ಅಂಗಡಿ ನಿರ್ವಹಿಸಿದರು. ಇದೇ ವೇಳೆ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಕಲ್ಪಿಸಲಾಗಿತ್ತು.
ಇದೇ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನವನ್ನು ಹಮ್ಮಿಕೊಳ್ಳಲಾಗಿತ್ತು, ಬೀರಬ್ಬಿ ಬಸವರಾಜ (ರಂಗಭೂಮಿ), ಪ್ರಕಾಶ್ ಮಲ್ಕಿಒಡೆಯರ್ (ಸಾಹಿತ್ಯ), ಕಲಾವತಿ ಹವಾಲ್ದಾರ್ (ಸಂಗೀತ), ಅಕ್ಕಸಾಲಿ ಚಂದ್ರಪ್ಪ (ಸಂಗೀತ), ನಾಗಮಂಜುಳ ಜೈನ್ (ಸಾಹಿತ್ಯ), ಸಿ.ಸೋಮೇಶಪ್ಪ (ಛಾಯಾಗ್ರಹಣ), ಮಂಜುನಾಥ ಹ್ಯಾರಡ (ಹಾಸ್ಯ), ಎಚ್.ಬಿ.ಶಾಂತಾ (ಅಂಗನವಾಡಿ)ಟಿ.ಶಂಶಾದ್ ಬೇಗಂ (ಬಿಸಿಯೂಟ), ಶ್ರೀಲತಾ (ವಿಜ್ಞಾನ) ಹಾಗೂ ತುಂಗಭದ್ರಾ ಪ್ರೌಢಶಾಲೆಯ 2024-25 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು.