ಸಾರಾಂಶ
ದುಶ್ಚಟಗಳು ವ್ಯಕ್ತಿಯ ಬದುಕು, ಕುಟುಂಬ ನಾಶ ಮಾಡುವುದಲ್ಲದೆ ಸಮಾಜದ ಮೇಲೂ ನೇರ ಪರಿಣಾಮ ಬೀರುತ್ತದೆ. ಮಾದಕ ವಸ್ತು ಸೇವನೆ ವ್ಯಕ್ತಿಯ ಮಿದುಳು, ದೈಹಿಕ, ಮಾನಸಿಕ ಆರೋಗ್ಯ ಹಾಗೂ ಸಾಮಾಜಿಕ ಬದುಕಿಗೂ ಮಾರಕವಾಗಿದೆ ಎಂದು ಕ್ರೈಂ ವಿಭಾಗದ ಪಿಎಸ್ಐ ಮಧು ಎಲ್. ಹೇಳಿದರು.
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ದುಶ್ಚಟಗಳು ವ್ಯಕ್ತಿಯ ಬದುಕು, ಕುಟುಂಬ ನಾಶ ಮಾಡುವುದಲ್ಲದೆ ಸಮಾಜದ ಮೇಲೂ ನೇರ ಪರಿಣಾಮ ಬೀರುತ್ತದೆ. ಮಾದಕ ವಸ್ತು ಸೇವನೆ ವ್ಯಕ್ತಿಯ ಮಿದುಳು, ದೈಹಿಕ, ಮಾನಸಿಕ ಆರೋಗ್ಯ ಹಾಗೂ ಸಾಮಾಜಿಕ ಬದುಕಿಗೂ ಮಾರಕವಾಗಿದೆ ಎಂದು ಕ್ರೈಂ ವಿಭಾಗದ ಪಿಎಸ್ಐ ಮಧು ಎಲ್. ಹೇಳಿದರು.ಪಟ್ಟಣದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಮಾದಕ ದ್ರವ್ಯ ವ್ಯಸನ ಮುಕ್ತ ದಿನ ಪ್ರತಿಜ್ಞ ಬೋಧನೆ ಕಾರ್ಯಕ್ರಮದಲ್ಲಿ ಮಾತನಾಡಿ, ಮಾದಕ ದ್ರವ್ಯ ವಿತರಿಸುವ ಜಾಲ ಮಟ್ಟಹಾಕಲು ಕಾನೂನಿನೊಂದಿಗೆ ಸಹಕರಿಸುವುದು, ಮಾದಕ ವಸ್ತುಗಳನ್ನು ಬಳಸುತ್ತಿರುವವರಿಗೆ ಅವುಗಳ ಮಾರಕ ಪರಿಣಾಮದ ಕುರಿತು ತಿಳಿವಳಿಕೆ ನೀಡಿ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಹಾಗೂ ಯುವ ಜನತೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಪ್ರಾಂಶುಪಾಲರಾದ ಎಸ್.ಎಲ್. ಜೋಡಟ್ಟಿ ಹಾಗೂ ಅಧ್ಯಕ್ಷ ಮಹೇಶ್ ಜಿಡ್ಡಿಮನಿ ಮಾತನಾಡಿ, ಅಮಲು ಸೇವನೆ ಒಂದು ರೀತಿಯ ಫ್ಯಾಷನ್ ಎಂದು ತಿಳಿದ ಯುವಕರು ಮಾದಕ ವಸ್ತುಗಳತ್ತ ಆಕರ್ಷಿತರಾಗಿ ನಿರಂತರ ಉಪಯೋಗದಲ್ಲಿ ತೊಡಗುತ್ತಾರೆ. ತಿಳಿವಳಿಕೆ ತರಗತಿ ಆಯೋಜನೆಯಿಂದ ಜಾಗೃತಿ ಮೂಡಿಸಲು ಸಾಧ್ಯ. ಜೀವನದ ಗುರಿ ಹಾಗೂ ಹಾದಿ ತಪ್ಪಿಸುವ ಮಾದಕ ವ್ಯಸನ ಹಾಗೂ ವ್ಯಸನಿಗಳಿಂದ ದೂರವಿದ್ದು, ಉತ್ತಮ ಹವ್ಯಾಸ ಬೆಳೆಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ಹೇಳಿದರು.ಪಿಎಸ್ಐ ಕಿರಣ್ ಸತ್ತಿಗೇರಿ ವಿವಿಧ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಮಾತನಾಡಿದರು.ಪೊಲೀಸ್ ಸಿಬ್ಬಂದಿಗಳಾದ ವೈ.ವೈ. ಗಚ್ಚನ್ನವರ, ಎಂ.ಎಸ್. ಲಮಾಣಿ, ಬಿ.ಜಿ. ದೇಸಾಯಿ, ಎಂ.ಎಸ್. ಸನ್ನಕ್ಕಿ, ಬಿ.ಎನ್. ಅಜ್ಜನಗೌಡ, ಎ.ಎಸ್. ಪಾಟೀಲ, ಈರಪ್ಪ ತೇಲಿ, ಎಸ್.ಎಸ್. ಸರೂರ, ಜಿ.ಎಸ್. ಕಳ್ಳಿಗುದ್ದಿ ಸೇರಿದಂತೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದ್ದರು. ಅತಿಥಿ ಉಪನ್ಯಾಸಕಿ ವಿಶಾಲಾಕ್ಷಿ ನಿರೂಪಿಸಿ, ವಂದಿಸಿದರು.