ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಸಮಾಜ ಬಲಾಢ್ಯವಾಗಲು ಕೇವಲ ಆರ್ಥಿಕ ಸ್ಥಾನಮಾನವೊಂದೇ ಮಾನದಂಡವಲ್ಲ. ಬದಲಿಗೆ ಸಮುದಾಯದಲ್ಲಿನ ಸಂಸ್ಕಾರ ಹಾಗೂ ಶಿಕ್ಷಣದ ಪ್ರಸರಣದಿಂದ ಸ್ವಸ್ಥ್ಯ ಸಮಾಜ ನಿರ್ಮಾಣಗೊಳ್ಳುತ್ತದೆಂದು ಜಮಖಂಡಿ ಬಿಎಲ್‌ಡಿಇ ಕಾನೂನು ಮಹಾವಿದ್ಯಾಲಯದ ಉಪನ್ಯಾಸಕರಾದ ಭೀಮಾ ಮಾಳಶೆಟ್ಟಿ ಹೇಳಿದರು.ರಬಕವಿ-ಬನಹಟ್ಟಿ ತಾಲೂಕು ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಗಣ್ಯರೊಡನೆ ಚಾಲನೆ ನೀಡಿ ಮಾತನಾಡಿದ ಅವರು, ಸಂಸ್ಕೃತಿರಹಿತ ಬದುಕು ನಿಸ್ಸಾರ ಹಣ್ಣಿನಂತೆ. ಸಂಸ್ಕೃತಿ ಮತ್ತು ಸಾಮಾಜಿಕ ಸ್ಥಿತಿವಂತಿಕೆ ಹೆಚ್ಚಿಸಲು ಶರಣ ಸಾಹಿತ್ಯದ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಎಲ್ಲರ ಜೀವನ ಬಂಗಾರವಾಗುವುದು. ಬಣಜಿಗ ಸಂಸ್ಕೃತಿ ಶರಣ ಸಂಸ್ಕೃತಿಯ ಜೀವಾಳವಾಗಿದ್ದು, ಬಣಜಿಗರು ಎಲ್ಲರೊಡನೆ ಸೌಹಾರ್ದಯುತ ಸಂಬಂಧಗಳನ್ನು ಹೊಂದಿದ್ದು, ವಣಿಕ ವೃತ್ತಿಯೊಡನೆ ಹಣಗಳಿಕೆಯಷ್ಟೇ ಅಲ್ಲದೇ ಎಲ್ಲರಿಗೂ ಸಹಾಯಹಸ್ತ ನೀಡುವ ಸಮಾಜವಾಗಿದೆ. ಸಹಕಾರ ಮತ್ತು ಸೌಹಾರ್ದತೆ ಬಣಜಿಗರಿಗೆ ರಕ್ತಗತ ಗುಣವಾಗಿದ್ದು, ನಮ್ಮ ವಣಿಕ ವೃತ್ತಿಯತ್ತ ಯುವಕರನ್ನು ಆಕರ್ಷಿಸುವತ್ತ ನಮ್ಮ ಕುಲದ ವೃತ್ತಿ ನಾಶವಾಗದಂತೆ ಹಿರಿಯರು ನೋಡಿಕೊಳ್ಳಬೇಕಿದೆ ಎಂದರು.
ಕರ್ನಾಟಕ ರಾಜ್ಯ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ರೂಡಗಿ ಮಾತನಾಡಿ, ನಮ್ಮ ಸಮಾಜದ ಕುಲಕಸಬು ಇಂದು ಬೇರೆ ರಾಜ್ಯಗಳ ವಲಸಿಗರ ಕೈವಶವಾಗುತ್ತಿದೆ. ನಮ್ಮ ಸಂತಾನಗಳು ಬೇರೆಯವರೆದುರು ಕೈಚಾಚಿ ನೌಕರಿಯತ್ತ ಆಕರ್ಷಿತರಾಗುತ್ತಿದ್ದು, ಸ್ವಕುಲದ ಉದ್ಯೋಗ ಪತನದ ಅಂಚಿಗೆ ತಲುಪಿದ್ದು, ಇದನ್ನು ತಡೆಯಲು ನಾವು ನಮ್ಮ ಮಕ್ಕಳಿಗೆ ವ್ಯಾಪಾರಿ ಮನೋಭಾವನೆ ಬಾಲ್ಯದಲ್ಲೇ ಬೆಳೆಸಬೇಕೆಂದರು.ಗದಗ ಜಿಲ್ಲೆಯ ಪ್ರಧಾನ ಹಿರಿಯ ನ್ಯಾಯಾಧೀಶ ಜಿ.ಆರ್.ಶೆಟ್ಟರ ಮಾತನಾಡಿ, ಬಣಜಿಗರು ಸ್ವಾಭಿಮಾನಿ ಜನಾಂಗವಾಗಿದ್ದು, ಬಸವಾನುಯಾಯಿ ಸಮುದಾಯ ಇಂದು ಆಧುನಿಕತೆಯ ಸ್ಪರ್ಶದಿಂದ ಮಕ್ಕಳಿಗೆ ಪಾರಂಪರಿಕ ವಿಧಿ-ವಿಧಾನಗಳನ್ನು ಹಾಗೂ ಸಾಂಸ್ಕೃತಿಕ ಆಚರಣೆಗಳನ್ನು ಕಡ್ಡಾಯಗೊಳಿಸದೇ ಇರುವುದರಿಂದ ಯುವ ಜನತೆ ನಮ್ಮತನದಿಂದ ದೂರವಾಗುತ್ತಿದ್ದಾರೆಂದು ವಿಷಾದಿಸಿದರು.
ತಹಸೀಲ್ದಾರ್ ಗಿರೀಶ ಸ್ವಾದಿ ಮಾತನಾಡಿ, ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸುವುದೆಂದರೆ ನಮ್ಮನ್ನು ನಾವೇ ಗೌರವಿಸಿಕೊಂಡಂತೆ. ಪ್ರತಿಭೆಗಳಿಗೆ ಪ್ರೋತ್ಸಾಹ ದೊರೆತಲ್ಲಿ ಅವು ಸಮಾಜದ ಮತ್ತು ದೇಶದ ಭವಿತವ್ಯದ ನೈಜ ಆಸ್ತಿಯಾಗುತ್ತವೆ ಎಂದರು. ಸಮಾಜದ ಜಿಲ್ಲಾಧ್ಯಕ್ಷ ಹೊಳಬಸು ಬಾಳಶೆಟ್ಟಿ ಸಂಘಟನೆಗಳಿಂದ ಸಮಾಜ ಬಲಿಷ್ಠವಾಗುತ್ತದೆ. ವೀರಶೈವ ಲಿಂಗಾಯತ ಧರ್ಮದಡಿ ಏಕತ್ರವಾಗಿದ್ದ ಕಾಲದಲ್ಲೇ ಇತರೆ ಸಮುದಾಯಗಳು ಸಂಘಟಿತರಾದ ಬಳಿಕ ಅನಿವಾರ್ಯವಾಗಿ ನಾವೂ 2004ರಲ್ಲಿ ಪ್ರತ್ಯೇಕ ಸಂಘ ಸ್ಥಾಪಿಸಬೇಕಾಯಿತು. ಮಕ್ಕಳಿಗೆ ಕಾಯಕ ಸಂಸ್ಕೃತಿ ಕಲಿಸುವ ಮೂಲಕ ನಮ್ಮ ವ್ಯಾಪಾರ ಕ್ಷೇತ್ರವನ್ನು ಕಾಪಾಡಬೇಕಿದೆ ಎಂದರು.
ವಿಶೇಷ ಸಾಧಕರಿಗೆ, ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ, ವೈದ್ಯಕೀಯ ಸೇರಿ ವಿವಿಧ ರಂಗಗಳಲ್ಲಿ ಸಾಧಿಸಿದವರನ್ನು ಸನ್ಮಾನಿಸಲಾಯಿತು.
ತಾಲೂಕಾದ್ಯಕ್ಷ ಈಶ್ವರ ಬಿದರಿ, ಶಿವಾನಂದ ಬಿದರಿ, ಗಿರೀಶ ಮುತ್ತೂರ, ಸೋಮಶೇಖರ ಕೊಟ್ರಶೆಟ್ಟಿ, ಬಸವರಾಜ ತೆಗ್ಗಿ, ಕಲ್ಲಪ್ಪ ತಂಬಾಕು, ಬಶೆಟ್ಟೆಪ್ಪ ಕುಂಚನೂರ, ಮಹಾಲಿಂಗಪ್ಪ ಕುಳ್ಳೊಳ್ಳಿ, ಚನ್ನಬಸಪ್ಪ ಹೊಸೂರ, ಮಲ್ಲಿಕಾರ್ಜುನ ನಾಶಿ, ಮಲ್ಲಿಕಾರ್ಜುನ ಹುಲಗಬಾಳಿ, ಶಂಕರ ಬಟಕುರ್ಕಿ, ಚಂದ್ರಶೇಖರ ಹುಲಗಬಾಳಿ, ಮಹಿಳಾ ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.ಎಂ.ಎಸ್.ಗಡನ್ನವರ ಪ್ರಾರ್ಥಿಸಿದರು. ವಿಜಯಕುಮಾರ ಹಲಕುರ್ಕಿ ಸ್ವಾಗತಿಸಿದರು. ಗಿರೀಶ ಮುತ್ತೂರ ಪ್ರಾಸ್ತಾವಿಕ ಮಾತುಗಳಾಡಿದರು. ಉಮೆಶ ಹನಗಂಡಿ ಅತಿಥಿಗಳನ್ನು ಸನ್ಮಾನಿಸಿದರು. ರವೀಂದ್ರ ಅಷ್ಟಗಿ, ವಿಜಯಕುಮಾರ ಹಲಕುರ್ಕಿ ನಿರೂಪಿಸಿದರು. ಈರಣ್ಣಾ ಜಿಗಜಿನ್ನಿ ವಂದಿಸಿದರು.