ಭೂಸೇನಾ ನಿಗಮ ನಿರ್ಮಿಸಿದ ಕಟ್ಟಡಗಳು ಅರೆಬರೆ

| Published : Oct 28 2024, 12:49 AM IST / Updated: Oct 28 2024, 12:50 AM IST

ಭೂಸೇನಾ ನಿಗಮ ನಿರ್ಮಿಸಿದ ಕಟ್ಟಡಗಳು ಅರೆಬರೆ
Share this Article
  • FB
  • TW
  • Linkdin
  • Email

ಸಾರಾಂಶ

ಸಿಗರೇಟ್ ಸೇದುವುದು, ಮದ್ಯಪಾನ ಮಾಡುವುದು ಸೇರಿದಂತೆ ಇನ್ನೂ ಅನೇಕ ಅನೈತಿಕ ಚಟುವಟಿಕೆ ನಡೆಯುತ್ತಿವೆ

ಅಶೋಕ ಡಿ. ಸೊರಟೂರ ಲಕ್ಷ್ಮೇಶ್ವರ

ತಾಲೂಕಿನ ಹಲವಾರು ಕಡೆಗಳಲ್ಲಿ ಕೆಆರ್‌ಐಡಿಎಲ್‌ (ಈ ಹಿಂದಿನ ಭೂಸೇನಾ ನಿಗಮ) ನಿರ್ಮಾಣ ಮಾಡುತ್ತಿರುವ ಕಟ್ಟಡಗಳು ಅರೆಬರೆಯಾಗಿ ನಿಂತಿವೆ.

ತಾಲೂಕಿನಲ್ಲಿ ಕಳೆದ 8 ವರ್ಷಗಳಿಂದ ಆರಂಭಗೊಂಡಿರುವ ಅನೇಕ ಕಾಮಗಾರಿಗಳು ಅಪೂರ್ಣಗೊಂಡು ಅರ್ಧಕ್ಕೆ ನಿಂತಿದ್ದರೂ ಕೆಆರ್‌ಐಡಿಎಲ್‌ ಯೋಜನೆಗಳು ಯಾವ ಹಂತದಲ್ಲಿವೆ ಎಂಬುದನ್ನು ಕತ್ತಲೆಯಲ್ಲಿ ಇಟ್ಟಿರುತ್ತದೆ. ಇದಕ್ಕೆ ಪಟ್ಟಣದಲ್ಲಿ ಅರ್ಧಕ್ಕೆ ನಿಂತಿರುವ ಮೌಲಾನಾ ಅಜಾದ್ ಉರ್ದು ಶಾಲೆ, ದೂದ್ ನಾನಾ ದರ್ಗಾ ಸಮೀಪ ಪ್ರವಾಸಿಗರಿಗೆ ನಿರ್ಮಿಸಲು ಉದ್ದೇಶಿಸಿರುವ ಸಾರ್ವಜನಿಕ ಶೌಚಾಲಯ, ಸೋಮೇಶ್ವರ ದೇವಸ್ಥಾನದ ಹೊರಭಾಗದಲ್ಲಿ ಸಾರ್ವಜನಿಕ ಶೌಚಾಲಯ, ದೊಡ್ಡೂರಿನ ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆ, ಮುನಿಯನ ತಾಂಡಾ ಅಂಗನವಾಡಿ ಕಟ್ಟಡ, ಪಟ್ಟಣದಲ್ಲಿನ ಪಶು ವೈದ್ಯಕೀಯ ಆಸ್ಪತ್ರೆ... ಹೀಗೆ ಒಂದೇ ಎರಡೇ ಅನೇಕ ಕಾಮಗಾರಿಗಳು ಕಳೆದ 6-8 ವರ್ಷಗಳಿಂದ ಅರ್ಧಕ್ಕೆ ನಿಂತಿದ್ದರೂ ಕೇಳುವವರು ದಿಕ್ಕಿಲ್ಲದಂತಾಗಿದೆ.

ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಮೌಲಾನಾ ಆಜಾದ್ ಉರ್ದು ಶಾಲೆ ಕಟ್ಟಡ ಅಪೂರ್ಣ ಆಗಿದ್ದರಿಂದ ಅಲ್ಲಿ ಸಿಗರೇಟ್ ಸೇದುವುದು, ಮದ್ಯಪಾನ ಮಾಡುವುದು ಸೇರಿದಂತೆ ಇನ್ನೂ ಅನೇಕ ಅನೈತಿಕ ಚಟುವಟಿಕೆ ನಡೆಯುತ್ತಿವೆ.

ಜಿಪಂ ಕೆಡಿಪಿ ಸಭೆಗಳಲ್ಲಿ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ, ತಾಲೂಕು ಮಟ್ಟದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ನಡೆಯುವ ಪ್ರಗತಿ ಪರಿಶೀಲನಾ ಸಭೆಯಲ್ಲೂ ಈ ಇಲಾಖೆಯ ವಿಷಯ ಬಂದಾಗ ಮೃದು ಧೋರಣೆ ತೋರುತ್ತಿರುವುದು ಏಕೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಕೋಟ್ಯಂತರ ಅನುದಾನ ಸರ್ಕಾರದಿಂದ ಬಿಡುಗಡೆಯಾದರೂ ಕಾಮಗಾರಿಗಳು ಮಾತ್ರ ಅರ್ಧಕ್ಕೆ ನಿಂತು ಏಳೆಂಟು ವರ್ಷಗಳಾಗಿದ್ದರೂ ಯಾರೂ ಇವುಗಳ ಬಗ್ಗೆ ತಲೆಕೆಡಿಸಿಕೊಳ್ಳದಿರುವುದು ಸೋಜಿಗದ ಸಂಗತಿಯಾಗಿದೆ. ಜನಸಾಮಾನ್ಯರ ತೆರಿಗೆ ಹಣ ಹೇಗೆ ಪೋಲಾಗುತ್ತದೆ ಎಂಬುದಕ್ಕೆ ನಿಗಮದ ಕಾಮಗಾರಿಗಳೇ ಸಾಕ್ಷಿಯಾಗಿವೆ.

ಪಟ್ಟಣದಲ್ಲಿ ಕೆಆರ್‌ಐಡಿಎಲ್ ನಿಗಮವು ಅನೇಕ ಕಾಮಗಾರಿ ಕೈಗೆತ್ತಿಕೊಂಡಿದ್ದು, ಅವುಗಳನ್ನು ಅಪೂರ್ಣಗೊಳಿಸಿ ಹಲವು ವರ್ಷಗಳು ಕಳೆದಿದ್ದರೂ ಪೂರ್ಣಗೊಳಿಸುವ ಕಾರ್ಯ ಮಾಡುತ್ತಿಲ್ಲ. ಶೀಘ್ರ ಅಪೂರ್ಣಗೊಂಡ ಕಾಮಗಾರಿ ಪೂರ್ಣಗೊಳಿಸಬೇಕು ಇಲ್ಲದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಲಕ್ಷ್ಮೇಶ್ವರ ತಾಲೂಕು ಜೆಡಿಎಸ್‌ ಮುಖಂಡ ಝಾಕೀರ್ ಹುಸೇನ್ ಹವಾಲ್ದಾರ್ ತಿಳಿಸಿದ್ದಾರೆ.