ಸಾರಾಂಶ
ದೊಡ್ಡಬಳ್ಳಾಪುರ: ಕಟ್ಟಡ ನಿರ್ಮಾಣಕ್ಕೆ ನಗರಸಭೆ ಪರವಾನಗಿ ನೀಡಲು ಇರುವ ನಿಯಮ ಮಾರ್ಪಾಡು ಮಾಡಲು ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು ಸರ್ಕಾರಕ್ಕೆ ಮನವಿ ಮಾಡಬೇಕು ಎಂದು ದೊಡ್ಡಬಳ್ಳಾಪುರ ನಗರಸಭಾ ಸದಸ್ಯರು ಒತ್ತಾಯಿಸಿದ್ದಾರೆ.
ನಗರಸಭೆ ಅಧ್ಯಕ್ಷೆ ಕೆ.ಸುಮಿತ್ರಾ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಪಕ್ಷಾತೀತವಾಗಿ ಎಲ್ಲಾ ಸದಸ್ಯರು ಈ ಬಗ್ಗೆ ಚರ್ಚೆ ನಡೆಸಿದರು.ನಗರ ಸ್ಥಳೀಯ ಸಂಸ್ಥೆಗಳಿಂದ ಮಂಜೂರು ಮಾಡಲಾದ ಕಟ್ಟಡ ಪರವಾನಗಿ ಉಲ್ಲಂಘಿಸಿ ನಿರ್ಮಿಸುವ ಕಟ್ಟಡ ಹಾಗೂ ಅನಧಿಕೃತ ಕಟ್ಟಡಗಳ ನಿರ್ಮಾಣ ತಡೆಗೆ ಅನುಸರಿಸಬೇಕಾದ ಕ್ರಮದ ಕುರಿತು ಸರ್ವೋಚ್ಚ ನ್ಯಾಯಾಲಯ ನೀಡಿರುವ ಆದೇಶ ಜಾರಿಯಾದರೆ ಕಟ್ಟಡವನ್ನು ನಿರ್ದಾಕ್ಷಿಣ್ಯವಾಗಿ ಕೆಡವಬೇಕಾಗುತ್ತದೆ ಎಂದು ಸದಸ್ಯರು ಆತಂಕ ವ್ಯಕ್ತಪಡಿಸಿದರು.
ಸ್ಥಳೀಯ ಸಂಸ್ಥೆಗಳು ಮಂಜೂರು ಮಾಡಿದ ಕಟ್ಟಡ ಪರವಾನಗಿ ಉಲ್ಲಂಘಿಸಿ ನಿರ್ಮಿಸುವ ಕಟ್ಟಡಗಳು ಹಾಗೂ ಅನಧಿಕೃತ ಕಟ್ಟಡಗಳ ನಿರ್ಮಾಣ ತಡೆಗೆ ಅನುಸರಿಸಬೇ ಕಾದ ಕ್ರಮಗಳ ಕುರಿತು ಸರ್ವೋಚ್ಛ ನ್ಯಾಯಾಲಯ 2024 ಡಿಸೆಂಬರ್ 17ರಂದು ಆದೇಶ ಹೊರಡಿಸಿದೆ ಎಂದು ನಗರಸಭೆ ಕಾರ್ಯಪಾಲಕ ಎಂಜಿನಿಯರ್ ರಾಮೇಗೌಡ ಸಭೆಗೆ ಮಾಹಿತಿ ನೀಡಿದರು.ಈ ಆದೇಶದಂತೆ ಕಟ್ಟಡ ನಿರ್ಮಾಣ ಮಾಡುವಾಗ ನಗರಸಭೆಗೆ ನಕ್ಷೆ ಮಂಜೂರಾತಿ ನೀಡಬೇಕು. ಮಂಜೂರಾತಿ ನಕ್ಷೆಯಂತೆ ಕಟ್ಟಡ ನಿರ್ಮಾಣ ಮಾಡಿದ್ದರೆ ಮಾತ್ರ ಪರಿಶೀಲನೆ ನಡೆಸಿ, ಮುಕ್ತಾಯ/ವಾಸಯೋಗ್ಯ ಪ್ರಮಾಣ ಪತ್ರ ನೀಡಬೇಕಿದೆ. ನಂತರವಷ್ಟೇ ಅಗತ್ಯ ಸೇವೆಗಳಾದ ವಿದ್ಯುತ್, ನೀರು ಸರಬರಾಜು ಮತ್ತು ಒಳ ಚರಂಡಿ ಸಂಪರ್ಕ ನೀಡಲು ಕ್ರಮ ವಹಿಸಬೇಕಿದೆ. ವಾಣಿಜ್ಯ ಕಟ್ಟಡ ಅನಧಿಕೃತವಾಗಿದ್ದರೆ ವ್ಯಾಪಾರಕ್ಕೆ ಅನುಮತಿ ನೀಡಬಾರದು. ನಿಯಮ ಬಾಹಿರವಾಗಿ ಕಟ್ಟಡಗಳನ್ನು ನಿರ್ಮಿಸಿದರೆ ಕಾನೂನಿನ ಪ್ರಕಾರ ಅವನ್ನು ಕೆಡವಲು ನಗರಸಭೆಗೆ ಅಧಿಕಾರವಿದೆ ಎಂದು ತಿಳಿಸಿದರು.
ಅಧಿಕೃತ ಖಾತೆದಾರರು ತಮ್ಮ ನಿವೇಶನದಲ್ಲಿ ಮನೆ ಕಟ್ಟಲು ನಗರಸಭೆಯಿಂದ ಅನುಮತಿ ಪಡೆಯುವುದು ಕಡ್ಡಾಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಗ್ರಾಮಠಾಣಾ ವ್ಯಾಪ್ತಿಗೆ ಬಾರದ, ನಗರಸಭೆಯ ಪರವಾನಗಿ ನೀಡಲಾಗದ ಸಂದರ್ಭಗಳಲ್ಲಿ ಖಾತೆದಾರರು ಅನಧಿಕೃತವಾಗಿ ಕಟ್ಟಡ ನಿರ್ಮಿಸಿದರೆ ಕ್ರಮ ಕೈಗೊಳ್ಳುವುದು ಸವಾಲಿನ ಕೆಲಸ ಎಂದು ಸದಸ್ಯ ಎಂ.ಜಿ.ಶ್ರೀನಿವಾಸ್ ಅಭಿಪ್ರಾಯಪಟ್ಟರು.ನ್ಯಾಯಾಲಯದ ಆದೇಶ ಸರಿಯಾಗಿದ್ದರೂ ಸಹ ಯೋಜನಾ ಪ್ರಾಧಿಕಾರದ ತಾಂತ್ರಿಕ ಸಮಸ್ಯೆಗಳಿಗೆ ನಗರಸಭೆ ಹೊಣೆಗಾರರಾಗಬೇಕಿದೆ. ಈ ದಿಸೆಯಲ್ಲಿ ನಗರ ಸಭೆ ವ್ಯಾಪ್ತಿಗೆ ಬರುವ ನಿವೇಶನಗಳಿಗೆ ಪರವಾನಗಿ ನೀಡಲು, ಕಾಯ್ದೆಗೆ ಮಾರ್ಪಾಟು ತರಬೇಕಿದ್ದು, ಈ ಬಗ್ಗೆ ನಿಯೋಗ ಸರ್ಕಾರವನ್ನು ಒತ್ತಾಯಿಸಬೇಕಿದೆ ಎಂದು ಸಲಹೆ ನೀಡಿದರು.
ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಎಚ್.ಎಸ್. ಶಿವಶಂಕರ್, ನಮ್ಮಲ್ಲಿಯ ತೊಂದರೆಗಳಿಂದಪರವಾನಗಿ ನೀಡದಿದ್ದರೆ ಖಾತೆ ಹೊಂದಿರುವವರು ಅನಧಿಕೃತವಾಗಿ ಕಟ್ಟಡ ನಿರ್ಮಿಸಲಿದ್ದಾರೆ. ಇದನ್ನು ತಡೆಯುವುದು ಕಷ್ಟಸಾಧ್ಯವಾಗಲಿದೆ. ಕಾನೂನು ಬದ್ದವಾಗಿ, ಕಟ್ಟಡ ನಿರ್ಮಾಣ ಮಾಡಲು ಪೂರಕವಾಗಿ ಪರವಾನಗಿ ನೀಡಲು ಅನುಕೂಲ ವಾಗುವಂತೆ ಸರ್ಕಾರದ ಮಟ್ಟದಲ್ಲಿ ತೀರ್ಮಾನ ಕೈಗೊಳ್ಳಬೇಕಿದೆ ಎಂದರು.
ನಗರಸಭೆಯಲ್ಲಿ ಪರವಾನಗಿ ನೀಡಲು ಸರ್ಕಾರದ ಮಾನದಂಡ ಅನುಸರಿಸಲಾಗುತ್ತಿತ್ತು. ಸದಸ್ಯರ ಅಭಿಪ್ರಾಯಗಳನ್ನು ಸರ್ಕಾರದ ಗಮನಕ್ಕೆ ತರುವುದು ಸೂಕ್ತ ಎಂದು ಪೌರಾಯುಕ್ತ ಕಾರ್ತಿಕೇಶ್ವರ್ ಅಭಿಪ್ರಾಯಪಟ್ಟರು.ನಗರೋತ್ಥಾನ ಕಾಮಗಾರಿ ಮಾಹಿತಿ ಕೋರಿಕೆ:
ನಗರಸಭೆಗೆ ನಗರೋತ್ಥಾನ ಅನುದಾನ ಬಂದಿದ್ದರೂ, ರಸ್ತೆ ಹಾಗೂ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಅನುದಾನ ಬಿಡುಗಡೆ ಹಾಗೂ ನಿರ್ಲಕ್ಷ್ಯ ವಹಿಸುವ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರೂ ಕ್ರಮ ವಹಿಸುತ್ತಿಲ್ಲ. ನಗರೋತ್ಥಾನದ ಕೆಲಸಗಳು ಎಷ್ಟಾಗಿವೆ ಎನ್ನುವುದರ ಬಗ್ಗೆ ಮಾಹಿತಿ ನೀಡಿ ಎಂದು ಸದಸ್ಯ ಶಿವ ಕೇಳಿದರು.ಈಗಿರುವ ಗುತ್ತಿಗೆದರರು ಕಾಮಗಾರಿಗಳನ್ನು ವಿಳಂಬ ಮಾಡುತ್ತಿರುವ ಬಗ್ಗೆ ನೋಟಿಸ್ ನೀಡಲಾಗಿದೆ. ಈಗ ಬೇರೆ ಟೆಂಡರ್ ಕರೆದರೆ ಹೆಚ್ಚಿನ ಯೋಜನಾ ವೆಚ್ಚವಾಗಲಿದೆ. ಈ ದಿಸೆಯಲ್ಲಿ ಗುತ್ತಿಗೆದಾರರ ಮೇಲೆ ಒತ್ತಡ ಹಾಕಿ ಕೆಲಸ ಮಾಡಿಸಲಾಗುತ್ತಿದ್ದು, ಕಾಮಗಾರಿ ಮುಂದುವರೆಸುವ ಬಗ್ಗೆ ಗುತ್ತಿಗೆದಾರರು ಲಿಖಿತವಾಗಿ ಸಮಜಾಯಿಷಿ ನೀಡಿದ್ದಾರೆ ಎಂದು ಎಂಜಿನಿಯರ್ ರಾಮೇಗೌಡ ತಿಳಿಸಿದರು.
ಇತ್ತೀಚೆಗೆ ಕೆಲವು ಸಂಘಟನೆಗಳು ನಗರಸಭೆ ಕಾರ್ಯವೈಖರಿ, ಭ್ರಷ್ಟಾಚಾರದ ಬಗ್ಗೆ ಪ್ರತಿಭಟನೆ ನಡೆಸಿ ದೂರು ನೀಡಿವೆ. ಇದು ನಗರಸಭೆಗೆ ಕಳಂಕ, ಅಧಿಕಾರಿಗಳು ಮಾಡುವ ಕೆಲಸಕ್ಕೆ ಎಲ್ಲರೂ ಹೊಣೆಯಾಗುತ್ತಾರೆ. ಯಾವುದೇ ಕೆಲಸ ವಿಳಂಬವಾಗದಂತೆ, ಭ್ರಷ್ಟಾಚಾರಕ್ಕೆ ಆಸ್ಪದೆ ನೀಡದಂತೆ ಅಧಿಕಾರಿಗಳು ಕೆಲಸ ಮಾಡಬೇಕಿದೆ ಎಂದು ಸದಸ್ಯ ಟಿ.ಎನ್.ಪ್ರಭುದೇವ್ ಹೇಳಿದರು.ನಗರಸಭೆಯಲ್ಲಿ ಮೂರು ತಿಂಗಳಲ್ಲಿ 4865 ಅರ್ಜಿಗಳು ಬಂದಿದ್ದು,3675 ಅರ್ಜಿಗಳು ವಿಲೇವಾರಿಯಾಗಿವೆ. ಸಂಘಟನೆಗಳ ಮುಖಂಡರ ಅರೋಪ ವೈಯಕ್ತಿಕವಾಗಿದ್ದು, ಇದರಲ್ಲಿ ಯಾವುದೇ ಹುರಳಿಲ್ಲ. ಏಪ್ರಿಲ್ ತಿಂಗಳಲ್ಲಿ ತೆರಿಗೆ ಸಂಗ್ರಹ ₹4 ಕೋಟಿ ಆಗಿದೆ. ಸಣ್ಣಪುಟ್ಟ ಲೋಪ ಹೊರತುಪಡಿಸಿದರೆ ಯಾವುದೇ ನಿರ್ಲಕ್ಷ್ಯ ವಹಿಸುತ್ತಿಲ್ಲ ಎಂದು ಪೌರಾಯುಕ್ತ ಪ್ರತಿಕ್ರಿಯಿಸಿದರು.ಕೊಂಗಾಡಿಯಪ್ಪ ಪ್ರತಿಮೆ ವಿಳಂಬ:
ಕೊಂಗಾಡಿಯಪ್ಪ ಪ್ರತಿಮೆ ಸ್ಥಾಪನೆಗೆ ವಿಳಂಬ ಸರಿಯಲ್ಲ ಎಂದು ಸದಸ್ಯರು ಗಮನ ಸೆಳೆದರು. ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದು, ಪ್ರಕ್ರಿಯೆ ನಡೆಯುತ್ತಿವೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್.ರವಿಕುಮಾರ್ ತಿಳಿಸಿದರು.ಮಳೆಯಿಂದಾಗಿ ಚರಂಡಿ ಅವ್ಯವಸ್ಥೆಗಳಾಗಿದ್ದು, ಕ್ರಮ ವಹಿಸುವಂತೆ ಸದಸ್ಯ ಆನಂದ್ ಒತ್ತಾಯಿಸಿದರು. ನಗರಸಭೆ ಉಪಾಧ್ಯಕ್ಷ ಎಂ.ಮಲ್ಲೇಶ್ ಇತರರಿದ್ದರು.
ಫೋಟೋ-23ಕೆಡಿಬಿಪಿ4- ದೊಡ್ಡಬಳ್ಳಾಪುರ ನಗರಸಭೆ ಕಟ್ಟಡ.