ಕನ್ನಡಪ್ರಭ ವಾರ್ತೆ ಮೈಸೂರು

ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ಸುತ್ತೂರು ಶ್ರೀಮಠದಿಂದ ಸಮಾಜಮುಖಿ ಕಾರ್ಯಗಳನ್ನು ಆಯೋಜಿಸಿಲಾಗುತ್ತಿದೆ ಎಂದು ರಾಜ್ಯ ಚುನಾವಣಾ ಆಯಕ್ತ ಜಿ.ಎಸ್. ಸಂಗ್ರೇಶಿ ಹೇಳಿದರು.

ಬಿಳಿಗಿರಿರಂಗನ ಬೆಟ್ಟದ ಶ್ರೀ ಸುತ್ತೂರು ಶಾಖಾ ಮಠದಲ್ಲಿ ಮಂಗಳವಾರ ಆಯೋಜಿಸಿದ್ದ ಜೀವನೋತ್ಸಾಹ ಶಿಬಿರದ ಸಮಾರೋಪದಲ್ಲಿ ಅವರು ಮಾತನಾಡಿದರು.

ಶ್ರೀಮಠವು ವಿಶ್ವದಾದ್ಯಂತಧಾರ್ಮಿಕ, ಸಾಮಾಜಿಕ ಮತ್ತು ಮಾನವೀಯ ಮೌಲ್ಯಗಳನ್ನು ಪಸರಿಸುತ್ತಿದೆ. ಜೀವನದಲ್ಲಿ ಉತ್ಸಾಹವಿಲ್ಲದಿದ್ದರೆ ಮೆರೆಗು ಇರುವುದಿಲ್ಲ. ಇಂತಹ ಶಿಬಿರಗಳಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯಗಳಿಗೆ ಹೊಸ ಚೈತನ್ಯ ದೊರೆಯುತ್ತದೆ. ಜೀವನದಲ್ಲಿ ಉತ್ಸಾಹ ಹೊಂದಲು ಶಿಬಿರ ಸಹಕಾರಿಯಾಗಿದೆ ಎಂದು ಹೇಳಿದರು.

ಚಾಮರಾಜನಗರ ಜಿಲ್ಲಾ ಪಂಚಾಯತ್‌ ಸಿಇಒ ಮೋನಾ ರೋತ್‌ಅವರು ಇಂಥ ಜೀವನೋತ್ಸಾಹ ಶಿಬಿರಗಳಿಂದ ನೈತಿಕ ಮೌಲ್ಯಗಳನ್ನು ಕಲಿಯಲು ಸಾಧ್ಯವಾಗುತ್ತದೆ. ಇದು ಜೀವನದಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸದೃಢಗೊಳಿಸುತ್ತದೆ. ಸಾತ್ವಿಕವಾದ ಆಹಾರ ಸೇವಿಸುವುದನ್ನು ರೂಢಿಸಿಕೊಳ್ಳಬೇಕು. ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲು ಇಂತಹ ಶಿಬಿರಗಳು ಅವಶ್ಯಕ ಎಂದು ತಿಳಿಸಿದರು.


ಶಿಬಿರಾರ್ಥಿಗಳಾದ ತುಮಕೂರಿನ ಎಸ್. ಕುಮಾರಸ್ವಾಮಿ, ಎಂ. ಸುನೀತಾ, ಬೆಂಗಳೂರಿನ ಮಂಜುಳಾ ಪ್ರಸಾದ್, ವಿಜಯಪುರದ ಬಸವರಾಜ್ ಗೋಟ್ಯಾಳ, ಲೋಕಾಪುರದ ಸುರೇಶ್ ಹಿರೇಮಠ ಮತ್ತು ಗೋಕಾಕ್‌ ನ ಚಂದ್ರಶೇಖರ್‌ ಕಡೆವಾಡಿ ಅವರು ಅನಿಸಿಕೆಗಳನ್ನು ಹಂಚಿಕೊಂಡರು.

ಎಸ್. ಪುಟ್ಟರಾಜಪ್ಪ ಶಿಬಿರದ ವರದಿ ಮಂಡಿಸಿದರು. ವಿದ್ಯಾ ಸೋಮಶೇಖರ್ ಮಗದುಂ ಪ್ರಾರ್ಥಿಸಿದರು. ಎಂ.ಜಿ. ಸಿದ್ದರಾಮಯ್ಯ ಸ್ವಾಗತಿಸಿದರು. ಮಂಜುಳಾ ಬಸವಲಿಂಗಪ್ಪ ವಂದಿಸಿದರು. ಎಸ್.ಡಿ. ಸೈಗಾವಿ ಕಾರ್ಯಕ್ರಮ ನಿರೂಪಿಸಿದರು.