ದೇವಸ್ಥಾನಕ್ಕಿಂತ ಗ್ರಂಥಾಲಯ ನಿರ್ಮಾಣ ಕಾರ್ಯ ದೊಡ್ಡದು: ಚಂದ್ರಶೇಖರ ಅರಭಾಂವಿ

| Published : Jan 04 2025, 12:32 AM IST

ದೇವಸ್ಥಾನಕ್ಕಿಂತ ಗ್ರಂಥಾಲಯ ನಿರ್ಮಾಣ ಕಾರ್ಯ ದೊಡ್ಡದು: ಚಂದ್ರಶೇಖರ ಅರಭಾಂವಿ
Share this Article
  • FB
  • TW
  • Linkdin
  • Email

ಸಾರಾಂಶ

ಕಣ್ಣಿಗೆ ಕಾಣದ ದೇವರ ಗುಡಿಗಳಿಗೆ ದಾನ ಮಾಡುವುದಕ್ಕಿಂತ ಕಣ್ಣಿಗೆ ಕಾಣುವ ಮಕ್ಕಳ ಕಲಿಕೆಗೆ ಉಪಯೋಗವಾಗುವ ಗ್ರಂಥಾಲಯ ಮಾಡಿಕೊಟ್ಟಿರುವ ರಾಮಗೌಡ ಪಾಟೀಲ ದಂಪತಿ ಕಾರ್ಯ ಶ್ಲಾಘನೀಯವಾದುದು ಎಂದು ಕರ್ನಾಟಕ ರಾಜ್ಯ ನಿವೃತ್ತ ಶಿಕ್ಷಕರ ಸಂಘದ ರಾಜ್ಯ ಸಂಚಾಲಕ ಚಂದ್ರಶೇಖರ ಅರಭಾಂವಿ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಕಣ್ಣಿಗೆ ಕಾಣದ ದೇವರ ಗುಡಿಗಳಿಗೆ ದಾನ ಮಾಡುವುದಕ್ಕಿಂತ ಕಣ್ಣಿಗೆ ಕಾಣುವ ಮಕ್ಕಳ ಕಲಿಕೆಗೆ ಉಪಯೋಗವಾಗುವ ಗ್ರಂಥಾಲಯ ಮಾಡಿಕೊಟ್ಟಿರುವ ರಾಮಗೌಡ ಪಾಟೀಲ ದಂಪತಿ ಕಾರ್ಯ ಶ್ಲಾಘನೀಯವಾದುದು ಎಂದು ಕರ್ನಾಟಕ ರಾಜ್ಯ ನಿವೃತ್ತ ಶಿಕ್ಷಕರ ಸಂಘದ ರಾಜ್ಯ ಸಂಚಾಲಕ ಚಂದ್ರಶೇಖರ ಅರಭಾಂವಿ ಹೇಳಿದರು.

ಬುಧವಾರ ತಾಲೂಕಿನ ಉಮರಾಣಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ದಾನಿ ರಾಮಗೌಡ ಪಾಟೀಲ ದಂಪತಿ ಮಾಡಿಕೊಟ್ಟಿರುವ ಗ್ರಂಥಾಲಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ವಿದ್ಯಾರ್ಥಿಗಳು ಕ್ರಿಯಾಶೀಲರಾಗಬೇಕು. ಈ ಗ್ರಂಥಾಲಯದ ಸದ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದರು.

ಶಾಲೆಗಳು ಮತ್ತು ಗ್ರಂಥಾಲಯ ಇರುವ ಗ್ರಾಮಗಳ ಮಕ್ಕಳು ಉತ್ತಮ ಶಿಕ್ಷಣದ ಜೊತೆಗೆ ಒಳೆಯ ಸಂಸ್ಕಾರವಂತರಾಗಿ ಮುಂದುವರಿಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ದಾನಿ ರಾಮಗೌಡ ಪಾಟೀಲ ಮಾತನಾಡಿ, ನಮ್ಮ ಹಳ್ಳಿಯ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಶಾಲೆಗೆ ಸುಮಾರು ₹1.50 ಲಕ್ಷ ವೆಚ್ಚದಲ್ಲಿ ಗ್ರಂಥಾಲಯ ಮಾಡಿಕೊಟ್ಟಿದ್ದು, ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಈ ಗ್ರಂಥಾಲಯದ ಲಾಭ ಪಡೆದುಕೊಳ್ಳಬೇಕು. ಜೀವನದಲ್ಲಿ ಉನ್ನತ ಸಾಧನೆ ಮಾಡಲು ಮುಂದಾಗಬೇಕು ಎಂದು ಹೇಳಿದರು.

ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಪೂಜೇರಿ ಅಧ್ಯಕ್ಷತೆ ವಹಿಸಿ, ಎಲ್ಲ ದಾನಗಳಲ್ಲಿ ವಿದ್ಯಾದಾನ ಶ್ರೇಷ್ಠವಾಗಿದೆ. ಇಂದು ನಮ್ಮೂರಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಗ್ರಂಥಾಲಯದ ಕೊರತೆ ಇತ್ತು. ಅದಕ್ಕಾಗಿಯೇ ದಾನಿ ರಾಮಗೌಡ ಪಾಟೀಲರು ನಮ್ಮ ಶಾಲೆಗೆ ಉತ್ತಮ ಸುಸಜ್ಜಿತ ಗ್ರಂಥಾಲಯ ಮಾಡಿಕೊಟ್ಟಿದ್ದಕ್ಕೆ ಅವರಿಗೆ ಶಾಲೆಯ ಶಿಕ್ಷಕರು, ಮಕ್ಕಳು ಮತ್ತು ಗ್ರಾಮಸ್ಥರ ಪರವಾಗಿ ಅಭಿನಂದಿಸಿದರು.ಮುಖ್ಯಶಿಕ್ಷಕ ಸಿ.ಎಸ್. ಹತ್ತಿ ಮತ್ತು ಸಚೀನ ಕುಂಬಾರ ಮಾತನಾಡಿದರು. ಗ್ರಂಥಾಲಯ ದಾನಿ ರಾಮನಗೌಡ ಪಾಟೀಲ ಮತ್ತು ಶೈಲಾ ಪಾಟೀಲ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು.

ಎಸ್‌ಡಿಎಂಸಿ ಅಧ್ಯಕ್ಷ ಭಾಗನಗೌಡ ಪಾಟೀಲ, ಸಂಜು ದಿವಟೆ, ಪ್ರಶಾಂತ ಭೀಮನಾಯಿಕ, ಮುಖ್ಯಶಿಕ್ಷಕ ವಿ.ಎಸ್. ಹುಲ್ಲೋಳಿ, ಗ್ರಾಪಂ ಮಾಜಿ ಅಧ್ಯಕ್ಷ ಮುರುಗೆಪ್ಪ ಅಡಿಸೇರಿ, ಧನಪಾಲ ಭೀಮನಾಯಿಕ ಇದ್ದರು. ಬಿ.ಡಿ. ರಾಜಗೋಳಿ ಸ್ವಾಗತಿಸಿದರು. ಆರ್.ಎಂ. ಗೌಡರ ನಿರೂಪಿಸಿದರು. ಚೈತ್ರಾ ಭಜಂತ್ರಿ ವಂದಿಸಿದರು.