ಸಾರಾಂಶ
ಯಲ್ಲಾಪುರ: ಮಹಿಳೆಯರು ಇಂದಿನ ಬದಲಾದ ಸಂದರ್ಭದಲ್ಲಿ ತಮ್ಮ ಧೈರ್ಯ, ಇಚ್ಛಾಶಕ್ತಿ ಹಾಗೂ ಸಾಧನೆಗಳಿಂದ ಸಮಾಜದಲ್ಲಿ ಆರ್ಥಿಕವಾಗಿ ಸಬಲರಾಗಿ ಸಮಾಜಕ್ಕೆ ಕೊಡುಗೆ ನೀಡುವ ಹಂತವನ್ನು ತಲುಪಿದ್ದಾರೆ ಎಂದು ಶಾಸಕ ಶಿವರಾಮ ಹೆಬ್ಬಾರ ತಿಳಿಸಿದರು.
ಪಟ್ಟಣದ ಎಪಿಎಂಸಿ ರೈತ ಸಭಾಭವನದಲ್ಲಿ ಜು. ೩೦ರಂದು ಪ್ರಗತಿ ಸಂಜೀವಿನಿ ರೈತ ಮಹಿಳಾ ಉತ್ಪಾದಕರ ಕಂಪನಿ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.ಮಹಿಳೆಯರು ಸಬಲರಾಗುತ್ತಿದ್ದಾರೆಂದರೆ ಸಶಕ್ತ ಸಮಾಜ ನಿರ್ಮಾಣವಾಗಿದೆ ಎಂದರ್ಥ ಎಂದ ಅವರು, ಸ್ತ್ರೀ ಶಕ್ತಿ ಸಂಘಟನೆಗಳು ಕೋಟ್ಯಂತರ ರು. ಸಾಲ ಪಡೆದು ಶೇ. ೯೯ರಷ್ಟು ವಸೂಲಾತಿ ಆಗುತ್ತಿರುವುದು ಆರ್ಥಿಕ ವ್ಯವಹಾರ ಸುಸ್ಥಿರವಾಗುವುದನ್ನು ನೋಡಬಹುದು. ಮಹಿಳೆಯರಿಗೆ ನೀಡುವ ಸಾಲ ಪೂರ್ಣ ಪ್ರಮಾಣದಲ್ಲಿ ಸದುದ್ದೇಶಕ್ಕೆ ಬಳಕೆಯಾಗುತ್ತದೆ ಎಂದು ಶ್ಲಾಘಿಸಿದರು.
ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ, ಮಹಿಳೆಯೇ ಆಗಿರುವ ನಮ್ಮೆಲ್ಲರ ತಾಯಿ ಸದಾ ಪೂಜನೀಯ. ಇಂದು ಮಹಿಳೆಯರು ದೇಶದ ಎಲ್ಲ ಪ್ರಮುಖ ಕ್ಷೇತ್ರಗಳಲ್ಲಿ ಸಾಧನೆ ಮಾಡಿ, ಮುಂಚೂಣಿಯ ಹಂತ ತಲುಪಿದ್ದು, ಪುರುಷರೂ ಹೊಟ್ಟೆಕಿಚ್ಚು ಪಡುವಂತಹ ವಾತಾವರಣ ನಿರ್ಮಾಣಗೊಂಡಿದೆ. ಮಹಿಳೆಯರು ತಮ್ಮ ಸಾಧನೆಯ ವಿವಿಧ ಹಂತಗಳಲ್ಲಿ ಉತ್ತುಂಗ ತಲುಪಿದ್ದು, ಅವರ ಸಂಘಟನೆಯೂ ಬಲಶಾಲಿಯಾಗಿದೆ ಎಂದರು.ಪ್ರಗತಿ ಸಂಜೀವಿನಿ ಕಂಪನಿಯ ಅಧ್ಯಕ್ಷೆ ನಿರ್ಮಲಾ ನಾಯ್ಕ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪಿ.ಎಂ. ಪೂಜಾರ್, ತಾಪಂ ಆಡಳಿತಾಧಿಕಾರಿ ನಟರಾಜ ಟಿ.ಎಚ್., ತೋಟಗಾರಿಕಾ ಇಲಾಖೆಯ ತಾಲೂಕು ನಿರ್ದೇಶಕ ಸತೀಶ ಹೆಗಡೆ, ಪಶುಸಂಗೋಪನಾ ಇಲಾಖೆಯ ನಿರ್ದೇಶಕ ಡಾ. ಸುಬ್ರಾಯ ಭಟ್ಟ, ಕೃಷಿ ಇಲಾಖೆಯ ನಿರ್ದೇಶಕ ನಾಗರಾಜ ನಾಯ್ಕ, ಅನುಪಮಾ ಪೂಜಾರಿ ತಮ್ಮ ಇಲಾಖೆಗಳಲ್ಲಿ ಮಹಿಳಾ ಸ್ವಸಹಾಯ ಸಂಘಗಳಿಗೆ ದೊರಕಬಹುದಾದ ಯೋಜನೆಗಳ ಲಾಭವನ್ನು ವಿವರಿಸಿದರು.
ಉಮ್ಮಚಗಿ ಗ್ರಾಪಂ ಅಧ್ಯಕ್ಷ ಕುಪ್ಪಯ್ಯ ಪೂಜಾರಿ, ಹಾಸಣಗಿ ಗ್ರಾಪಂ ಅಧ್ಯಕ್ಷೆ ವಿನೋದಾ ಬಿಲ್ಲವ, ಸೇರಿದಂತೆ ತಾಲೂಕಿನ ವಿವಿಧ ಗ್ರಾಪಂಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು, ತಾಲೂಕಿನ ೧೫ ಗ್ರಾಪಂ ವ್ಯಾಪ್ತಿಯ ಸಂಜೀವಿನಿ ಗ್ರಾಪಂ ಒಕ್ಕೂಟದ ಸದಸ್ಯರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ೧೫ ಆಯ್ದ ಫಲಾನುಭವಿಗಳಿಗೆ ಹೈನುಗಾರಿಕೆಗೆ ಉಪಯುಕ್ತವಾಗುವ ಕಿಟ್‌ಗಳನ್ನು ವಿತರಿಸಲಾಯಿತು.ಮೇಘನಾ ನಾಯ್ಕ ಸಂಗಡಿಗರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಮಹಾಲಕ್ಷ್ಮೀ ನಾಯ್ಕ ಸ್ವಾಗತಿಸಿದರು. ತೇಜಸ್ವಿನಿ ಭಟ್ಟ ನಿರ್ವಹಿಸಿದರು. ತಾಪಂ ನಿರ್ವಹಣಾಧಿಕಾರಿ ಎನ್.ಆರ್. ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಶ್ವಿನಿ ನಾಯ್ಕ ವಂದಿಸಿದರು. ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಪ್ರದೇಶಗಳಿಂದ ಆಗಮಿಸಿದ ೬೦೦ಕ್ಕೂ ಅಧಿಕ ಸಂಖ್ಯೆಯ ಮಹಿಳೆಯರು ಉಪಸ್ಥಿತರಿದ್ದರು.