ಸಾರಾಂಶ
ಗೊಲ್ಲರ ಸಂಘದ ಸಮುದಾಯ ಭವನ ನಿರ್ಮಾಣದ ಹಿಂದಿನ ದಂಧೆ । ಅನುದಾನ ಅಪವ್ಯಯಕ್ಕೆ ಸಂಘಟಿತ ಯತ್ನ । ಅಕ್ರಮ ಹಾದಿ ತುಳಿದು ನಂತರ ಸಕ್ರಮದ ಯೋಚನೆ.ಚಿಕ್ಕಪ್ಪನಹಳ್ಳಿ ಷಣ್ಮುಖ
ಕನ್ನಡಪ್ರಭ ವಾರ್ತೆ ಚಿತ್ರದುರ್ಗನಗರ ಪ್ರದೇಶದಲ್ಲಿ ಯಾವುದೇ ಕಟ್ಟಡ ನಿರ್ಮಾಣ ಮಾಡಲು ಮುಂದಾಗುವುದಕ್ಕಿಂತ ಮೊದಲು ನಗರ ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಪಡೆಯುವುದು ಕಡ್ಡಾಯ. ಸಿವಿಲ್ ಎಂಜಿನಿಯರ್‌ರೋರ್ವರು ತಯಾರು ಮಾಡಿದ ನೀಲ ನಕ್ಷೆಯನ್ನು ನಗರ ಸ್ಥಳೀಯ ಸಂಸ್ಥೆಗೆ ಸಲ್ಲಿಸಿದ ನಂತರ ಪರವಾನಿಗೆ ಪಡೆವ ಕೆಲಸ ಶುರವಾಗುತ್ತದೆ. ಈ ನೀಲನಕ್ಷೆ ಪ್ರಸ್ತಾವನೆ ತರುವಾಯ ಆನ್‌ಲೈನ್ ಮೂಲಕ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹೋಗಿ ಅಲ್ಲಿಂದ ಅನುಮತಿ ಪಡೆದು ವಾಪಸ್ಸು ನಗರಸಭೆಗೆ ಬರುತ್ತದೆ. ನಂತರ ಕಟ್ಟಡ ನೀಲನಕ್ಷೆ ನೋಡಿ ಶುಲ್ಕ ಪಾವತಿಸಿಕೊಂಡು ಒಂದು ವರ್ಷದ ಅವಧಿಯೊಳಗೆ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಳಿಸುವ ಹಾಗೂ ಪೂರ್ಣಗೊಂಡ ನಂತರ ಕಂಪ್ಲೀಷನ್ ಸರ್ಟಿಫಿಕೇಟ್ ಕೊಡಬೇಕೆಂಬ ನಿಬಂಧನೆ ವಿಧಿಸಲಾಗುತ್ತದೆ. ಕಟ್ಟಡ ನಿರ್ಮಾಣಕ್ಕೆ ನಗರ ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಪಡೆಯದ ಹೊರತು ಯಾವುದೇ ಕಾರಣದಿಂದ ಕಾಮಗಾರಿ ಆರಂಭಿಸುವಂತಿಲ್ಲ.
ಆದರೆ ಗೊಲ್ಲರ ಸಂಘದ ಸಮುದಾಯ ಭವನ ನಿರ್ಮಾಣದ ವಿಚಾರದಲ್ಲಿ ಎಲ್ಲ ನಿಯಮಾವಳಿಗಳು ಉಲ್ಲಂಘನೆಯಾಗಿವೆ. ಸಮುದಾಯ ಭವನ ನಿರ್ಮಾಣದ ಹೊಣೆ ಹೊತ್ತ ಸರ್ಕಾರದ ಅಂಗ ಸಂಸ್ಥೆ ನಿರ್ಮಿತಿ ಕೇಂದ್ರ ಸ್ವೇಚ್ಛಾಚಾರಿಯಾಗಿ ನಡೆದುಕೊಂಡಿದ್ದು ಎಲ್ಲವನ್ನು ಗಾಳಿಗೆ ತೂರಿದೆ. ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿಯ ಮೂರು ಕಂತುಗಳ ಅನುದಾನ ಬಿಡುಗಡೆಯಾದ ನಂತರವೇ ಸಮುದಾಯ ಭವನ ನಿರ್ಮಾಣದ ಪರವಾನಿಗೆಯನ್ನು ನಗರಸಭೆಯಿಂದ ಪಡೆಯಲಾಗಿದೆ.ಸಮುದಾಯ ಭವನ ನಿರ್ಮಾಣಕ್ಕೆ ಹಿಂದಿನ ಸಂಸದ ಎ.ನಾರಾಯಣಸ್ವಾಮಿ 2019-20ನೇ ಸಾಲಿನಲ್ಲಿ 25 ಲಕ್ಷ, 2021-22ನೇ ಸಾಲಿನಲ್ಲಿ ಮತ್ತೆ 25 ಲಕ್ಷ ಅನುದಾನ ನೀಡಿದ್ದಾರೆ. ಇದರ ನಡುವೆಯೇ 2019-20 ನೇ ಸಾಲಿನಲ್ಲಿ ರಾಜ್ಯ ಸಭಾ ಸದಸ್ಯ ಜೆ.ಸಿ.ಚಂದ್ರಶೇಖರ್ 20 ಲಕ್ಷ ನೀಡಿದ್ದಾರೆ. ಚಿತ್ರದುರ್ಗ ನಿರ್ಮಿತಿ ಕೇಂದ್ರಕ್ಕೆ 16-3-2022 ರಂದು 25 ಲಕ್ಷ ರು. ಹಾಗೂ 7 ತಿಂಗಳ ಅವಧಿಯಲ್ಲಿ ಅಂದರೆ ಅಕ್ಟೊಬರ್ 3, 2022ರಂದು ಮತ್ತೆ 25 ಲಕ್ಷ ಮೊತ್ತ ಸಂಸದ ಎ.ನಾರಾಯಣಸ್ವಾಮಿ ಅವರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಚಿತ್ರದುರ್ಗ ನಿರ್ಮಿತಿ ಕೇಂದ್ರಕ್ಕೆ ಜಮೆ ಆಗಿದೆ. ಕಟ್ಟಡ ನಿರ್ಮಾಣದ ಮುಂದುವರಿದ ಕಾಮಗಾರಿ ಹೆಸರಲ್ಲಿ ಅನುದಾನ ಬಿಡುಗಡೆಯಾಗಿದೆ.
ಅಚ್ಚರಿ ಎಂದರೆ 2023 ರ ಅಂತ್ಯಕ್ಕೆ ಯಾದವ ಸಂಘದಿಂದ ಸಮುದಾಯ ನಿರ್ಮಾಣ ಮಾಡುವ ಸಂಬಂಧ ಪರವಾನಿಗೆ ನೀಡುವಂತೆ ನಗರಸಭೆಗೆ ಅರ್ಜಿ ಸಲ್ಲಿಸಲಾಗಿದೆ. ಯಾದವ ಸಂಘದ ಕಾರ್ಯದರ್ಶಿ ಆನಂದ್ ಎಂಬುವರು ಅಕ್ಟೋಬರ್ 27,2023 ರಂದು ನೀಲ ನಕ್ಷೆ ಸಮೇತ ಚಿತ್ರದುರ್ಗ ನಗರಸಭೆಗೆ ಅರ್ಜಿ ಸಲ್ಲಿಸಿ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ಕೇಳಿದ್ದಾರೆ. 3,55,390 ರು. ಶುಲ್ಕ ಪಾವತಿಸಿಕೊಂಡ ನಗರಸಭೆ ಜನವರಿ 25, 2024 ರಂದು ಪರವಾನಿಗೆ ನೀಡಿದೆ. ಸಮುದಾಯ ಭವನದ ಎಡ ಹಾಗೂ ಬಲ ಭಾಗದಲ್ಲಿ ತಲಾ 5 ಮೀಟರ್, ಹಿಂಭಾಗದಲ್ಲಿ ಮೂರು ಮೀಟರ್, ಮುಂಭಾಗದಲ್ಲಿ 9.50 ಮೀಟರ್ ಜಾಗ ಬಿಟ್ಟು ಕಟ್ಟಡ ನಿರ್ಮಿಸಬೇಕೆಂಬ ನಿಬಂಧನೆ ವಿಧಿಸಲಾಗಿದೆ. 1 ವರ್ಷದ ಅವಧಿಗೆ ಮಾತ್ರ (17-11-2023 ರಿಂದ 16-11-2024 ವರೆಗೆ) ಈ ಪರವಾನಿಗೆ ಅನ್ವಯವಾಗುತ್ತದೆ. ಸಮುದಾಯ ಭವನ ನಿರ್ಮಾಣಕ್ಕೆ ಅಂದಿನ ಕೇಂದ್ರ ಸಚಿವ ಹಾಗೂ ಸಂಸದ ಎ.ನಾರಾಯಣಸ್ವಾಮಿ 18-8-2021 ಭೂಮಿ ಪೂಜೆ ನೆರವೇರಿಸಿದ್ದಾರೆ. ಭೂಮಿ ಪೂಜೆಗೂ, ಅನುದಾನ ಬಿಡುಗಡೆ, ಕಟ್ಟಡ ನಿರ್ಮಾಣದ ಪರವಾನಿಗೆಗೂ ಒಂದಕ್ಕೊಂದು ತಾಳೆಯಾಗುತ್ತಿಲ್ಲ.ಮಾಜಿ ಸಂಸದ ಎ.ನಾರಾಯಣಸ್ವಾಮಿ ಅವರ ಎರಡು ಕಂತು ಹಾಗೂ ಜಿ.ಸಿ.ಚಂದ್ರಶೇಖರ್ ಅವರ ಒಂದು ಕಂತು ಸೇರಿ ಒಟ್ಟು 70 ಲಕ್ಷ ರು. ಅನುದಾನ ಡಿಸೆಂಬರ್ 2022ರ ಒಳಗೆ ಚಿತ್ರದುರ್ಗ ನಿರ್ಮಿತಿ ಕೇಂದ್ರಕ್ಕೆ ಜಮೆ ಆಗಿದೆ. ಜಮೆ ಆದ ಒಂದು ವರ್ಷದ ನಂತರ ನಗರಸಭೆಯಿಂದ ಕಟ್ಟಡ ನಿರ್ಮಾಣದ ಪರವಾನಿಗೆ ಪಡೆಯಲಾಗಿದೆ. ಕಟ್ಟಡ ನಿರ್ಮಾಣದ ಪರಾನಿಗೆ ನವೀಕರಣಕ್ಕೆ ಬಂದರೂ ಕೇವಲ ಮೋಟು ಗೋಡೆ ಮಾತ್ರ ಗೋಚರಿಸಿದೆ. ಸರ್ಕಾರದ ಅಧೀನದ ಅಂಗ ಸಂಸ್ಥೆಯೊಂದು ಅನುದಾನ ಬಳಕೆ ವಿಚಾರದಲ್ಲಿ ಈ ಬಗೆಯ ಎಚ್ಚರ ತಪ್ಪಿದ ಹಾದಿ ತುಳಿಯಬಹುದೇ ಎಂಬ ಪ್ರಶ್ನೆ ಮೂಡಿದೆ. ಇದೊಂದು ರೀತಿ ಅಕ್ರಮ ಕಟ್ಟಡ ನಿರ್ಮಿಸಿ ನಂತರ ಸಕ್ರಮದ ಹಾದಿ ತುಳಿಯುವ ಹೆಜ್ಜೆಯಾಗಿದೆ.