ಸಾರಾಂಶ
ಕನ್ನಡಪ್ರಭವಾರ್ತೆ ಚಿತ್ರದುರ್ಗ
ಶಾಂತಿಯ ಸಂದೇಶ ಸಾರಿದ ರಾಷ್ಟ್ರಪಿತ ಮಹಾತ್ಮಗಾಂಧಿಯನ್ನು ಗುಂಡಿಕ್ಕಿ ಕೊಂದ ವ್ಯಕ್ತಿಯ ಗುಡಿ ಕಟ್ಟುವ ಹುನ್ನಾರ ನಡೆಯುತ್ತಿರುವುದು ಅಪಾಯಕಾರಿ ವಿದ್ಯಮಾನವೆಂದು ಚಿಂತಕ ಜಗಳೂರು ಯಾದವರೆಡ್ಡಿ ವಿಷಾದ ವ್ಯಕ್ತಪಡಿಸಿದರು.ಜಿಲ್ಲೆಯ ವಿವಿಧ ಜನಪರ ಸಂಘಟನೆಗಳ ವತಿಯಿಂದ ಮಂಗಳವಾರ ನಗರದ ಒನಕೆ ಓಬವ್ವ ವೃತ್ತದಲ್ಲಿ ಹಮ್ಮಿಕೊಳ್ಳಲಾದ ಸೌಹಾರ್ದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸತ್ಯ, ಅಹಿಂಸೆ ಮೂಲಕ ಜಗತ್ತಿಗೆ ಸಂದೇಶ ಸಾರಿದ ಗಾಂಧೀಜಿ ಭಾರತೀಯ ಸಂದರ್ಭದ ಸಾಕ್ಷಿ ಪ್ರಜ್ಞೆಯಾಗಿದ್ದಾರೆ. ಅಂತಹ ಗಾಂಧಿಯ ಗುಂಡಿಕ್ಕಿ ಕೊಂದವನ ಆರಾಧನೆ ಮಾಡುವ ಸಂಸ್ಕೃತಿ ಜಾಗತಿಕ ಮಟ್ಟದಲ್ಲಿ ಭಾರತವ ಕುಬ್ಜವನ್ನಾಗಿಸಿದೆ ಎಂದರು.
ಜಾಗತಿಕವಾಗಿ ಭಾರತ ಬಹುತ್ವಕ್ಕೆ ಹೆಸರಾಗಿದೆ. ವೈವಿಧ್ಯಮಯ ಸಂಸ್ಕೃತಿ ನಮ್ಮದು. ಎಲ್ಲಾ ಜಾತಿ, ಧರ್ಮದವರು ಸಮಾನವಾಗಿ ಬದುಕಲು ಸಂವಿಧಾನ ರಕ್ಷಣೆ ನೀಡಿದೆ. ಬಹುತ್ವವನ್ನು ವಿರೋಧಿಸಿದರೆ ಸಂವಿಧಾನವನ್ನು ವಿರೋಧಿಸಿದಂತೆ. ಆದರೆ ಕೆಲವು ಶಕ್ತಿಗಳು ಭಾರತದಲ್ಲಿ ಏಕ ಸಂಸ್ಕೃತಿ, ಏಕ ಭಾಷೆ, ಏಕ ಧರ್ಮ ತರಲು ಹೊರಟಿದೆ. ಇದರಿಂದ ವೈವಿಧ್ಯಮಯ ಸಂಸ್ಕೃತಿ ನಾಶವಾಗಿ ಸಂಘರ್ಷಕ್ಕೆ ಎಡೆಮಾಡಿಕೊಟ್ಟಂತಾಗುತ್ತದೆ. ಸಹಿಷ್ಣುತೆ, ಸಹಬಾಳ್ವೆಯಿಂದ ಎಲ್ಲರೂ ಬದುಕಬೇಕು ಎಂದರು.ರಾಜ್ಯದಲ್ಲಿ ಬರಗಾಲ ತಲೆದೋರಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಅನ್ನದಾತನ ನೆರವಿಗೆ ಬರಬೇಕಾದದ್ದು ರಾಜಕೀಯ ಪಕ್ಷಗಳ ಕರ್ತವ್ಯ. ಇಂತಹ ಸಂದರ್ಭದಲ್ಲಿ ಧರ್ಮದ ಅಮಲನ್ನು ತಲೆಗೇರಿಸಿ ಕೊಂಡಿರುವ ಬಿಜೆಪಿಯವರು ಮಂಡ್ಯ ಜಿಲ್ಲೆ ಕೆರಗೋಡಿನಲ್ಲಿ ಹನುಮ ಧ್ವಜವನ್ನು ಇಳಿಸಿದ್ದಾರೆನ್ನುವುದನ್ನೇ ದೊಡ್ಡ ರಾದ್ಧಾಂತವನ್ನಾಗಿ ಮಾಡಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊರಟಿದ್ದಾರೆ. ಧ್ವಜ ಇಳಿಸಿರುವ ಸಂಗತಿ ವಿವಾದವನ್ನಾಗಿಸುವುದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸಿದರು. ದೇಶದಲ್ಲಿ ಅಭಿವೃದ್ಧಿ ರಾಜಕಾರಣ ಮರೆಯಾಗುತ್ತಿದೆ. ಧರ್ಮದ ಹೆಸರಲ್ಲಿ ಮನುಷ್ಯರ ಒಡೆದಾಳುವ ಪ್ರವೃತ್ತಿಗಳ ರಾರಾಜಿಸುತ್ತಿವೆ. ಮನುಷ್ಯರನ್ನು ಪ್ರೀತಿಸುವ ಮನೋಭಾವಗಳು ಎಲ್ಲೆಡೆ ನೆಲೆಗೊಳ್ಳಬೇಕು. ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ, ಸಾಧುಸಂತರು ಹುಟ್ಟಿದ ನೆಲದಲ್ಲಿ ಸೌಹಾರ್ದತೆ ನೆಲೆಯೂರಬೇಕೆಂದು ಯಾದವರೆಡ್ಡಿ ಹೇಳಿದರು.
ಸಿಐಟಿಯು ಜಿಲ್ಲಾ ಸಹ ಸಂಚಾಲಕ ಸಿ.ಕೆ.ಗೌಸ್‍ಪೀರ್, ಕರ್ನಾಟಕ ಜನಶಕ್ತಿಯ ಟಿ.ಶಫಿವುಲ್ಲಾ ಸೇರಿದಂತೆ ವಿವಿಧ ಸಂಘಟನೆಗಳು ಸೌಹಾರ್ಧ ಸಮಾವೇಶದಲ್ಲಿ ಭಾಗವಹಿಸಿದ್ದರು.